Monday, October 24, 2011

ಅಚ್ಚರಿ ಹುಟ್ಟಿಸಿರುವ ಅಡ್ವಾಣಿ ಬಂಡುಕೋರತನ

ಲಾಲಕೃಷ್ಣ ಅಡ್ವಾಣಿಯವರ ಮನಸ್ಸಿನೊಳಗೆ ಬಹಳ ಕಾಲದಿಂದ ಸುಳಿದಾಡುತ್ತಿದ್ದ ಬಂಡುಕೋರನೊಬ್ಬ ನಿಧಾನವಾಗಿ ತಲೆ ಹೊರಗೆ ಚಾಚುತ್ತಿರುವಂತೆ ಕಾಣುತ್ತಿದೆ. ಈ ಬಂಡುಕೋರತನ ಅವರನ್ನು ಪಕ್ಷ ತೊರೆಯುವ ಕಠಿಣ ನಿರ್ಧಾರದ ಅಂಚಿಗೆ ತಳ್ಳಬಹುದೆಂದು ಈಗಲೇ ಹೇಳಲಾಗುವುದಿಲ್ಲ.
ಉಸಿರುಗಟ್ಟುತ್ತಿರುವ ತಮ್ಮವರ ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವ ಇಲ್ಲವೇ, ತಮ್ಮನ್ನು ನಿರ್ಲಕ್ಷಿಸುತ್ತಿರುವವರಿಗೆ ಎಚ್ಚರಿಕೆ ನೀಡುವ ಇಲ್ಲವೇ, ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶ ಈ ಬಂಡುಕೋರ ನಡವಳಿಕೆಯಲ್ಲಿ ಇದ್ದರೂ ಇರಬಹುದು.

ಆರ್‌ಎಸ್‌ಎಸ್‌ಗೆ ಸೇರಿದಂದಿನಿಂದ ಇಂದಿನವರೆಗೆ ಸುಮಾರು ಎಪ್ಪತ್ತು ವರ್ಷಗಳ ಅವರ ಜೀವನದಲ್ಲಿ ಅಡ್ವಾಣಿಯವರು ಈ ರೀತಿ ನಡೆದುಕೊಂಡೇ ಇಲ್ಲ. ಬಹಿರಂಗವಾಗಿ ಎಂದೂ ಪಕ್ಷಕ್ಕೆ ಇಲ್ಲವೇ ಸಂಘ ಪರಿವಾರಕ್ಕೆ ಸವಾಲು ಹಾಕದ ಅಡ್ವಾಣಿಯವರು 84ರ ಇಳಿವಯಸ್ಸಿನಲ್ಲಿ ತೋರುತ್ತಿರುವ ಬಂಡುಕೋರ ನಡವಳಿಕೆ ಈ ಕಾರಣದಿಂದಲೇ ಅಚ್ಚರಿ ಮೂಡಿಸುತ್ತದೆ.
 ಪಕ್ಷದ ಹಿತದೃಷ್ಟಿಯಿಂದ ನೋಡಿದರೆ ಇದು ಅಡ್ವಾಣಿಯವರು ರಥಯಾತ್ರೆ ಹೊರಡುವ ಸಮಯ ಅಲ್ಲ. ಇದು ಬಿಜೆಪಿಗೆ ಕಷ್ಟದ ಸಮಯ. ಕಾಡುತ್ತಿರುವುದು ಭ್ರಷ್ಟಾಚಾರ ಒಂದೇ ಅಲ್ಲ, ಅಧಿಕಾರದಲ್ಲಿರುವ ಪ್ರತಿಯೊಂದು ರಾಜ್ಯದಲ್ಲಿಯೂ ಭಾರತೀಯ ಜನತಾ ಪಕ್ಷ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.
