Monday, September 19, 2011

ಮೋದಿ ಒಂದು ವಾಸ್ತವ, ಅವರನ್ನು ಎದುರಿಸಿ

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮರೆಯಲ್ಲಿ ನಿಂತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕಡೆ  ಕಲ್ಲು ಹೊಡೆಯುತ್ತಾ ಎಷ್ಟು ದಿನಗಳನ್ನು ಹೀಗೆ ಕಳೆಯಬಹುದು? ಗುಜರಾತ್ ನರಮೇಧ ನಡೆದು ಒಂಬತ್ತು ವರ್ಷಗಳು ಕಳೆದಿವೆ.  ಹತ್ತಾರು ಪ್ರಕರಣಗಳು ಬೇರೆ ಬೇರೆ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ.
ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳು ಮೋದಿ ವಿರುದ್ಧ ನೂರಾರು ಆರೋಪಗಳನ್ನು ಮಾಡಿವೆ, ಈ ದೇಶದ ಅನೇಕ ಪ್ರಮುಖ ಸಾಹಿತಿಗಳು, ಕಲಾವಿದರು, ಚಿಂತಕರು ಮತ್ತು ಸಾಮಾಜಿಕ ಸೇವಾ ಕಾರ‌್ಯಕರ್ತರು ಕೂಡಾ ಮೋದಿ ವಿರುದ್ದ ದನಿ ಎತ್ತಿದ್ದಾರೆ.
ಅಷ್ಟೇ ಆಕ್ರಮಣಕಾರಿಯಾಗಿ ನರೇಂದ್ರ ಮೋದಿ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ, ಎಲ್.ಕೆ.ಅಡ್ವಾಣಿ ಸೇರಿದಂತೆ ಅವರ ಪಕ್ಷದ ಪ್ರಮುಖ ನಾಯಕರು ಕೂಡಾ ಬಹಿರಂಗವಾಗಿ ಮೋದಿ ಬೆಂಬಲಕ್ಕೆ ನಿಂತು ಮಾತನಾಡಿದ್ದಾರೆ.
  ಇವೆಲ್ಲವನ್ನು ಮಾಧ್ಯಮಗಳು ಪುಟಗಟ್ಟಲೆ ಬರೆದಿವೆ, ಚಾನೆಲ್‌ಗಳು ಸಾವಿರಾರು ಗಂಟೆಗಳ ಕಾಲ ಪ್ರಸಾರ ಮಾಡಿವೆ. ಮಾಧ್ಯಮಗಳು ಸ್ವತಂತ್ರವಾಗಿ ತನಿಖೆ ನಡೆಸಿ ವರದಿಗಳನ್ನು ಪ್ರಕಟಿಸಿವೆ.
ಬಹುಶಃ ನರೇಂದ್ರ ಮೋದಿ ಅವರ `ಹಳೆಯ ಪಾಪ~ಗಳ ಬಗ್ಗೆ ಹೊಸದಾಗಿ ಹೇಳುವಂತಹದ್ದು ಈಗ ಏನೂ ಉಳಿದಿಲ್ಲ. ಅವರ ವ್ಯಕ್ತಿತ್ವದ ಒಳಿತು-ಕೆಡುಕುಗಳೆರಡೂ ಈಗ ದೇಶದ ಜನರ ಮುಂದಿವೆ. ಅವರೇ ಈಗ ತೀರ್ಮಾನ ಮಾಡಬೇಕಾಗಿದೆ.
ಯಾರು ಒಪ್ಪಲಿ ಬಿಡಲಿ, ಮೋದಿ ಅವರು ಈಗ ರಾಷ್ಟ್ರ ರಾಜಕಾರಣದ ಕಡೆ ಹೆಜ್ಜೆ ಹಾಕಿದ್ದಾರೆ. ಇಲ್ಲಿಯ ವರೆಗೆ ಯಾವ ಕಾನೂನು ಕೂಡಾ ಅವರು ಅಪರಾಧಿ ಎಂದು ತೀರ್ಪು ನೀಡದಿರುವ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಅರ್ಹರಾಗಿದ್ದಾರೆ.
