Monday, March 20, 2017

ಶಿವಮೊಗ್ಗ: ಸರಳ ವಿವಾಹ (ಮಂತ್ರ ಮಾಂಗಲ್ಯ)

ಜಾತಿಮೀರಿ ಸರಳವಾಗಿ ಮದುವೆಯಾಗಲು ನಿರ್ಧರಿಸಿದ್ದ ಭಾಸ್ಕರ್ ಮತ್ತು ಚೈತ್ರಾ ಅವರಿಗೆ ಮಂತ್ರಮಾಂಗಲ್ಯದ ವಚನ ಬೋಧನೆ ಮಾಡುವ ಭಾಗ್ಯ ಕಳೆದ ಭಾನುವಾರ ನನಗೆ ಬಂದೊದಗಿತ್ತು.
ವಧುವರರನ್ನು ಹರಸಲು ನನ್ನ ಜತೆ ಬಾನುಮುಸ್ತಾಕ್ ಮತ್ತು ಮಲ್ಲಿಕಾರ್ಜುನ ಮೇಟಿ ಕೂಡಾ ಇದ್ದರು. ಭಾಸ್ಕರ್ ತಂದೆತಾಯಿ ಇನ್ನೂ ಮುನಿಸುಕೊಂಡಿದ್ದಾರೆ. ಅವರ ಕೊರತೆ ಕಾಡದಂತೆ ಭಾಸ್ಕರ್ ಅವರ ಮೇಸ್ಟ್ರು ಕೊಟ್ರಪ್ಪ ಹಿರೇಮಠ್ ಪತ್ನಿ ಜತೆ ಬಂದು ಮದುವೆ ನಡೆಸಿಕೊಟ್ಟರು. ಜತೆಗೆ ಪತ್ರಕರ್ತರಾದ ಟೆಲೆಕ್ಸ್ ರವಿಕುಮಾರ್ ಮತ್ತು ಅನಿತಾ ಹಾಗೂ ನಾಗೇಶ್ ಮೊದಲಾದವರ ಸ್ನೇಹಬಳಗ.
ಕಳೆದೆರಡು ವರ್ಷಗಳ ಅವಧಿಯಲ್ಲಿ ಕುವೆಂಪು ಹುಟ್ಟೂರಾದ ಶಿವಮೊಗ್ಗದಲ್ಲಿ ಅವರೇ ಹೇಳಿಕೊಟ್ಟಿರುವ ಮಂತ್ರಮಾಂಗಲ್ಯದ ಮದುವೆಗೆ ನಾನುಮೂರನೆ ಬಾರಿ ‘ಪುರೋಹಿತ’ನಾದೆ.
ಮೊದಲು ನನ್ನ ಯುವ ಪತ್ರಕರ್ತ ಮಿತ್ರ ಸುಬ್ರಹ್ಮಣ್ಯ ಮತ್ತು ನಂದಿನಿ ನಂತರ ಇನ್ನೊಬ್ಬ ಯುವಪತ್ರಕರ್ತ ಮಿತ್ರ ಪ್ರಶಾಂತ್ ಹುಲ್ಕೋಡ್ ಮತ್ತು ಮಂಜುಳಾ ಮಾಸ್ತಿಕಟ್ಟೆ, ಈಗ ಭಾಸ್ಕರ್ ಮತ್ತು ಚೈತ್ರಾ.
ಕುವೆಂಪು ನಮ್ಮನ್ನಗಲಿ ಹೋಗಿದ್ದಾರೆ ಎಂದು ಹೇಳಿದವರು ಯಾರು? ಕುವೆಂಪು ಹೇಳಿಕೊಟ್ಟಿರುವ ಆದರ್ಶಗಳ ಪಾಲನೆಯ ಮೂಲಕ ಈ ಯುವಕ-ಯುವತಿಯರು ಅವರನ್ನು ಮತ್ತೆಮತ್ತೆ ಜೀವಂತವಾಗಿಸುತ್ತಿದ್ದಾರೆ.
ಯಾವನೋ ಮತಿಗೆಟ್ಟವನು ಕುವೆಂಪು ಕವನವನ್ನು ಗೇಲಿಮಾಡಿದ ಎಂದು ಯಾಕೆ ತಲೆಕೆಡಿಸಿಕೊಳ್ಳುತ್ತೀರಿ. ಅಂತಹವರು ಕುವೆಂಪು ಬದುಕಿದ್ದಾಗಲೂ ಅವರನ್ನು ಕಾಡಿದ್ದರು, ಮುಂದೆಯೂ ಆ ಕೆಲಸ ಮಾಡುತ್ತಾರೆ. ಅಂತಹವರನ್ನು ಸಮೀಪದ ಕಸದಬುಟ್ಟಿಗೆ ಎಸೆದು ನಾವು ಕುವೆಂಪು ಎಂಬ ಮಹಾಗುರುವಿನ ಶಿಷ್ಯರಾಗೋಣ.