ರಾಷ್ಟ್ರೀಯ ನಾಯಕತ್ವಕ್ಕಾಗಿ ನಡೆಯುತ್ತಿರುವ ಸಂಘರ್ಷ ಪಕ್ಷವನ್ನು ದುರ್ಬಲಗೊಳಿಸುವ ಮಟ್ಟಕ್ಕೆ ಬೆಳೆಯುತ್ತಿದೆ. ಈ ಸಂದರ್ಭದಲ್ಲಿ ಹೊರಟಿರುವ ಅಡ್ವಾಣಿಯವರ ರಥಯಾತ್ರೆ ಈ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಲು ಕಾರಣವಾಗುತ್ತಿದೆಯೇ ಹೊರತು ಅದರ ಪರಿಹಾರಕ್ಕೆ ಖಂಡಿತ ನೆರವಾಗುತ್ತಿಲ್ಲ.
ಭಾರತೀಯ ಜನತಾ ಪಕ್ಷ ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ಭಾರಿ ಭರವಸೆ ಇಟ್ಟುಕೊಂಡಿರುವ ರಾಜ್ಯ ಗುಜರಾತ್. ಆದರೆ ಕಳೆದ ಹತ್ತುವರ್ಷಗಳ ಆಡಳಿತದಲ್ಲಿ ನರೇಂದ್ರ ಮೋದಿ ಮೊದಲ ಬಾರಿ ಪಕ್ಷದೊಳಗೆ ಮತ್ತು ಹೊರಗೆ ವಿರೋಧದ ಅಲೆಯನ್ನು ಎದುರಿಸುತ್ತಿದ್ದಾರೆ.
ಮೋದಿ ಅವರ ಜನಪ್ರಿಯತೆಗೆ ಹೆದರಿ ಇಲ್ಲಿಯವರೆಗೆ ಅವರ ಉದ್ಧಟತನದ ನಡವಳಿಕೆಗಳೆಲ್ಲವನ್ನೂ ಸಹಿಸುತ್ತಾ ಬಂದ ಆರ್‌ಎಸ್‌ಎಸ್ ಈಗ ಅವರನ್ನು ನಿಯಂತ್ರಿಸಲು ಹೊರಟಿದೆ.

ಸಂಘದ ಸಲಹೆಯ ಪ್ರಕಾರವೇ ಸಂಜಯ್ ಜೋಷಿ ಎಂಬ ಮೋದಿ ಅವರ ಕಟ್ಟಾವಿರೋಧಿಯನ್ನು ಅಜ್ಞಾತವಾಸದಿಂದ ಬಿಡುಗಡೆಗೊಳಿಸಿ ನಿರ್ಣಾಯಕವಾದ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಉಸ್ತುವಾರಿಯನ್ನು ಪಕ್ಷ ನೀಡಿದೆ.
ಐದು ವರ್ಷಗಳ ಹಿಂದೆ ಲೈಂಗಿಕ ಹಗರಣದ ಆರೋಪಕ್ಕೆ ಒಳಗಾಗಿ ಮೂಲೆಗೆ ತಳ್ಳಲ್ಪಟ್ಟ ಜೋಷಿ ಅವರಿಗೆ ಪ್ರಮುಖ ಜವಾಬ್ದಾರಿ ವಹಿಸಿಕೊಟ್ಟಿರುವುದು ಮೋದಿ ಅವರಿಗೆ ನೀಡಿರುವ ಸಂದೇಶ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಇದರಿಂದ ಮೋದಿ ಎಷ್ಟೊಂದು ಅಸಮಾಧಾನಗೊಂಡಿದ್ದರೆಂದರೆ ದೆಹಲಿಯಲ್ಲಿ ನಡೆದ ಪಕ್ಷದ ಕಾರ‌್ಯಕಾರಿ ಸಮಿತಿ ಸಭೆಗೇ ಗೈರುಹಾಜರಾಗಿ ಬಿಟ್ಟರು. ಬಿಗಿಗೊಳ್ಳುತ್ತಿರುವ ನ್ಯಾಯಾಲಯದಲ್ಲಿರುವ ಮೊಕದ್ದಮೆಗಳ ಕುಣಿಕೆಗಳು, ಸರ್ಕಾರಿ ಯಂತ್ರದ ದುರುಪಯೋಗದ ಆರೋಪಗಳು, ಸಾಧನೆಯ ಬಗೆಗಿನ ಅತಿರಂಜಿತ ಹೇಳಿಕೆಗಳ ಪೊಳ್ಳುತನಗಳು ಮೋದಿ ಅವರ ಜನಪ್ರಿಯತೆಯನ್ನು ಕುಂದಿಸುತ್ತಿವೆ.