ಆದ್ದರಿಂದ ಅವರನ್ನು ವಿರೋಧಿಸುವ ರಾಜಕೀಯ ಪಕ್ಷಗಳು ಇನ್ನೂ ಅವರನ್ನು ಪತ್ರಿಕೆಗಳ ಪುಟಗಳಲ್ಲಿ ಮತ್ತು ಟಿವಿ ಚಾನೆಲ್‌ಗಳ ಚರ್ಚಾಕೂಟಗಳಲ್ಲಿ  ಹಳಿಯುತ್ತಾ ಕಾಲ ಕಳೆಯುವುದರಲ್ಲಿ ಏನೂ ಅರ್ಥ ಇಲ್ಲ. ವಿರೋಧಿಗಳ ಪಾಲಿಗೆ ಈಗ ಉಳಿದಿರುವ ಏಕೈಕ ದಾರಿ ಎಂದರೆ ಅವರನ್ನು ಮುಖಾಮುಖಿ ಎದುರಿಸುವುದು.
`ಧೈರ್ಯವಿದ್ದರೆ ನರೇಂದ್ರಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಮುಂದಿನ ಲೋಕಸಭಾ ಚುನಾವಣೆ ಎದುರಿಸಿ~ ಎಂದು ಭಾರತೀಯ ಜನತಾ ಪಕ್ಷಕ್ಕೆ ಸವಾಲು ಹಾಕುವಂತಹ ದಿಟ್ಟತನವನ್ನು ಮೋದಿ ವಿರೋಧಿ ನಾಯಕರು ತೋರಬೇಕು.
ಈ ಸವಾಲನ್ನು ಕಾಂಗ್ರೆಸ್ ಪಕ್ಷವೇ ಬಿಜೆಪಿ ಕಡೆ ಎಸೆದರೆ ಆ ಪಕ್ಷಕ್ಕೂ ಒಳ್ಳೆಯದು. ಇದಕ್ಕೆ ಕಾರಣ ಇದೆ. `ಉಳಿದವರು ಏನೇ ಹೇಳಲಿ  `ಜನತಾ ನ್ಯಾಯಾಲಯ~ ತನ್ನನ್ನು ನಿರ್ದೋಷಿ ಎಂದು ಸಾರಿದೆ~ ಎಂದು ಅನೇಕ ಬಾರಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ.

ಈ ನಿರಪರಾಧಿತನದ ಸರ್ಟಿಫಿಕೇಟನ್ನು  ಅವರು ಎದೆ ಮೇಲೆ ಹಚ್ಚಿಕೊಳ್ಳಲು ಗುಜರಾತ್ ನರಮೇಧದ ನಂತರ ಆ ರಾಜ್ಯದಲ್ಲಿ ನಡೆದ ಎರಡು ವಿಧಾನಸಭಾ ಚುನಾವಣೆಗಳು ಹಾಗೂ ಎರಡು ಲೋಕಸಭಾ ಚುನಾವಣೆಗಳಲ್ಲಿನ ಗೆಲುವು ಕಾರಣ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಮೂಲಕವೇ  ಒಂದು ಪಕ್ಷ ಇಲ್ಲವೇ ಒಬ್ಬ ನಾಯಕನ ಭವಿಷ್ಯ ನಿರ್ಧಾರವಾಗುವುದು.
2002ರ ವಿಧಾನಸಭಾ ಚುನಾವಣೆಯ ಸಮೀಕ್ಷೆಗಾಗಿ ಗುಜರಾತ್ ರಾಜ್ಯದಲ್ಲಿ ನಾನು ಪ್ರವಾಸ ಮಾಡಿದ್ದೆ. ಒಂಬತ್ತು ತಿಂಗಳು ಮೊದಲು ಅದೇ ರಾಜ್ಯದಲ್ಲಿ ನಡೆದ ಕೋಮುಗಲಭೆಯ ಪ್ರತ್ಯಕ್ಷ ವರದಿಗೆಂದು ಹೋಗಿದ್ದ  ನಾನು ಕೋಮುವಾದದ ಕರಾಳ ಮುಖಗಳನ್ನು ಕಣ್ಣಾರೆ ನೋಡಿದ್ದ ಕಾರಣ  ಮೋದಿ ಒಂದು ಬಾರಿ ಸೋಲಬೇಕಿತ್ತು ಎಂದು ನನ್ನ ಒಳಮನಸ್ಸು ಹಾರೈಸುತ್ತಿತ್ತು.