Friday, March 17, 2017

ದೆಹಲಿ ಜೆ.ಎನ್.ಯು

ಇಂದು ಸಂಜೆ ಜೆಎನ್ ಯುನಲ್ಲಿ ಒಂದು ಸಣ್ಣ ಭಾಷಣ, ಉಮಾಪತಿ ಮತ್ತು ರೇಣುಕಾ ಅವರ ಜತೆ ಸೆಲ್ಪಿ, ದೆಹಲಿಯಲ್ಲಿನ 'ಕನ್ನಡದ ರಾಯಭಾರಿ' ಪ್ರೊ.ಪುರುಷೋತ್ತಮ್ ಬಿಳಿಮಲೆಯವರ ಅಧ್ಯಕ್ಷತೆಯ ಕನ್ನಡ ಭಾಷಾ ಪೀಠಕ್ಕೆ ಭೇಟಿ. ಇಳಿಸಂಜೆ ಒಂದು ದೀರ್ಘ ಹರಟೆ.ದೆಹಲಿಯಲ್ಲಿ ಕಳೆದ ಹಳೆಯ ದಿನಗಳ ನೆನಪುಗಳ ಮೆರವಣಿಗೆ. ವಿಮಾನ ತಪ್ಪಿಹೋಗಬಹುದೆಂಬ ಆತಂಕದಲ್ಲಿ ಪ್ರೆಸ್ ಕ್ಲಬ್ ಗೆ ಹೋಗಲಾಗದ ಪರಿತಾಪ.

Sunday, March 5, 2017

ಭಾರತದಲ್ಲಿ ಮುದ್ರಣ ಮಾಧ್ಯಮ

ಮುದ್ರಣ ಮಾಧ್ಯಮವನ್ನು 'ಮುಳುಗುತ್ತಿರುವ ಹಡಗು' ಎಂದೇ ವಿಶ್ವದಾದ್ಯಂತ ಬಣ್ಣಿಸಲಾಗುತ್ತಿದೆ. ಭಾರತದಲ್ಲಿ ಮಾತ್ರ ಮುದ್ರಣ ಮಾಧ್ಯಮ ಶೇಕಡಾ ೮ ದರದಲ್ಲಿ ಬೆಳೆಯುತ್ತಿದೆ.
ಇಲ್ಲಿನ ಭಾಷಾ ಮಾಧ್ಯಮದ ವಿಸ್ತಾರ ಮತ್ತು ನವಸಾಕ್ಷರರ ಮೊದಲ ಓದು ಭಾಷಾಮಾಧ್ಯಮದಿಂದಲೇ ಶುರುವಾಗುವುದು ಇದಕ್ಕೆ ಕಾರಣಗಳು. ಆದರೆ ಭಾರತದಲ್ಲಿ ಕೂಡಾ ಇಂಗ್ಲೀಷ್ ಮುದ್ರಣ ಮಾಧ್ಯಮ ಅದರ ಮೇಲ್ಮಜಲನ್ನು ಮುಟ್ಟಿಬಿಟ್ಟಿರುವಂತೆ ಕಾಣುತ್ತಿದೆ. ಪ್ರಪಂಚದಾದ್ಯಂತ ನಡೆದಿರುವಂತೆ ಇಲ್ಲಿಯೂ ಇಂಗ್ಲೀಷ್ ಪತ್ರಿಕೆಗಳ ಓದುಗರು Online ಆಗುತ್ತಿರುವುದು ಇದಕ್ಕೆ ಕಾರಣ. ಇದರಲ್ಲಿ ಬಹುಸಂಖ್ಯೆಯಲ್ಲಿರುವವರು ಯುವ ಓದುಗರು. ಈ ಓದುಗ ವರ್ಗವನ್ನು ಆಕರ್ಷಿಸಲು ಇಂಗ್ಲೀಷ್ ದಿನಪತ್ರಿಕೆಗಳು ಕೂಡಾ ಜನಪ್ರಿಯ ಸಿನೆಮಾ, ಲೈಫ್ ಸ್ಟೈಲ್, ಸೆಕ್ಸ್, ರಿಲೇಷನ್ಸ್, ಊಟ-ತಿಂಡಿ, ಹೊಟೇಲ್-ಮಾಲ್ ಗಳ ಬಗೆಗಿನ ಸುದ್ದಿಯ ಪ್ರಮಾಣವನ್ನು ಹೆಚ್ಚಿಸುತ್ತಿವೆ.
ಈ ಹಿನ್ನೆಲೆಯಲ್ಲಿ 'ದಿ ಹಿಂದೂ' ಪತ್ರಿಕೆಯನ್ನು ಓದುತ್ತಿದ್ದಾಗಲೆಲ್ಲ ' ಇದು ಮುಳುಗುತ್ತಿರುವ ಹಡಗನ್ನು ಉಳಿಸಲು ಹೋರಾಡುತ್ತಿರುವ ವಯಸ್ಸಾದ ನಾವಿಕ' ಎಂದು ಅನಿಸುತ್ತಲೇ ಇತ್ತು. ಇತ್ತೀಚೆಗೆ ವಿನ್ಯಾಸದ ಆವರಣ ಮಾತ್ರವಲ್ಲ ಮಾಹಿತಿಯ ಹೂರಣವನ್ನೂ ಬದಲಾಯಿಸಿಕೊಂಡು, ವಿಸ್ತರಿಸಿಕೊಂಡು ಬರುತ್ತಿರುವ 'ದಿ ಹಿಂದು' ಕಂಡು ಖುಷಿಯಾಗುತ್ತಿದೆ, ಅದರ ಬಗ್ಗೆ ಪ್ರೀತಿ ಹೆಚ್ಚಾಗಿದೆ. ಭರವಸೆಯ ಸಣ್ಣ ಬೆಳಕು ಕಾಣತೊಡಗಿದೆ. ಇಂದಿನ ' ದಿ ಹಿಂದೂ' ಪತ್ರಿಕೆಯ ಪುಟಗಳ ಸಂಖ್ಯೆ ೫೨. ಜಾಹೀರಾತು ಪುಟಗಳ ಸಂಖ್ಯೆ ಅತಿಕಡಿಮೆ. ಪೂರ್ತಿ ಓದಲು ಇಡೀ ಭಾನುವಾರ ಬೇಕು.
ನೀವು ಯಾವ ಪತ್ರಿಕೆ ಓದಬೇಕು, ಓದಬಾರದು ಎನ್ನುವ ಸಲಹೆಯನ್ನು ನೀಡುವ ಅಧಿಕಪ್ರಸಂಗತನ ನಾನು ಮಾಡುವುದಿಲ್ಲ. ಆದರೆ ನೀವು ಓದುತ್ತಿರುವುದನ್ನು ಓದಿ, ಓದುವ ಪತ್ರಿಕೆಗಳಲ್ಲಿ 'ದಿ ಹಿಂದೂ' ಇಲ್ಲದೆ ಇದ್ದರೆ ದಯವಿಟ್ಟು ಅದನ್ನ ಸೇರಿಸಿಕೊಳ್ಳಿ. ಇದು ನಾವು ಬಯಸುವ ಮಾಧ್ಯಮವನ್ನು, ಮಾಧ್ಯಮ ಧರ್ಮವನ್ನು ಉಳಿಸಲು, ಬೆಳೆಸಲು ನಮ್ಮ ಕೊಡುಗೆಯಾಗಬಹುದು.