ಅಡ್ವಾಣಿಯವರ ಸಹಜ ಸ್ವಭಾವದ ಪ್ರಕಾರ ಅವರು ಕಷ್ಟದಲ್ಲಿರುವ ಮೋದಿ ಅವರ ರಕ್ಷಣೆಗೆ ಧಾವಿಸಬೇಕಾಗಿತ್ತು. ಆದರೆ ಅಡ್ವಾಣಿ ಮೋದಿ ಮೇಲೆ ಎರಗಿ ಬಿದ್ದಿದ್ದಾರೆ. 21 ವರ್ಷಗಳ ಹಿಂದೆ ಅಡ್ವಾಣಿ ಅಯೋಧ್ಯೆಗೆ ಯಾತ್ರೆ ಹೊರಟಿದ್ದು ಗುಜರಾತ್ ರಾಜ್ಯದ ಸೋಮನಾಥಪುರದಿಂದ.

ಆ ಯಾತ್ರೆ ಪ್ರಾರಂಭದ ದಿನ ಅವರ ಎಡಬಲಕ್ಕಿದ್ದ ಇಬ್ಬರಲ್ಲಿ ಒಬ್ಬರು ಪ್ರಮೋದ್ ಮಹಾಜನ್, ಇನ್ನೊಬ್ಬರು ನರೇಂದ್ರ ಮೋದಿ. ಈ ಬಾರಿಯೂ ಅಲ್ಲಿಂದಲೇ ಯಾತ್ರೆ ಹೊರಡುವುದೆಂದು ನಿರ್ಧರಿಸಿದ್ದ ಅಡ್ವಾಣಿ ನಂತರ ಮನಸ್ಸು ಬದಲಾಯಿಸಿ ಬಿಹಾರದಲ್ಲಿರುವ ಜಯಪ್ರಕಾಶ್ ನಾರಾಯಣ್ ಜನ್ಮಸ್ಥಳವನ್ನು ಆರಿಸಿಕೊಂಡಿದ್ದಾರೆ.
ನರೇಂದ್ರ ಮೋದಿ ಕಾಲಿಡಲು ಸಾಧ್ಯವಾಗದಂತಹ ರಾಜ್ಯ ಬಿಹಾರ. ಅಲ್ಲಿರುವ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರು ಮೋದಿಯವರ ಕಟ್ಟಾ ವಿರೋಧಿ. ಮೋದಿಯನ್ನು ದೂರ ಇಟ್ಟು ನಿತೀಶ್ ಅವರನ್ನು ಪಕ್ಕಕ್ಕಿಟ್ಟುಕೊಂಡದ್ದು ಕೇವಲ ಕಾಕತಾಳೀಯ ಇರಲಾರದು. ಈ ಮೂಲಕ ಭವಿಷ್ಯದ ರಾಜಕೀಯದ ಸೂಚನೆಯನ್ನು ಕೊಡುವ ಪ್ರಯತ್ನವನ್ನು ಅಡ್ವಾಣಿ ಮಾಡಿದ್ದಾರೆಯೇ?
ಬಿಜೆಪಿ ಅಧಿಕಾರದಲ್ಲಿರುವ ಎರಡನೇ ರಾಜ್ಯ ಮಧ್ಯಪ್ರದೇಶ. ಆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಉಮಾ ಭಾರತಿ ಮುಖ್ಯಮಂತ್ರಿಯಾದರೂ ವಿವಾದದ ಸುಳಿಗೆ ಸಿಕ್ಕಿ ರಾಜೀನಾಮೆ ನೀಡಬೇಕಾಯಿತು. ಅದರ ನಂತರ ಮುಖ್ಯಮಂತ್ರಿಯಾದ ಬಾಬುಲಾಲ್ ಗೌರ್ ಕೂಡಾ ಬಹಳ ದಿನ ಅಧಿಕಾರದಲ್ಲಿ ಉಳಿಯಲಿಲ್ಲ. ಆಗ ಆ ಸ್ಥಾನಕ್ಕೆ ಬಂದವರು ಒಂದು ಕಾಲದ ಉಮಾಭಾರತಿ ಶಿಷ್ಯ ಶಿವರಾಜ್‌ಸಿಂಗ್ ಚೌಹಾಣ್.