ಆದರೆ ಆ ರಾಜ್ಯವನ್ನು ಹತ್ತು ದಿನಗಳ ಕಾಲ ಸುತ್ತಾಡಿದ ನಂತರ ನರೇಂದ್ರ ಮೋದಿ ಗೆಲುವು ಖಚಿತ ಎಂದು ಅರಿವಾಗಿತ್ತು. (ಹಾಗೆಯೇ ವರದಿಯನ್ನೂ ಮಾಡಿದ್ದೆ). 2002ರ ನಂತರ ನಡೆದಿರುವ ಚುನಾವಣೆಗಳಲ್ಲಿ ನರೇಂದ್ರ ಮೋದಿ ಗೆಲ್ಲಲು ಕಾರಣಗಳನ್ನು ನಾವು ಹುಡುಕಿ ತೆಗೆಯಬಹುದು.
ಆದರೆ ಮೋದಿ ಮೊದಲು ಎದುರಿಸಿದ ಚುನಾವಣೆಯ ಕಾಲದಲ್ಲಿ ಗುಜರಾತ್ ಕೋಮುಗಲಭೆಗೆ ಸಂಬಂಧಿಸಿದ ಆರೋಪಗಳು ಮಾತ್ರವಲ್ಲ, ಟಿಕೆಟ್ ಹಂಚಿಕೆಯಲ್ಲಿನ ಅಸಮಾಧಾನದಿಂದ ಹಿಡಿದು ಕೇಶುಭಾಯಿ ಪಟೇಲ್ ಬೆಂಬಲಿಗರ ವಿರೋಧದ ವರೆಗೆ ಎಲ್ಲವೂ ಮೋದಿ ವಿರುದ್ಧವೇ ಇದ್ದವು.

ಆದರೆ ಎಲ್ಲರ ಬಾಯಿ ಮುಚ್ಚಿಸುವ ರೀತಿಯಲ್ಲಿ ಮೋದಿ ಗೆಲುವು ಸಾಧಿಸಿದ್ದರು. ದೂರದಲ್ಲಿ ನಿಂತು ನೋಡುವವರಿಗೆ ಜನರ ಆಯ್ಕೆ ತಪ್ಪು ಎಂದು ಅನಿಸಬಹುದು. ಅಂತಿಮವಾಗಿ ಜನಾದೇಶಕ್ಕೆ ಎಲ್ಲರೂ ತಲೆಬಾಗಲೇಬೇಕಾಗುತ್ತದೆ. ಇದು ಪ್ರಜಾಪ್ರಭುತ್ವದ ನಿಯಮ.
`ನರೇಂದ್ರಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆ ಎದುರಿಸಿ~ ಎಂದು ಸವಾಲು ಹಾಕುವ ಧೈರ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆಯೇ ಎನ್ನುವುದು ಈಗಿನ ಮೊದಲ ಪ್ರಶ್ನೆ. ಈ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರೆನ್ನುವುದು ಹೆಚ್ಚು ಕಡಿಮೆ ತೀರ್ಮಾನವಾಗಿದೆ.
ರಾಹುಲ್‌ಗಾಂಧಿಗೆ ಮನಸ್ಸಿದೆಯೋ, ಇಲ್ಲವೋ ಗೊತ್ತಿಲ್ಲ, ಅದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಯುವ ನಾಯಕನನ್ನೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವುದು ಕಾಂಗ್ರೆಸ್‌ಪಕ್ಷಕ್ಕೆ ಅನಿವಾರ‌್ಯವಾಗಿದೆ.