Saturday, March 4, 2017

ಭಾರತದಲ್ಲಿ ದೇಶದ್ರೋಹ, ದೇಶಪ್ರೇಮ

ಭಾರತದಲ್ಲಿರಲು ಭಯವಾಗುತ್ತಿದೆ ಎಂದು ನಾನು ಹೇಳಿರುವುದು ನಿಜ. ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದೇಶಾದ್ಯಂತ ನಡೆಯುತ್ತಿರುವ ದಾಳಿಯ ಅನುಭವ ವೈಯಕ್ತಿಕವಾಗಿ ನನಗೂ ಆಗುತ್ತಿದೆ. ನಿನ್ನೆ ಅಂಬೇಡ್ಕರ್ ವಾದಿ ಡಾ.ಕೀರ್ವಾಲೆಯವರ ಹತ್ಯೆ ನಡೆದಿದೆ, ಪಿಣರಾಯ್ ತಲೆಕಡಿಯಬೇಕೆಂದು ಇನ್ನೊಬ್ಬ ತಲೆಕೆಟ್ಟವನು ಹೇಳಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲ್ ಗಳು ಹುಚ್ಚುನಾಯಿಗಳಂತೆ ಅಭಿಪ್ರಾಯ ವಿರೋಧಿಗಳ ಮೇಲೆ ಮುಗಿಬೀಳುತ್ತಿದ್ದಾರೆ.
ಪಿಣಾರಾಯ್ ವಿಜಯನ್ ಭೇಟಿಯ ಪರವಾಗಿ ನಾನು ಸ್ಟೇಟಸ್ ಹಾಕಿದರೆ ನನ್ನನು ಗುಂಡಿಕ್ಕಿ ಸಾಯಿಸಬೇಕು ಎಂದು ಒಬ್ಬ ಬೆದರಿಕೆ ಹಾಕುತ್ತಾನೆ, ಇನ್ನೊಂದು ಸಂದರ್ಭದಲ್ಲಿ ಮತ್ತೊಬ್ಬ ಆ್ಯಸಿಡ್ ಹಾಕಿ ಎಂದು ಹೇಳುತ್ತಾನೆ. ಇದರ ವಿರುದ್ಧ ಪೊಲೀಸರಿಗೆ ದೂರು ನೀಡಲು ಹೊರಟರೆ ಅಭಿವ್ಯಕ್ತಿ ಸ್ವಾತಂತ್ರ್ಯದ.ಹರಣ ಮಾಡಲಾಗುತ್ತಿದೆ ಎಂದು ನನ್ನ ವಿರುದ್ದವೇ ಅಪಪ್ರಚಾರ ಮಾಡಲಾಗುತ್ತದೆ, ವಿಧಾನಸೌಧದಲ್ಲಿ ಕೂತು ಅಧಿಕಾರದ ದುರುಪಯೋಗ ಮಾಡುತ್ತಿದ್ದಾನೆ ಎಂದು ಆರೋಪ ಮಾಡುತ್ತಾರೆ. ನನ್ನ ಪ್ರತಿಯೊಂದು ಮಾತನ್ನು ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ. ನನ್ನ ವಿರುದ್ಧ ನನ್ನವರನ್ನೇ ಎತ್ತಿ ಕಟ್ಟುವ ಷಡ್ಯಂತ್ರ ಹೆಣೆಯಲಾಗುತ್ತಿದೆ.
ಇವೆಲ್ಲ ಒಂದು ರೀತಿಯಲ್ಲಿ ನನ್ನನ್ನು ಅಸಹಾಯಕ ಸ್ಥಿತಿಗೆ ತಳ್ಳಿರುವುದು ನಿಜ. ಈ ಭಯ ವೈಯಕ್ತಿಕ ಸಾವಿನದಲ್ಲ, ಸಾವನ್ನು ಹೊಸ್ತಿಲಲ್ಲಿ ಕೂರಿಸಿ ಬದುಕುತ್ತಿರುವವನು ನಾನು. ಇದು ಭಯಭೀತ ಸಮಾಜವನ್ನು ಕಾಣುತ್ತಿರುವಾಗ ಹುಟ್ಟಿಕೊಂಡ ಭಯ. ದುರ್ಜನರ ಆರ್ಭಟವನ್ನು ಮತ್ತು ಸಜ್ಜನರ ಮೌನವನ್ನು ಕಾಣುತ್ತಿರುವಾಗ ಹುಟ್ಟಿಕೊಂಡ ಭಯ.
ಈ ಹಿನ್ನೆಲೆಯಲ್ಲಿ ನಾನು ಪಾವಗಡದಲ್ಲಿ ಮಾತನಾಡುತ್ತಾ 'ಇಂತಹ ಭಾರತದಲ್ಲಿರಲು ನನಗೆ ಭಯವಾಗುತ್ತಿದೆ' ಎಂದು ಹೇಳಿದ್ದೆ. ಈ ಮಾತನ್ನು ಮೊನ್ನೆ ಮಂಗಳೂರಿನಲ್ಲಿಯೂ ಹೇಳಿದ್ದೇನೆ. ಇದರ ಜತೆ '' ಭಯಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ನಾವು ಮುಂದಾಗಬೇಕು. ಇದು ನಮ್ಮ ದೇಶ, ಇಲ್ಲಿ ಚಾರ್ವಾಕರಿಗೂ ಚಿಂತಕರ ಚಾವಡಿಯಲ್ಲಿ ಜಾಗ ಇತ್ತು, ಅವರ ತಲೆ ಕಡಿಯಬೇಕು ಎಂದು ಯಾರೂ ಹೇಳಿರಲಿಲ್ಲ. ಭಯಮುಕ್ತವಾದ ಮತ್ತು ಅಭಿಪ್ರಾಯಭೇದಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವಾತಾವರಣ ಇರುವ ಭಾರತವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ, ಯಾಕೆಂದರೆ ನಮಗಿರುವುದು ಒಂದೇ ಭಾರತ'' ಎಂದು ನಾನು ಪಾವಗಡವೂ ಸೇರಿದಂತೆ ರಾಜ್ಯದ ಹಲವಾರು ಕಡೆಗಳಲ್ಲಿ ಭಾಷಣ ಮಾಡಿದ್ದೆ.
ಇತ್ತೀಚಿನ.ದಿನಗಳಲ್ಲಿ ನನ್ನ ಭಾಷಣ-ಬರವಣಿಗೆಗಳ ಕೆಲವು ಭಾಗಗಳನ್ನಷ್ಟೇ ಆಯ್ದು ವಿವಾದವನ್ನಾಗಿ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿರುವುದರಿಂದ ಈ ಮಾತುಗಳನ್ನು ಹೇಳಬೇಕಾಯಿತು.
ನನ್ನ ಪ್ರಕಾರ 'ಭ್ರಷ್ಟಾಚಾರ, ಕೋಮುವಾದ ಮತ್ತು ಜಾತಿವಾದ ಎನ್ನುವುದು ದೇಶದ್ರೋಹ. ಪ್ರಾಮಾಣಿಕತೆ, ಜಾತ್ಯತೀತತೆ ಮತ್ತು ಜಾತಿನಾಶ ಎನ್ನುವುದು ದೇಶಪ್ರೇಮ