ಸ್ವಲ್ಪಕಾಲದಲ್ಲಿಯೇ ಗುರುಶಿಷ್ಯರ ಸಂಬಂಧ ಕೆಟ್ಟುಹೋಗಿದ್ದಲ್ಲದೆ ಉಮಾಭಾರತಿಯವರು ಪಕ್ಷದಿಂದಲೇ ಉಚ್ಚಾಟನೆಗೊಂಡರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಮಾಭಾರತಿ ಅವರ ನೇತೃತ್ವದ ಪ್ರಾದೇಶಿಕ ಪಕ್ಷದ ವಿರುದ್ಧವೇ ಸೆಣಸಿ ಚೌಹಾಣ್ ಅವರು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದರು.
ಮೋದಿ ಅವರಂತೆ ವಿವಾದಕ್ಕೆ ಒಡ್ಡಿಕೊಳ್ಳದೆ, ಯಡಿಯೂರಪ್ಪನವರಂತೆ ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಆರೋಪದಲ್ಲಿಯೂ ಸಿಕ್ಕಿಹಾಕಿಕೊಳ್ಳದೆ ತನ್ನ ಪಾಡಿಗೆ ತಣ್ಣಗೆ ಕೆಲಸ ಮಾಡುತ್ತಿರುವವರು ಶಿವರಾಜ್‌ಸಿಂಗ್ ಚೌಹಾಣ್.
ಈಗ ಇದ್ದಕ್ಕಿದ್ದಂತೆ ಉಮಾಭಾರತಿ ಮರಳಿ ಪಕ್ಷ ಸೇರಿದ್ದಲ್ಲದೆ ಅಡ್ವಾಣಿಯವರ ರಥಯಾತ್ರೆಯ ಪ್ರಮುಖ ಸಾರಥಿಯಾಗಿದ್ದಾರೆ. ದೂರವೇ ಇಟ್ಟಿದ್ದ ಉಮಾಭಾರತಿಯನ್ನು ಪಕ್ಕಕ್ಕೆ ಕರೆದು ಆಕೆ ತನ್ನ ಎರಡನೇ ಮಗಳು ಎಂದು ಹೇಳುವಷ್ಟು ಮಮಕಾರವನ್ನು ಅಡ್ವಾಣಿ ತೋರಿದ್ದಾರೆ.

ಉಮಾಭಾರತಿ ಕುಣಿದಾಡಲು ಇಷ್ಟು ಸಾಕು. ರಥಯಾತ್ರೆ ಮುಗಿದ ನಂತರ ರಥದಿಂದ ಇಳಿದು ಅವರು ನೇರವಾಗಿ ಹೋಗುವುದು ಮಧ್ಯಪ್ರದೇಶಕ್ಕೆ. ಅಲ್ಲಿನ ಮುಖ್ಯಮಂತ್ರಿ ಕುರ್ಚಿ ತನ್ನದೇ ಎಂದು ಹೇಳಿ ಚೌಹಾಣ್ ಅವರನ್ನು ಕೆಳಗಿಳಿಯಲು ಹೇಳಿದರೂ ಅಚ್ಚರಿ ಇಲ್ಲ. ಆ ಹಂತಕ್ಕೆ ಹೋಗದಿದ್ದರೂ ಉಮಾಭಾರತಿಯವರ ಈ ಹೊಸ ಪಾತ್ರ ಚೌಹಾಣ್ ಅವರನ್ನು ಅಭದ್ರಗೊಳಿಸಿರುವುದು ನಿಜ.