ಮನಮೋಹನ್‌ಸಿಂಗ್ ಈ ಲೋಕಸಭೆಯ ಅವಧಿ ಮುಗಿಯುವ ವರೆಗೆ ಪ್ರಧಾನಿ ಪಟ್ಟದಲ್ಲಿ ಉಳಿದರೆ ಹೆಚ್ಚು. ಮುಂದಿನ ಚುನಾವಣೆಯಲ್ಲಿ ಅವರು ಖಂಡಿತ ಪ್ರಧಾನಿ ಅಭ್ಯರ್ಥಿ ಆಗಲಾರರು.
ಎರಡನೇ ಸಾಲಿನಲ್ಲಿರುವ ಪ್ರಣಬ್ ಮುಖರ್ಜಿ ಅವರಿಗೆ ವಯಸ್ಸೂ ಆಗಿದೆ, ಅವರ ಮೇಲೆ ನೆಹರೂ ಕುಟುಂಬಕ್ಕೆ ವಿಶ್ವಾಸವೂ ಕಡಿಮೆ. ಪಿ.ಚಿದಂಬರಂ ಒಬ್ಬ ವಿಫಲ ನಾಯಕ. ಎ.ಕೆ.ಆಂಟನಿ ಅವರಿಗೆ ಅವರ ಧರ್ಮವೇ ಅಡ್ಡಿಯಾಗಬಹುದು. ಆದ್ದರಿಂದ ರಾಹುಲ್ ಗಾಂಧಿ ಹೊರತುಪಡಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಬೇರೆ ಗತಿ ಇಲ್ಲ.
ಮುಂದಿನ ಲೋಕಸಭಾ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವ ದೊಡ್ಡ ಅನುಕೂಲತೆಯೆಂದರೆ ರಾಹುಲ್ ಗಾಂಧಿಯ ಯುವ ನಾಯಕತ್ವ ಎಂದು ಅವರ ಪಕ್ಷದವರು ಮಾತ್ರವಲ್ಲ ವಿರೋಧಪಕ್ಷಗಳು ಕೂಡಾ ಹೇಳುತ್ತಿದ್ದವು.
ಬಹುಸಂಖ್ಯೆಯ ಮತದಾರರು ಯುವಜನರೇ ಆಗಿರುವುದು ಇದಕ್ಕೆ ಒಂದು ಕಾರಣವಾದರೆ, ವಿರೋಧಪಕ್ಷಗಳಲ್ಲಿ ಈ ವಯಸ್ಸಿನ ಯುವನಾಯಕರು ಇಲ್ಲದಿರುವುದು ಇನ್ನೊಂದು ಕಾರಣ.
ಆದರೆ ನರೇಂದ್ರ ಮೋದಿಯವರಂತಹ ಒಬ್ಬ ಆಕ್ರಮಣಕಾರಿ ನಾಯಕನನ್ನು ಎದುರಿಸಲು ಈ ಅನುಕೂಲತೆಯಷ್ಟೇ ಸಾಕಾದೀತೇ? ಕಳೆದ ಏಳು ವರ್ಷಗಳಿಂದ ಲೋಕಸಭಾ ಸದಸ್ಯರಾಗಿರುವ ರಾಹುಲ್ ಗಾಂಧಿ ಒದಗಿಬಂದ ಅವಕಾಶವನ್ನು ಬಳಸಿಕೊಂಡು ನಾಯಕನಾಗುವ ಅರ್ಹತೆಯನ್ನು ಸಾಬೀತುಪಡಿಸುವ ಪ್ರಯತ್ನವನ್ನು ಇನ್ನೂ ಮಾಡಿಲ್ಲ.