Thursday, March 2, 2017

ಉತ್ತರ ಪ್ರದೇಶ ಚುನಾವಣೆ 2017

ಉತ್ತರಪ್ರದೇಶದ ಚುನಾವಣೆ ಕೊನೆಯ ಚರಣದಲ್ಲಿದೆ. 2002ರಿಂದ 2012ರ ವರೆಗೆ (2002,2007 ಮತ್ತು 2012ರ ವಿಧಾನಸಭಾ ಚುನಾವಣೆ, 2004 ಮತ್ತು 2009ರ ಲೋಕಸಭಾ ಚುನಾವಣೆ) ಉತ್ತರಪ್ರದೇಶದಲ್ಲಿ ನಡೆದಿರುವ ಎಲ್ಲ ಚುನಾವಣೆಗಳ ಪ್ರತ್ಯಕ್ಷದರ್ಶಿ ವರದಿಯನ್ನು ನಾನು ‘ಪ್ರಜಾವಾಣಿ’ಗಾಗಿ ಮಾಡಿದ್ದೆ. 
ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ನಾನು 25 ದಿನ ಒಂದು ದಿನವೂ ತಪ್ಪಿಸಿಕೊಳ್ಳದೆ ಸಮೀಕ್ಷಾ ವರದಿ ಮಾಡಿದ್ದೆ. ಹದಿನಾಲ್ಕು ವರ್ಷಗಳ ಕಾಲ ನಾನು ಬರೆದ ಅಂಕಣಗಳಲ್ಲಿ ಯಾವುದಾದರೂ ಒಂದು ರಾಜ್ಯದ ಬಗ್ಗೆ ಅತೀಹೆಚ್ಚು ಬರೆದಿದ್ದರೆ ಆ ರಾಜ್ಯ ಉತ್ತರಪ್ರದೇಶ. ಅಂಕಣಗಳು ಮತ್ತು ಸಮೀಕ್ಷಾ ವರದಿಗಳ ಲೆಕ್ಕ ಹಾಕಿದರೆ ಡಬ್ಬಲ್ ಸೆಂಚುರಿಗೆ ಹತ್ತಿರ ಹೋಗಬಹುದು.
ಕಾನ್ಪುರದ ಬೀಗ... ಆಗ್ರಾದ ತಾಜಮಹಲ್... ಮೊರದಾಬಾದ್ ನ 'ಪೀತಲ್ ನಗರಿ'... ಮೇರಠ್ ನ ಕಬ್ಬು-ಬೆಲ್ಲ... ಅಯೋಧ್ಯೆಯ ಡೇರೆಯಲ್ಲಿ ಕೂತಿದ್ದ ರಾಮ... ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ರಾಮಮಂದಿರದ ಇಟ್ಟಿಗೆಗಳ ರಾಶಿ... ಗಾಜಿಪುರದ ಬಾಹುಬಲಿಗಳು...ಪಿಲಿಬಿಟ್ ನಲ್ಲಿ ಹರಿಪ್ರಸಾದ್ ಚೌರಾಸಿಯಾ ಊದುವ ಕೊಳಲು ತಯಾರಿಸುತ್ತಿರುವ ಬಡ ಮುಸ್ಲಿಮ್ ಕುಶಲಕರ್ಮಿಗಳು....ಈಟಾವಾದ ಅಂತರರಾಷ್ಟ್ರೀಯ ಮಟ್ಟದ ಹಾಕಿ ಮೈದಾನ... ಗೋರಖ್ ಪುರದ ಸೊಳ್ಳೆಗಳು, ಮಿರ್ಜಾಪುರವನ್ನು ಕಾಡುತ್ತಿರುವ ಪೂಲನ್ ದೇವಿ “ಭೂತ”.. ಕಾಶಿಯ ಮೂಕ ವಿಶ್ವನಾಥ... ನಾರುತ್ತಿರುವ ಗಂಗೆಯಲ್ಲಿ ದೋಣಿ ಓಡಿಸುತ್ತಿದ್ದ ಪಪ್ಪು ಬೋಟ್ ಮೆನ್... ರಾಹುಲ್ ಸಾಂಕೃತಾಯನ ಹುಟ್ಟಿದ ಅಜಮ್ ಘಡ್ ನಲ್ಲಿ ಅಬುಸಲೇಂ ಕಟೌಟ್, ಲಖನೌದಲ್ಲಿ ಸುತ್ತುತ್ತಿದ್ದ ಮುಸ್ಲಿಮರ ‘ಅಟಲ್ ರಥ’
ಸುತ್ತಾಡಿದ ಊರು, ಮಾತನಾಡಿಸಿದ ಜನ, ಊಟ-ತಿಂಡಿ,ಬಸ್, ಕಾರು, ರೈಲು, ಚಾಲಕರು, ರೂಮ್ ಬಾಯ್ ಗಳು, ಅನುಭವಿಸಿದ ಖುಷಿ, ಭಯ, ಒತ್ತಡ ಎಲ್ಲವನ್ನೂ ಇಂದು ಕೂತು ನೆನಪುಮಾಡಿಕೊಂಡಾಗ ಸಾರ್ಥಕತೆಯ ಭಾವ ಮೂಡುತ್ತದೆ.
ದೇಶದ ರಾಜಕಾರಣ ಎತ್ತುವ ಮುಖ್ಯ ಪ್ರಶ್ನೆಗಳಿಗೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ಉತ್ತರ ಇದೆ ಎಂದು ನಾನು ನಂಬಿದವನು. ಈ ಹಿನ್ನೆಲೆಯಲ್ಲಿ ಕನ್ನಡದ ಪತ್ರಿಕೆಗಳು ಮತ್ತು ಚಾನೆಲ್ ಗಳಲ್ಲಿ ಕಳೆದ ಕೆಲವು ದಿನಗಳಿಂದ ನಾನು ಹುಡುಕುತ್ತಿದ್ದ ಉತ್ತರಪ್ರದೇಶ ಕಾಣದೆ ಇದ್ದಾಗ ಹಳೆಯ ರಿಪೋರ್ಟಿಂಗ್ ಡೈರಿ ತೆರೆದು ಪುಟ ತಿರುಗಿಸಿದೆ. ನೆನಪುಗಳು ನುಗ್ಗಿಬಂತು.

Sunday, February 26, 2017

ಇದ್ಯಾವ ಮಾಧ್ಯಮ ಧರ್ಮ

ನಾನು ಫೇಸ್ ಬುಕ್ ನಲ್ಲಿ ಬರೆದುದನ್ನು ಹೇಗೆ ತಿರುಚಲಾಗುತ್ತಿದೆ ಎನ್ನುವುದಕ್ಕೆ 'ವಿಶ್ವವಾಣಿ' ಯ ಈ ವರದಿ ಸಾಕ್ಷಿ. ನರೇಂದ್ರ ಮೋದಿ ರಾಜೀನಾಮೆ ಕೊಡಬೇಕೆಂದು ಹೇಳಿದ್ದನ್ನು ಎಡಿಟ್ ಮಾಡಲಾಗಿದೆ.('ವಿವಾದಾತ್ಮಕ ಸ್ಟೇಟಸ್ 'ಬಾಕ್ಸ್ ಮತ್ತು ನನ್ನ FB ಸ್ಟೇಟಸ್ ನೋಡಿ)
ಇದು ಯಾವ ಮಾಧ್ಯಮಧರ್ಮ ವಿಶ್ವೇಶ್ವರ ಭಟ್ರೆ?


Tuesday, September 27, 2016

ಅಭಿನಂದನೆಗಳು..