ಕೇಂದ್ರದಲ್ಲಿ  ಪಕ್ಷ ಅಧಿಕಾರಕ್ಕೆ ಬರುವುದು ಖಾತರಿ ಇಲ್ಲದಿರುವ ಈ ಸಂದರ್ಭದಲ್ಲಿ ಉಮಾಭಾರತಿ ಮಧ್ಯಪ್ರದೇಶದ ಚುನಾವಣಾ ಅಖಾಡಕ್ಕೆ ಇಳಿಯಬಹುದು. ಕಷ್ಟಕಾಲದಲ್ಲಿ ಪಕ್ಷವನ್ನು ಸಂಭಾಳಿಸಿಕೊಂಡು ಬಂದ ಚೌಹಾಣ್‌ಗೆ ರಥಯಾತ್ರೆಯ ಸಂದರ್ಭದಲ್ಲಿ ಉಮಾಭಾರತಿಯವರನ್ನು ಕೊಡುಗೆಯಾಗಿ ನೀಡುವ ಮೂಲಕ ಅಡ್ವಾಣಿಯವರು ಏನು ಹೇಳಲು ಹೊರಟಿದ್ದಾರೆ?
ಬಿಜೆಪಿ ಅಧಿಕಾರದಲ್ಲಿರುವ ಮೂರನೇ ರಾಜ್ಯ ಕರ್ನಾಟಕ. ಈ ರಾಜ್ಯದಲ್ಲಿ ಜೈಲುಯಾತ್ರೆಗೆ ಹೊರಟವರ ಸಾಲನ್ನು ನೋಡಿದರೆ ಅವರ ಪಕ್ಷದಲ್ಲಿ ಅಳಿದುಳಿದ ಪ್ರಾಮಾಣಿಕರು ಕೂಡಾ ಹೊರಗೆ ಮುಖ ಎತ್ತಿ ಅಡ್ಡಾಡಲಾಗದ ವಾತಾವರಣ ಇದೆ. ಈ ಪರಿಸ್ಥಿತಿಯಲ್ಲಿ ರಥಯಾತ್ರೆ ಹೊರಡುವುದೆಂದರೆ ಜನರನ್ನು ಹುಡುಕಿಕೊಂಡು ಹೋಗಿ ಮುಖಾಮುಖಿಯಾಗಿ ಅವರು ಎತ್ತುವ ಪ್ರಶ್ನೆಗಳಿಗೆ ತಮ್ಮನ್ನು ಒಡ್ಡಿಕೊಳ್ಳುವುದೆಂದೇ ಅರ್ಥ.

ಕರ್ನಾಟಕದ ಬಿಜೆಪಿ ನಾಯಕರ ಭ್ರಷ್ಟಾಚಾರದ ಚರ್ಚೆ ದೇಶವ್ಯಾಪಿ ನಡೆಯುತ್ತಿರುವುದೇ ಅಡ್ವಾಣಿಯವರ ರಥಯಾತ್ರೆಯಿಂದ ಎಂದಾಗಿದೆ. ಭ್ರಷ್ಟಾಚಾರದ ವಿರುದ್ಧ ಜನ ಮಾತನಾಡುವಾಗ ತಮ್ಮವರ ಹೆಸರನ್ನೇ ಮೊದಲು ಚರ್ಚೆಯ ಮೇಜಿಗೆ ಎಳೆದುಕೊಳ್ಳುತ್ತಾರೆ ಎಂದು ಅವರಿಗೆ ಗೊತ್ತಾಗಲಿಲ್ಲವೇ? ಇದರಿಂದ ಪಕ್ಷಕ್ಕೆ ಮುಜುಗರ ಉಂಟಾಗಬಹುದೆಂದು ಅಡ್ವಾಣಿಯವರಂತಹ ಸೂಕ್ಷ್ಮಜ್ಞರು ಊಹಿಸಿರಲಿಲ್ಲವೇ? ಇಲ್ಲ, ಇಂತಹದ್ದೊಂದು ಚರ್ಚೆ ನಡೆಯಬೇಕೆಂಬುದೇ ಅಡ್ವಾಣಿ ಅವರ ಉದ್ದೇಶವೇ?
