Tuesday, May 1, 2012

ಸಚಿನ್, ರಾಜ್ಯಸಭೆ ನಿಮ್ಮ ಮೈದಾನ ಅಲ್ಲ April 30, 2012

ಕ್ರಿಕೆಟ್ ಜಗತ್ತಿನ `ದೇವರು` ಸಚಿನ್ ತೆಂಡೂಲ್ಕರ್  ಪ್ರಜಾಪ್ರಭುತ್ವದ ಗರ್ಭಗುಡಿಯಾದ ಸಂಸತ್ ಪ್ರವೇಶಿಸಿದ್ದಾರೆ. `ದೇವರು` ಇದ್ದಲ್ಲಿ ಭಕ್ತಿ-ಆರಾಧನೆಗಳಿರುತ್ತವೆ, ಪ್ರಶ್ನೆ-ವಿಮರ್ಶೆಗಳು ಇರುವುದಿಲ್ಲ. 

ರಾಜ್ಯಸಭೆಗೆ ಸಚಿನ್ ನಾಮಕರಣಗೊಂಡದ್ದನ್ನು ಸ್ವಾಗತಿಸುತ್ತಿರುವವರ ಮನಸ್ಸಲ್ಲಿ ಇಂತಹದ್ದೊಂದು ಕುರುಡು ಭಕ್ತಿ ಇದೆ. ಸಚಿನ್ ವಿಶ್ವ ಕಂಡ ಅದ್ಭುತ ಕ್ರಿಕೆಟಿಗ.  ಇಂತಹ ಇನ್ನೊಬ್ಬ ಆಟಗಾರ ಈ ನೆಲದಲ್ಲಿ ಮತ್ತೆ ಹುಟ್ಟಲಾರ ಎಂದು ಜನ ನಂಬುವಷ್ಟು ಎತ್ತರಕ್ಕೆ ಬೆಳೆದವರು ಸಚಿನ್. ಅವರ ಸಾಧನೆಗೆ ಯಾವ ಪ್ರಶಸ್ತಿ-ಗೌರವವೂ ಕಡಿಮೆಯೇ. ಆದರೆ ರಾಜ್ಯಸಭೆಗೆ ನಾಮಕರಣ? ಮೊದಲನೆಯದಾಗಿ ರಾಜ್ಯಸಭೆಯ ಸದಸ್ಯತ್ವ ಪ್ರಶಸ್ತಿಯೂ ಅಲ್ಲ, ಗೌರವವೂ ಅಲ್ಲ.
 
ಹೌದೆಂದು ತಿಳಿದುಕೊಂಡವರು ಮತ್ತೊಮ್ಮೆ ಸಂವಿಧಾನವನ್ನು ಓದಬೇಕು. ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ರಾಜ್ಯಸಭೆಗೆ ಮನೆ ಹಿರಿಯನ ಪಾತ್ರ. ಪ್ರಜೆಗಳೇ ನೇರವಾಗಿ ಆರಿಸಿ ಕಳುಹಿಸುವ ಸದಸ್ಯರ ಮೂಲಕ ರೂಪುಗೊಂಡ ಲೋಕಸಭೆಗಿಂತ ರಾಜ್ಯಸಭೆಗೆ ಮೇಲಿನ ಸ್ಥಾನ.
 
ಲೋಕಸಭೆ ಕೆಳಮನೆಯಾದರೆ ರಾಜ್ಯಸಭೆ ಮೇಲ್ಮನೆ. ವಿಧಾನಸಭಾ ಸದಸ್ಯರೇ ಆರಿಸಿ ಕಳುಹಿಸುವ ರಾಜ್ಯಸಭಾ ಸದಸ್ಯರು ಸಂಸತ್‌ನಲ್ಲಿ ರಾಜ್ಯದ ಹಕ್ಕು ಪಾಲಕರಾಗಿ ಕಾರ್ಯನಿರ್ವಹಿಸಬೇಕೆನ್ನುವುದು ಸಂವಿಧಾನದ ಆಶಯ.
 
ಈ ಹಿನ್ನೆಲೆಯಲ್ಲಿಯೇ ಇದನ್ನು `ರಾಜ್ಯಗಳ ಪರಿಷತ್` ಎನ್ನುವುದು. ಎದುರಾಗುವ ಆಪತ್ತುಗಳಿಂದ ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸುವ ಉದ್ದೇಶ ಕೂಡಾ ರಾಜ್ಯಸಭೆ ರಚನೆಯ ಹಿನ್ನೆಲೆಯಲ್ಲಿ ಕೆಲಸ ಮಾಡಿದೆ. 

ರಾಜ್ಯಗಳು ಮತ್ತು ರಾಜ್ಯಸಭೆಯ ಸಂಬಂಧ ಅಷ್ಟೊಂದು ಆಪ್ತವಾದುದು. ಬುದ್ದಿಜೀವಿಗಳು ಮತ್ತು ವಿವಿಧ ಕ್ಷೇತ್ರಗಳ ಅನುಭವಿಗಳಿಗೆ ಸಂಸದೀಯ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಮೂಲಕ ರಾಷ್ಟ್ರನಿರ್ಮಾಣದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳುವುದು ರಾಜ್ಯಸಭೆ ರಚನೆಯ ಇನ್ನೊಂದು ಉದ್ದೇಶ. 