ನನ್ನ ಊರು ನನ್ನ ಜನರ ಬಗ್ಗೆ ಯಾರೂ ನಮ್ಮವರು ಸರಿಯಾಗಿ ಬರೆಯುತ್ತಲೇ ಇಲ್ಲವಲ್ಲಾ ಎಂಬ ನನ್ನ ಕೊರಗನ್ನು ನಿವಾರಿಸಿದ್ದು ಗೆಳತಿ ನಾಗವೇಣಿ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಾಗಿ ಅಭಿನಂದನೆಗಳು. ಇದು ವಡ್ಡರ್ಸೆಯವರ ಶಿಷ್ಯಕೋಟಿಯಲ್ಲಿ ಒಬ್ಬರಿಗೆ ಸಂದ ಪ್ರಶಸ್ತಿಯೂ ಹೌದು. ಪ್ರಶಸ್ತಿಯ ಬಹುಪಾಲು ಸಲ್ಲಬೇಕಾಗಿರುವುದು ನಾಗವೇಣಿಯ ಎದೆಯೊಳಗೆ ಕೂತು ಕತೆ ಬರೆಯುತ್ತಿದ್ದ ನಾಗವೇಣಿಯ ಅಮ್ಮನಿಗೆ. ಅರೆಗ್ ಲಾ ಸೊಲ್ಮೆಲು.
ಜಗದೀಶ್ ಕೊಪ್ಪ, ಹನುಮಂತಯ್ಯ, ಮೋಹನ್ ಸೇರಿದಂತೆ ಎಲ್ಲರಿಗೂ ಅಭಿನಂದನೆಗಳು. 
ಇದರ ಜತೆ ಪ್ರಶಸ್ತಿ ವಾಪಸು ನೀಡುವ ದುರ್ದಿನಗಳು ಬಾರದಿರಲಿ ಎಂದೂ ಆಶಿಸುತ್ತೇನೆ

Janasri News | Ola Suli - Supreme Aadesha Bisituppa - part 2

Janasri News | Ola Suli - Supreme Aadesha Bisituppa - part 3

Saturday, September 24, 2016

ಕಾವೇರಿ ವಿವಾದ ಮುಂದೇನಾಗಬಹುದು?