ಪಕ್ಷದ ಮೇಲಿರುವ ದೆಹಲಿ ನಿಯಂತ್ರಣವನ್ನು ಸಡಿಲುಗೊಳಿಸಲಿಕ್ಕಾಗಿಯೇ ಆರ್‌ಎಸ್‌ಎಸ್ ಮಹಾರಾಷ್ಟ್ರದ ನಿತಿನ್ ಗಡ್ಕರಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದ್ದು. ಇದನ್ನು ವಿರೋಧಿಸಿದವರು `ಡೆಲ್ಲಿ-4~ ಎಂದೇ ಕರೆಯಲಾಗುವ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಮತ್ತು ಅನಂತಕುಮಾರ್.
ಇವರೆಲ್ಲರನ್ನು ಒಂದು ಕಾಲದಲ್ಲಿ ಬೆಳೆಸಿದವರು ಅಡ್ವಾಣಿ. ಆದರೆ ಅವರನ್ನು ಪಕ್ಕಕ್ಕೆ ಸರಿಸುವ ಮೂಲಕ ಆರ್‌ಎಸ್‌ಎಸ್ ಅಡ್ವಾಣಿ ಯುಗ ಮುಗಿಯಿತು ಎನ್ನುವ ಸಂದೇಶವನ್ನು ನೀಡಿತ್ತು.
ಅಡ್ವಾಣಿಯವರು ರಥಯಾತ್ರೆ ಪ್ರಾರಂಭಿಸಿದಾಗ ಬಿಜೆಪಿ ಆಳ್ವಿಕೆಯ ರಾಜ್ಯಗಳ ಯಾವ ಮುಖ್ಯಮಂತ್ರಿಯೂ ಅಲ್ಲಿರಲಿಲ್ಲ.  ಮುರಳಿ ಮನೋಹರ ಜೋಷಿ, ಯಶವಂತ್‌ಸಿನ್ಹಾ, ಜಸ್ವಂತ್ ಸಿಂಗ್ ಮೊದಲಾದ ಹಿರಿಯರ ನಾಯಕರೂ ಇರಲಿಲ್ಲ. ಅಲ್ಲಿದ್ದವರು ನಿತಿನ್ ಗಡ್ಕರಿ ಅವರನ್ನು ಈಗಲೂ ಒಳಗಿಂದೊಳಗೆ ವಿರೊಧಿಸುತ್ತಿರುವ ಮತ್ತು ಆರ್‌ಎಸ್‌ಎಸ್ ಉದ್ದೇಶಪೂರ್ವಕವಾಗಿ ದೂರ ಇಟ್ಟಿರುವ  `ಡೆಲ್ಲಿ-4~ನ ಸದಸ್ಯರು.
ಅಡ್ವಾಣಿಯವರ ಹಿಂದಿನ ಐದೂ ಯಾತ್ರೆಗಳು ಭಾರತೀಯ ಜನತಾ ಪಕ್ಷದ ಒಮ್ಮತದ ತೀರ್ಮಾನವಾಗಿದ್ದವು. ಅದಕ್ಕೆ ಆರ್‌ಎಸ್‌ಎಸ್, ವಿಶ್ವಹಿಂದೂ ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿದಂತೆ ಸಂಘ ಪರಿವಾರಕ್ಕೆ ಸೇರಿರುವ ಎಲ್ಲ ಸಂಘಟನೆಗಳ ಬೆಂಬಲವೂ ಇತ್ತು.

ಅಡ್ವಾಣಿಯವರ ಮೊದಲ ರಥಯಾತ್ರೆ ರಾಮಮಂದಿರ ನಿರ್ಮಾಣದ ಸಂಕಲ್ಪವನ್ನು ಸಾರಿದ ಬಿಜೆಪಿಯ ಪಾಲಂಪುರ ಕಾರ‌್ಯಕಾರಿಣಿಯ ಐತಿಹಾಸಿಕ ಗೊತ್ತುವಳಿಯಿಂದ ಪ್ರೇರಿತವಾಗಿತ್ತು. ಆದರೆ ಈಗಿನ ರಥಯಾತ್ರೆಯದ್ದು ಅಡ್ವಾಣಿಯವರ ಸ್ವಯಂಘೋಷಣೆ.