ಒಂದೆರಡು ಬಾರಿ ಲಿಖಿತ ಪ್ರತಿ ಕೈಯಲ್ಲಿಟ್ಟುಕೊಂಡು ಮಾಡಿದ ಭಾಷಣಗಳನ್ನು ಹೊರತುಪಡಿಸಿದರೆ ಸದನದಲ್ಲಿ ನಡೆದ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಸಾಧಿಸಿದ್ದ ಗೆಲುವಿನ ಕಿರೀಟ ಕೂಡಾ ಬಿಹಾರ ಚುನಾವಣೆಯಲ್ಲಿ ಬಿದ್ದುಹೋಗಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ತನ್ನ ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ಪಕ್ಷದ ನಾಯಕತ್ವವನ್ನು ತಾತ್ಕಾಲಿಕವಾಗಿ ಮಗನಿಗೆ ಬಿಟ್ಟುಕೊಟ್ಟಿದ್ದರು. ಇದನ್ನು ಬಳಸಿಕೊಳ್ಳುವ ಅವಕಾಶ ಕೂಡಾ ಅಣ್ಣಾಹಜಾರೆ ಚಳವಳಿಯಿಂದಾಗಿ ನಿರ್ಮಾಣವಾಗಿದ್ದ ರಾಜಕೀಯ ಬಿಕ್ಕಟ್ಟಿನ ಮೂಲಕ ಒದಗಿ ಬಂದಿತ್ತು.
ರಾಹುಲ್ ಪ್ರವೇಶಿಸಿ ಆಟವನ್ನೇ ಬದಲಿಸಲಿದ್ದಾರೆ ಎಂದು ಕಾಂಗ್ರೆಸ್ ಭಟ್ಟಂಗಿಗಳು ಹೇಳುತ್ತಲೇ ಇದ್ದರು, ಆದರೆ ಅವರು ಆಟದ ಅಂಗಳವನ್ನು ಪ್ರವೇಶಿಸಲೇ ಇಲ್ಲ. ಲಿಖಿತ ಭಾಷಣವೊಂದನ್ನು ಲೋಕಸಭೆಯಲ್ಲಿ ಓದಿ ಕೈತೊಳೆದುಕೊಂಡು ಬಿಟ್ಟರು. ನರೇಂದ್ರಮೋದಿ ಪ್ರಧಾನಿ ಅಭ್ಯರ್ಥಿಯೆಂದು ಬಿಜೆಪಿ ಬಿಂಬಿಸಿದರೆ ಕಾಂಗ್ರೆಸ್ ಪಾಲಿನ ದೊಡ್ಡ ಸಮಸ್ಯೆ ಮೋದಿ ಅಲ್ಲ, ರಾಹುಲ್ ಗಾಂಧಿ.
ನರೇಂದ್ರಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಎಂದು ಕಾಂಗ್ರೆಸ್ ಪಕ್ಷ ಸವಾಲು ಹಾಕಿದರೆ ಬಿಜೆಪಿ ಅದನ್ನು ಸ್ವೀಕರಿಸಲು ಸಿದ್ಧ ಇದೆಯೇ ಎನ್ನುವುದು ಎರಡನೇ ಪ್ರಶ್ನೆ. ಮೋದಿ ಅವರು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಪಕ್ಷ ಅಧಿಕೃತವಾಗಿ ಇನ್ನೂ ಘೋಷಿಸಿಲ್ಲ.
ಕೆಲವು ದಿನಗಳ ಹಿಂದೆಯಷ್ಟೇ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ಭ್ರಷ್ಟಾಚಾರ ವಿರೋಧಿ ಯಾತ್ರೆ ನಡೆಸುವುದಾಗಿ ಸ್ವಇಚ್ಛೆಯ ಹೇಳಿಕೆ ನೀಡಿ ಅವರ ಪಕ್ಷದ ನಾಯಕರನ್ನೇ ಚಕಿತಗೊಳಿಸಿದ್ದರು.
ತಾನು ಪ್ರಧಾನಿ ಪಟ್ಟದ ಅಭ್ಯರ್ಥಿ ಎಂಬ ಸೂಚನೆಯನ್ನು ನೀಡುವುದಕ್ಕಾಗಿಯೇ ಈ ಯಾತ್ರೆಯ ಘೋಷಣೆ ಮಾಡಿದ್ದಾರೆಂಬ ವ್ಯಾಖ್ಯಾನಗಳು ಆ ದಿನದಿಂದಲೇ ಕೇಳಿಬರುತ್ತಿವೆ.