ಮುಂದೇನಾಗಬಹುದು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿಮಾನಿಗಳು ಆತಂಕದಿಂದ, ವಿರೋಧಿಗಳು ಖುಷಿಯಿಂದ ಕೇಳುತ್ತಿದ್ದಾರೆ. ಅಭಿಮಾನಿಗಳ ಆತ್ಮಸಂತೋಷಕ್ಕಾಗಿ, ವಿರೋಧಿಗಳ ಆತ್ಮಶಾಂತಿಗಾಗಿ ನನಗೆ ಹೊಳೆದದ್ದನಿಷ್ಟು ಹೇಳುತ್ತಿದ್ದೇನೆ.
ಸಾಧ್ಯತೆ 1. ಉದ್ದೇಶಪೂರ್ವಕವಾಗಿ ಆದೇಶ ಪಾಲನೆ ಮಾಡದಿರುವ ನಿರ್ಧಾರವಾಗಿರುವ ಕಾರಣ ಇದು ನ್ಯಾಯಾಂಗ ನಿಂದನೆ ಆಗಲಾರದು ಎನ್ನುವುದನ್ನು ಸುಪ್ರೀಂಕೋರ್ಟ್ ಒಪ್ಪಿಕೊಳ್ಳಬಹುದು. ಕೇಂದ್ರ ಸರ್ಕಾರವೂ ಕರ್ನಾಟಕದ ರಕ್ಷಣೆಗೆ ನಿಲ್ಲಬಹುದು. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಕರ್ನಾಟಕ ಸರ್ಕಾರದ ನಡವಳಿಕೆಯನ್ನು ಸ್ವೀಕರಿಸಿ ತನ್ನ ಆದೇಶದ ಮಾರ್ಪಾಟಿಗೆ ಒಪ್ಪಿಕೊಳ್ಳಬಹುದು.
ಸಾಧ್ಯತೆ 2. ಸುಪ್ರೀಂಕೋರ್ಟ್ ಯಾವ ರಿಯಾಯಿತಿಯನ್ನು ತೋರಿಸದೆ ಕೇವಲ ಸಂವಿಧಾನದ 141 ಮತ್ತು 142ನೇ ಪರಿಚ್ಛೇದದ ಆಶಯವನ್ನಷ್ಟೇ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಮತ್ತು ಮುಖ್ಯಕಾರ್ಯದರ್ಶಿಗಳ ವಿರುದ್ಧ ನ್ಯಾಯಾಂಗ ನಿಂದನೆಯ ಪ್ರಕ್ರಿಯೆಗೆ ಚಾಲನೆ ನೀಡಬಹುದು.
ನ್ಯಾಯಾಂಗನಿಂದನೆ ಪ್ರಕಿಯೆ ಪ್ರಾರಂಭವಾದರೆ ಏನಾಗಬಹುದು?
ಸಾಧ್ಯತೆ 1: ಮುಖ್ಯಮಂತ್ರಿಗಳು ಮತ್ತು ಮುಖ್ಯಕಾರ್ಯದರ್ಶಿಯವರು ತಮ್ಮ ಮುಂದೆ ಹಾಜರಾಗಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಬಹುದು. ಇಬ್ಬರೂ ಆದೇಶಕ್ಕೆ ತಲೆಬಾಗಿ ಆದೇಶ ಉಲ್ಲಂಘನೆಗಾಗಿ ಕ್ಷಮೆಕೇಳಿ ಪಾರಾಗಬಹುದು. (ಹಿಂದೆಲ್ಲ ನಡೆದಿರುವಂತೆ)
ಸಾಧ್ಯತೆ 2: ಕ್ಷಮೆ ಕೇಳದೆ ವಿಧಾನಮಂಡಲ ಕೈಗೊಂಡಿರುವ ಸಾಮೂಹಿಕ ನಿರ್ಣಯಕ್ಕೆ ಬದ್ಧತೆಯನ್ನು ಘೋಷಿಸಬಹುದು.
ಕ್ಷಮೆ ಕೇಳಿ ತಪ್ಪೊಪ್ಪಿಕೊಳ್ಳದೆ ಆದೇಶದ ಉಲ್ಲಂಘನೆ ಮಾಡಿದರೆ ಏನಾಗಬಹುದು?
- ಸುಪ್ರೀಂಕೋರ್ಟ್ ಸಂವಿಧಾನದ 356ನೇ ಪರಿಚ್ಛೇದದಡಿ ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸುಮಾಡಿ, ಅದರ ಮೂಲಕ ನೀರು ಬಿಡಬೇಕೆಂಬ ತನ್ನ ಆದೇಶದ ಅನುಷ್ಠಾನಕ್ಕೆ ಮುಂದಾಗಬಹುದು.