ಲೋಕಸಭೆಯಲ್ಲಿ ಅಡ್ವಾಣಿಯವರು ಇದ್ದಕ್ಕಿದ್ದಂತೆ `ಭ್ರಷ್ಟಾಚಾರದ ವಿರುದ್ಧ ಜನಜಾಗೃತಿಗೆ ಯಾತ್ರೆ ಹೊರಡಲಿದ್ದೇನೆ~ ಎಂದು ಘೋಷಿಸಿದಾಗ ಅಚ್ಚರಿಪಟ್ಟವರು ವಿರೋಧಿ ಪಕ್ಷಗಳಲ್ಲ, ಅದು ಸಂಘ ಪರಿವಾರ.
ತನ್ನ ವಿರೋಧವನ್ನು ಮುಚ್ಚಿಟ್ಟುಕೊಳ್ಳದ ಆರ್‌ಎಸ್‌ಎಸ್ ನಾಯಕರು ಅಡ್ವಾಣಿ ಅವರನ್ನು ಖುದ್ದಾಗಿ ನಾಗಪುರಕ್ಕೆ ಕರೆಸಿಕೊಂಡು ರಥಯಾತ್ರೆಯನ್ನು ಕೈಬಿಡುವಂತೆ ಹೇಳಿದ್ದಾರೆ. ಅದಕ್ಕೆ ಒಪ್ಪದಿದ್ದಾಗ ತಮ್ಮನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಬಾರದೆಂಬ ಷರತ್ತು ಹಾಕಿ ಒಪ್ಪಿಗೆ ನೀಡಿದ್ದಾರೆ.
ಆರ್‌ಎಸ್‌ಎಸ್ ಇಚ್ಛೆಗೆ ವಿರುದ್ಧವಾಗಿ ಇಂತಹದ್ದೊಂದು ಪಕ್ಷದ ಕಾರ್ಯಕ್ರಮವನ್ನು ಅಡ್ವಾಣಿಯವರು ಹಮ್ಮಿಕೊಂಡಿದ್ದು ಅವರ ರಾಜಕೀಯ ಜೀವನದಲ್ಲಿಯೇ ಮೊದಲ ಬಾರಿ ಇರಬಹುದು. ಜಿನ್ನಾ ಪ್ರಕರಣದಲ್ಲಿಯೂ ಕೊನೆಗೆ ಅಡ್ವಾಣಿ ಆರ್‌ಎಸ್‌ಎಸ್ ಆದೇಶಕ್ಕೆ ಶರಣಾಗಿ ತಲೆದಂಡ ಕೊಟ್ಟಿದ್ದರು. ಆದರೆ ಯಾಕೋ ಈ ಬಾರಿ ತಿರುಗಿಬಿದ್ದಿದ್ದಾರೆ.
ದೇಶದ ಜನ ಅಸ್ತಿತ್ವದಲ್ಲಿರುವ ಎಲ್ಲ ಪಕ್ಷಗಳ ಬಗ್ಗೆ ಭ್ರಮನಿರಸನಕ್ಕೀಡಾಗಿರುವ ಹೊತ್ತಿನಲ್ಲಿ ರಾಜಕೀಯ ಬಂಡಾಯಗಳಿಗೆ ನೆಲ ಹದವಾಗಿದೆ. ಸ್ವಲ್ಪ ಇತಿಹಾಸವನ್ನು ಕೆದಕಿದರೆ ಎಪ್ಪತ್ತು, ಎಂಬತ್ತು ಮತ್ತು ತೊಂಬತ್ತರ ದಶಕದ ಕೊನೆಭಾಗದಲ್ಲಿಯೂ ಹೆಚ್ಚುಕಡಿಮೆ ಇಂತಹದ್ದೇ ಪರಿಸ್ಥಿತಿ ಇದ್ದುದನ್ನು ಕಾಣಬಹುದು.