ಇವೆಲ್ಲವೂ ನಡೆಯುತ್ತಿರುವಾಗ ನರೇಂದ್ರ ಮೋದಿ ಅವರು ದಿಢೀರನೆ `ಸದ್ಭಾವನಾ ಉಪವಾಸ~ ಕಾರ‌್ಯಕ್ರಮ ಹಮ್ಮಿಕೊಂಡಿದ್ದಾರೆ. ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪು ಈ ಉಪವಾಸಕ್ಕೆ ಪ್ರೇರಣೆ ಎಂದು ಹೇಳಿಕೊಂಡರೂ ಅದರಲ್ಲಿರುವ ಗುಪ್ತ ಕಾರ‌್ಯಸೂಚಿಯನ್ನು ನಿರ್ಲಕ್ಷಿಸಲಾಗದು.

ಮೂರು ದಿನಗಳ ಹಿಂದೆ ಅಡ್ವಾಣಿ ಅವರೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಬಹುದೆಂದು ಹೇಳುತ್ತಿದ್ದ ಮಾಧ್ಯಮಗಳು ಆಗಲೇ ಆ ಸ್ಥಾನದಲ್ಲಿ ನರೇಂದ್ರ ಮೋದಿ ಅವರನ್ನು ಕೂರಿಸಿ ಚರ್ಚೆ ನಡೆಸುತ್ತಿವೆ.
ಇವೆಲ್ಲವೂ ಅನಿರೀಕ್ಷಿತ ಬೆಳವಣಿಗೆಗಳಂತೆ ಮೇಲ್ನೋಟಕ್ಕೆ ಕಂಡರೂ ಇದರ ಆಳದಲ್ಲಿ ಒಂದು ವ್ಯವಸ್ಥಿತವಾದ ಪೂರ್ವಯೋಜಿತ ಕಾರ‌್ಯತಂತ್ರ ಇರುವುದನ್ನು ಅಲ್ಲಗಳೆಯಲಾಗದು. ಇದು ಎಲ್ಲರಿಗಿಂತ ಮೊದಲು ಅಡ್ವಾಣಿಯವರಿಗೆ ಗೊತ್ತಾಗಿದೆ. ಅದಕ್ಕಾಗಿ ಅವರು ಮೋದಿ ಅವರಿಗೆ ಬೆಂಬಲ ಘೋಷಿಸಲು ಹಾರಿ ಹೋಗಿದ್ದಾರೆ.
ಇಷ್ಟು ಮಾತ್ರಕ್ಕೆ ಬಿಜೆಪಿಯಲ್ಲಿ ಮೋದಿ ಒಮ್ಮತದ ನಾಯಕ ಎಂದು ಹೇಳಲಾಗದು, ಯಾಕೆಂದರೆ ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅಲ್ಲಿಗೆ ಹೋಗಿಲ್ಲ. ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಗೈರುಹಾಜರಿ ಕೂಡಾ ಎದ್ದು ಕಾಣುವಂತಿದೆ. ಬಿಜೆಪಿಯಲ್ಲಿ ಇನ್ನೂ ಒಂದು ಸಮಸ್ಯೆ ಇದೆ.

ನರೇಂದ್ರಮೋದಿ ಅವರನ್ನು ಒಮ್ಮತದಿಂದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಮಾತ್ರಕ್ಕೆ ಅವರು ಆ ಸ್ಥಾನದಲ್ಲಿ ಹೋಗಿ ಕೂರಲು ಸಾಧ್ಯವಾಗಲಾರದು. ಅದು ಸಾಧ್ಯವಾಗಬೇಕಾದರೆ ಬಹುಮತ ಸಾಬೀತುಪಡಿಸಲು  ಅಗತ್ಯವಾದ 272 ಲೋಕಸಭಾ ಸ್ಥಾನಗಳನ್ನು ಸ್ವಂತ ಬಲದಿಂದ ಗೆಲ್ಲಬೇಕಾಗುತ್ತದೆ.
ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಕನಿಷ್ಠ ಅಧಿಕಾರದ ಕನಸನ್ನಾದರೂ ಕಾಣಬೇಕಾದರೆ ಮೈತ್ರಿಕೂಟವನ್ನು ಕಟ್ಟಿಕೊಳ್ಳುವುದು ಬಿಜೆಪಿಗೆ ಅನಿವಾರ‌್ಯ. ಈಗ ಇರುವ ಮಿತ್ರಪಕ್ಷಗಳ ಜತೆಯಲ್ಲಿ ಹೊಸಮಿತ್ರರ ಕೈ ಹಿಡಿಯಬೇಕಾಗುತ್ತದೆ.
ಅಂತಹ ಸಂದರ್ಭದಲ್ಲಿ ಬಿಜೆಪಿ ಪಾಲಿನ ದೊಡ್ಡ ಸಮಸ್ಯೆ ನರೇಂದ್ರ ಮೋದಿ ಆಗಬಲ್ಲರು. ಚಂದ್ರಬಾಬು ನಾಯ್ಡು, ರಾಮ್‌ವಿಲಾಸ್ ಪಾಸ್ವಾನ್ ಮೊದಲಾದವರು ಬಿಜೆಪಿ ಸಖ್ಯ ಮುರಿದುಕೊಂಡದ್ದು ಮೋದಿಯವರ ಕಾರಣದಿಂದಲ್ಲವೇ?
ನರೇಂದ್ರ ಮೋದಿ ಅವರು ಎಷ್ಟು ದಿನಗಳ ಉಪವಾಸ ಮಾಡಿದರೂ, ಮುಸ್ಲಿಂ ನಾಯಕರನ್ನು ಕರೆಸಿ ಅಪ್ಪಿಮುದ್ದಾಡಿದರೂ ದೇಶದ ಮುಸ್ಲಿಮರು ಅವರನ್ನು ಒಪ್ಪಿಕೊಳ್ಳುವುದು ಕಷ್ಟ. ಇದರಿಂದಾಗಿ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡಿರುವ ಯಾವ ಪಕ್ಷ ಕೂಡಾ ಮೋದಿ ನಾಯಕತ್ವದ ಬಿಜೆಪಿ ಜತೆ ಕೈಜೋಡಿಸಲು ಮುಂದೆ ಬರಲಾರದು.
ಬಿಹಾರದ ಮುಖ್ಯಮಂತ್ರಿ ನಿತೀಶ್ ಹಲವಾರು ಬಾರಿ ಈ ಸಂದೇಶ ನೀಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ. ಶಿವಸೇನೆ ಮತ್ತು ಅಕಾಲಿದಳಗಳಷ್ಟೇ ಎನ್‌ಡಿಎ ಜತೆ ಉಳಿದುಕೊಳ್ಳಬಹುದು.
ಈ ಮಿತ್ರರ ನೆರವಿನಿಂದಲೇ ಬಿಜೆಪಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗದು. ಈ ದೃಷ್ಟಿಯಿಂದ ನರೇಂದ್ರಮೋದಿ ಅವರಿಂದ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಇಂತಹವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದು  ಅಪಾಯಕಾರಿ ಜೂಜಾಟ.

ಅದಕ್ಕೆ ಬಿಜೆಪಿ ಸಿದ್ಧ ಇದೆಯೇ? ಕಾಂಗ್ರೆಸ್ ಕೇಳಬೇಕಾಗಿರುವುದು ಈ ಪ್ರಶ್ನೆಯನ್ನು. ಆ ಧೈರ್ಯ ಅದಕ್ಕೂ ಇಲ್ಲ. ಅದಕ್ಕಾಗಿ ಸುಮ್ಮನೆ ಮರೆಯಲ್ಲಿ ನಿಂತು ಬೊಬ್ಬೆ ಹಾಕುತ್ತಿದೆ.