- ರಾಷ್ಟ್ರಪತಿ ಆಳ್ವಿಕೆಯ ಹೇರಬೇಕಾದರೆ ಅಂತಿಮವಾಗಿ ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದ ಕೇಂದ್ರ ಸಚಿವ ಸಂಪುಟ ತೀರ್ಮಾನಕೈಗೊಳ್ಳಬೇಕಾಗುತ್ತದೆ.
- ಅಂತಹದ್ದೊಂದು ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡರೆ (ನನ್ನ ದೃಡವಾದ ಭಾವನೆ ಪ್ರಕಾರ ಇಂತಹ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಳ್ಳಲಾರದು) ಅಲ್ಲಿಂದ ರಾಜಕೀಯದಾಟ ಶುರುವಾಗುತ್ತದೆ.
- ನೀರು ಬಿಡುವುದಿಲ್ಲ ಎಂದು ಸಾರಿ ಜೈಲಿಗೆ ಹೋಗಲು ಸಿದ್ದರಾದ ಮುಖ್ಯಮಂತ್ರಿಗಳು ಮತ್ತು ಮುಖ್ಯಮಂತ್ರಿಯನ್ನು ಜೈಲಿಗಾದರೂ ಕಳಿಸಿ ನೀರು ಬಿಡಲು ಹೊರಟ ಪ್ರಧಾನಮಂತ್ರಿ. ಆರು ತಿಂಗಳ ನಂತರ ರಾಷ್ಟ್ರಪತಿ ಆಳ್ವಿಕೆ ಕೊನೆಗೊಂಡು ಮಧ್ಯಂತರ ಚುನಾವಣೆ ಎದುರಾದಾಗ ಮತದಾರರ ಮುಂದೆ ಇರಬಹುದಾದ ಎರಡು ಆಯ್ಕೆ ಇದು.
ಇಂತಹದ್ದೊಂದು ಅತಿರೇಕದ ಸಾಧ್ಯತೆ ನಿಜವಾದರೆ ಚುನಾವಣೆ ನಡೆಯುವ ಮೊದಲೇ ಫಲಿತಾಂಶವನ್ನೂ ಹೇಳಿಬಿಡಬಹುದು.
ಅಂತಹದ್ದೊಂದು ಅತಿರೇಕದ ಸ್ಥಿತಿ ನಿರ್ಮಾಣವಾಗಿ ಅಪರೂಪಕ್ಕೆ ರಾಜ್ಯದ ಹಿತಾಸಕ್ತಿಯ ರಕ್ಷಣೆಗಾಗಿ ರಾಜ್ಯದಲ್ಲಿ ಸ್ಥಾಪನೆಗೊಂಡಿರುವ ರಾಜಕೀಯ ಪಕ್ಷಗಳ ನಡುವಿನ ಸೌಹಾರ್ದತೆ ಹಾಳಾಗದಿರಲಿ ಎಂದು ಪ್ರಾಮಾಣಿಕವಾಗಿನಾನು ಆಶಿಸುತ್ತೇನೆ.

Friday, September 23, 2016

ಒಮ್ಮೊಮ್ಮೆ ಇತಿಹಾಸದ ಭಾಗವಾಗುವ ಅವಕಾಶ

ಇತಿಹಾಸಕ್ಕೆ ಸಾಕ್ಷಿಯಾಗುವುದು ಇದ್ದೇ ಇರುತ್ತದೆ, ಒಮ್ಮೊಮ್ಮೆ ಇತಿಹಾಸದ ಭಾಗವಾಗುವಂತಹ ಅವಕಾಶವೂ ಒದಗಿಬರುತ್ತದೆ. ಇಂದು ಸಂಜೆ ವಿಧಾನಸಭೆಯ ವಿಶೇಷ ಅಧಿವೇಶನ ಮುಗಿಸಿ ನಿರ್ಗಮಿಸುತ್ತಿದ್ದಾಗ ಒಂದು ಕ್ಷಣ ಇಂತಹದ್ದೊಂದು ಭಾವನೆ ನನ್ನೊಳಗೆ ಸುಳಿದಾಡಿದ್ದು ನಿಜ.  ಹೌದು ನನಗೆ ಸಿಕ್ಕಾಪಟ್ಟೆ ಖುಷಿಯಾದಾಗ ನಾನು ಏನು ಮಾಡ್ತೇನೆ ಎನ್ನುವುದು ನನ್ನನ್ನು ಪ್ರೀತಿಸುವ, ದ್ವೇಷಿಸುವ ಎಲ್ಲ ಸ್ನೇಹಿತರಿಗೂ ಈಗ ಗೊತ್ತಾಗಿಬಿಟ್ಟಿದೆ. ಆದರೇನು ಮಾಡುವುದು? ಮನೆಯಲ್ಲಿ ಫ್ರಿಜ್ ಖಾಲಿಯಾಗಿತ್ತು, ಮಾರ್ಕೆಟ್ ಬಂದ್ ಆಗಿತ್ತು. ನಾಳೆ ಹುಡುಕಿಕೊಂಡು ಹೋಗಬೇಕು ನನ್ನಿಷ್ಟದ ಕಾಣೆಮೀನಿಗಾಗಿ.