ಅದನ್ನು ಬಳಸಿೊಂಡೇ ಜನತಾ, ಸಂಯುಕ್ತರಂಗ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗಗಳು ಅಧಿಕಾರಕ್ಕೆ ಬಂದದ್ದು. ಎಲ್ಲ ಪಕ್ಷಗಳಲ್ಲಿಯೂ ನಡೆದ ಸಣ್ಣಸಣ್ಣ ಬಂಡಾಯಗಳ ಮೂಲಕವೇ ಹೊರಬಂದ ನಾಯಕರು ಒಟ್ಟಾಗಿ ಆಗಿನ ಪರ್ಯಾಯ ರಾಜಕೀಯವನ್ನು ರೂಪಿಸಿದ್ದರು;
ಸಕ್ರಿಯವಾಗಿದ್ದ ಯಾವುದೇ ಒಂದು ಪಕ್ಷ ಪರ್ಯಾಯವಾಗಿದ್ದಲ್ಲ. ಅಣ್ಣಾ ಹಜಾರೆ ಚಳವಳಿ ಅಂತಿಮವಾಗಿ ಇಂತಹದ್ದೊಂದು ಪರ್ಯಾಯ ರಾಜಕೀಯ ರೂಪುಗೊಳ್ಳಲು ನೆರವಾಗಬಹುದು ಎಂಬ ನಿರೀಕ್ಷೆ ಅದರ ನಾಯಕರ ಬಾಲಿಶ ನಡವಳಿಕೆಯಿಂದಾಗಿ ಹುಸಿಯಾಗತೊಡಗಿದೆ.
ಆದ್ದರಿಂದ ಅಡ್ವಾಣಿಯವರ ಬಂಡಾಯಕ್ಕೆ ದೇಶದ ಸಮಕಾಲೀನ ರಾಜಕೀಯದಲ್ಲಿ ಅವಕಾಶ ಖಂಡಿತ ಇದೆ. ಅಂತಹ ದಿಟ್ಟತನವನ್ನು ತೋರಿದರೆ ಅವರ ಮೊದಲ ರಥಯಾತ್ರೆಯ ಪರಿಣಾಮವನ್ನು ಜನ ಮರೆತುಬಿಡಬಹುದು. ಆ ಬಗ್ಗೆ ಈಗಾಗಲೇ ಅವರು ವಿಷಾದ ವ್ಯಕ್ತಪಡಿಸಿರುವುದರಿಂದ ಕ್ಷಮಿಸುವುದು ಕಷ್ಟವಾಗಲಾರದು.
ಆದರೆ ತನ್ನ ಬಂಡುಕೋರತನವನ್ನು ಒಂದು ತಾರ್ಕಿಕ ಅಂತ್ಯದ ಕಡೆಗೆ ಕೊಂಡೊಯ್ಯುವ ಧೈರ್ಯ ಅಡ್ವಾಣಿಯವರಲ್ಲಿದೆಯೇ ಎನ್ನುವುದು ಬಹುದೊಡ್ಡ ಪ್ರಶ್ನೆ. ಅವರ ಮುಂದೆ ಇರುವುದು ಎರಡೇ ಎರಡು ಆಯ್ಕೆ.

ಒಂದೋ ಕಣ್ಣು-ಕಿವಿ-ಬಾಯಿ ಎಲ್ಲವನ್ನೂ ಮುಚ್ಚಿಕೊಂಡು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಸದಸ್ಯನಾಗಿ ರಾಜಕೀಯ ನಿವೃತ್ತಿ ಜೀವನವನ್ನು ಆರಾಮವಾಗಿ ಕಳೆಯುವುದು, ಇಲ್ಲವೇ, ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ನಾಯಕತ್ವ ನೀಡಿ ಒಂದಷ್ಟು ಹಳೆಯ ಪಾಪಗಳಿಗೆ ಪ್ರಾಯಶ್ಚಿತ ಮಾಡಿಕೊಳ್ಳುವುದು.
`ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದುಕೊಂಡೇ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇನೆ~ ಎಂದು ಅಡ್ವಾಣಿಯವರು ದೇಶಕ್ಕೆ ಒಂದಲ್ಲ, ಮೂರು ಸುತ್ತು ಯಾತ್ರೆ ನಡೆಸಿದರೂ ಅದೊಂದು ಆರೋಗ್ಯ ಸುಧಾರಣೆಯ ವ್ಯಾಯಾಮವಾಗಬಹುದೇ ಹೊರತು ಅದಂದ ಯಾವ ಉದ್ದೇಶವೂ ಈಡೇರಲಾರದು.