Tuesday, September 20, 2016

ಕೆಲವರ ಜತೆ ಜಗಳಮಾಡಿದರೂ ನಮಗೆ ಲಾಭ ಇದೆ.

ಕಾವೇರಿ ನೀರು ಹಂಚಿಕೆಯ ಕುರಿತ ದೇವೇಗೌಡರ ಕೆಲವು ನಿಲುವುಗಳ ಬಗ್ಗೆ ನನಗೆ ತಕರಾರಿದೆ. ಆದರೆ ನೀರಾವರಿ ವಿಷಯದಲ್ಲಿ ಅವರ ಜ್ಞಾನ ನನ್ನನ್ನು ಬೆರಗುಗೊಳಿಸಿದೆ. ಕೆಲವರ ಜತೆ ಜಗಳಮಾಡಿದರೂ ನಮಗೆ ಲಾಭ ಇದೆ. ಅಂತಹವರಲ್ಲಿ ಒಬ್ಬರು ಗೌಡರು. ಇದು ನನ್ನ ಅನುಭವ.ಕೆಲವು ವಿಷಯಗಳನ್ನು ಹೇಳಬೇಕೋ ಬೇಡವೋ ಎನ್ನುವುದು ನನಗೆ ಇನ್ನೂ ಗೊತ್ತಿಲ್ಲ, ಹೇಳಿಯೇ ಬಿಡುತ್ತೇನೆ..15000 ಕ್ಯುಸೆಕ್ಸ್ ನೀರುಹರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ದಿನದಿಂದ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಗಳ ಜತೆ ಸಂಪರ್ಕದಲ್ಲಿದ್ದಾರೆ. ಒಮ್ಮೊಮ್ಮೆ ದಿನಕ್ಕೆರಡು ಬಾರಿ ಮಾತನಾಡಿದ್ದಾರೆ. ಈ ಮಾತುಕತೆ ೧೫ ನಿಮಿಷಕ್ಕಿಂತ ಮೊದಲು ಕೊನೆಗೊಂಡಿದ್ದೇ ಕಡಿಮೆ.

Sunday, September 18, 2016

ಆಫ್ ಕಿ ಅದಾಲತ್'ಮುಂಬೈನಲ್ಲಿ ಭಯೋತ್ಪಾದಕರು ದಾಳಿ ನಡೆಸಿದಾಗ 'ಇಂಡಿಯಾ ಟಿವಿ' ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಜತೆ ನಡೆಸಿದ್ದ ' ಆಫ್ ಕಿ.ಅದಾಲತ್'
ಪ್ರಶ್ನೆ:.೨೬/೧೧ ನಡೆದ ಕಾಲದಲ್ಲಿ ನೀವಿದ್ದರೆ ಏನು ಮಾಡ್ತಿದ್ದೀರಿ?
ಮೋದಿ: ನಾನು ಗುಜರಾತ್ ನಲ್ಲಿ ಏನು ಮಾಡಿದ್ದೇನೋ ಅದನ್ನೇ ಮಾಡ್ತಿದ್ದೆ. ನಾನು ವಿಳಂಬ ಮಾಡ್ತಿರಲಿಲ್ಲ.
- ನಾನು ಈಗಲೂ ಹೇಳ್ತಿದ್ದೇನೆ, ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡ್ಬೇಕು. ಲವ್ ಲೆಟರ್ ಬರೆಯೊದನ್ನು ನಿಲ್ಲಿಸ್ಬೇಕು.
- ಪಾಕಿಸ್ತಾನ ನಮ್ಮ ಮೇಲೆ ದಾಳಿ ನಡೆಸಿ ಓಡಿಹೋಗುತ್ತೆ. ಪ್ರಣಬ್ ಮುಖರ್ಜಿ ಅಮೆರಿಕಾಕ್ಕೆ ಹೋಗಿ ' ಒಬಾಮ, ಒಬಾಮ' ಎಂದು ಅಳುತ್ತಾರೆ.
- ಹೋಗುವುದಿದ್ದರೆ ಪಾಕಿಸ್ತಾನಕ್ಕೆ ಹೋಗಿ ಅಮೆರಿಕಾಕ್ಕೆ ಯಾಕೆ ಹೋಗ್ತೀರಿ?
- ಅಮೆರಿಕಾಕ್ಕೆ ಪತ್ರ ಬರೆಯುವುದಂತೆ, ಅವರು ಪ್ರಶ್ನೆ ಕೇಳುವುದಂತೆ, ನಾವು ಉತ್ತರಕೊಡುವುದಂತೆ. ನಿಲ್ಲಿಸಿ, ಇದನ್ನೆಲ್ಲ...
https://www.facebook.com/dinesh.amin.353/videos/10206056012674464/