ಪ್ರಧಾನಿ ಮನಮೋಹನ್‌ಸಿಂಗ್ ಅವರೂ ಸೇರಿದಂತೆ ಕೇಂದ್ರ ಸಂಪುಟದಲ್ಲಿ ಮಹತ್ವದ ಸಚಿವ ಖಾತೆಗಳನ್ನು ಹೊಂದಿದ್ದವರ ಪಟ್ಟಿಯನ್ನು ನೋಡಿದರೆ ಈ ಉದ್ದೇಶ ಇನ್ನಷ್ಟು ಸ್ಪಷ್ಟವಾಗುತ್ತದೆ. ರಾಜ್ಯಸಭೆಯ ಒಟ್ಟು ಬಲ 245. ಇದರಲ್ಲಿ 233 ಸ್ಥಾನಗಳನ್ನು ರಾಜ್ಯಗಳ ಪ್ರತಿನಿಧಿಗಳ ರೂಪದಲ್ಲಿ ವಿಧಾನಸಭಾ ಸದಸ್ಯರು ಚುನಾವಣೆ ಮೂಲಕ ಆಯ್ಕೆ ಮಾಡುತ್ತಾರೆ. 

ಉಳಿದ ಹನ್ನೆರಡು ಸ್ಥಾನಗಳಿಗೆ  ಸಾಹಿತ್ಯ, ವಿಜ್ಞಾನ,ಕಲೆ ಮತ್ತು ಸಮಾಜಸೇವೆಯ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ರಾಷ್ಟ್ರಪತಿಗಳು ನಾಮಕರಣ ಮಾಡುತ್ತಾರೆ, ಚುನಾವಣೆ ನಡೆಯುವುದಿಲ್ಲ. ಹೆಸರಿಗೆ ರಾಷ್ಟ್ರಪತಿಗಳ ನಾಮಕರಣ ಎಂದಿದ್ದರೂ ವಾಸ್ತವದಲ್ಲಿ ಆಡಳಿತಾರೂಢ ಪಕ್ಷ ಸೂಚಿಸಿದ ಹೆಸರುಗಳಿಗೆ ಮೊಹರು ಒತ್ತುವುದಷ್ಟೇ ಅವರ ಕೆಲಸ.

ಆದರೆ ಇತ್ತೀಚಿನ ದಿನಗಳಲ್ಲಿ ಸಂವಿಧಾನ ರಚನೆಕಾರರ ಆಶಯವನ್ನು ಭಂಗಗೊಳಿಸುವಂತಹ ವಿದ್ಯಮಾನಗಳು ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆ ಮತ್ತು ನಾಮಕರಣಗಳಲ್ಲಿ ನಡೆಯುತ್ತಿವೆ.
 
ಚುನಾವಣೆಯಲ್ಲಿ `ದುಡ್ಡಿನ ದೊಡ್ಡಪ್ಪ`ಗಳಿಗೆ ರಾಜ್ಯಸಭಾ ಸ್ಥಾನಗಳನ್ನು `ಮಾರಾಟ` ಮಾಡಲಾಗುತ್ತಿದೆ ಎಂಬ ಆರೋಪ ಎಡಪಕ್ಷಗಳನ್ನು ಹೊರತುಪಡಿಸಿ ಉಳಿದೆಲ್ಲ ರಾಜಕೀಯ ಪಕ್ಷಗಳ ಮೇಲೆ ಇವೆ. ಈ ಪಕ್ಷಗಳ ಆಯ್ಕೆಯ ಮೇಲೆ ಕಣ್ಣಾಡಿಸಿದರೆ ಈ ಆರೋಪಕ್ಕೆ ಪುರಾವೆಗಳೂ ಸಿಗುತ್ತವೆ. 

ಇತ್ತೀಚೆಗಷ್ಟೇ ಜಾರ್ಖಂಡ್‌ನಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಅಂಶುಮಾನ್ ಮಿಶ್ರಾ ಎಂಬ ಉದ್ಯಮಿ ಬಿಜೆಪಿ ನಾಯಕರನ್ನು ಒಲಿಸಿಕೊಂಡು ಸ್ಪರ್ಧಿಸಲು ಬಯಸಿದ್ದ. ಎಲ್.ಕೆ.ಅಡ್ವಾಣಿ , ಯಶವಂತ್‌ಸಿನ್ಹಾ ಮೊದಲಾದವರ ವಿರೋಧದಿಂದ ಅದು ಸಾಧ್ಯ ಆಗಲಿಲ್ಲ. 

ಆದರೆ ಬೇರೊಬ್ಬ ಅಭ್ಯರ್ಥಿಯ ಸಂಬಂಧಿಕರಿಂದ ಚುನಾವಣಾ ಅಧಿಕಾರಿಗಳು ಎರಡು ಕಾಲು ಕೋಟಿ ರೂಪಾಯಿ ವಶಪಡಿಸಿಕೊಂಡ ನಂತರ `ಮತ ಖರೀದಿ`ಯ ಪ್ರಯತ್ನ ನಡೆಯುತ್ತಿರುವುದು ಖಾತರಿಯಾಗಿ ಆ ಚುನಾವಣೆಯನ್ನೇ ಆಯೋಗ ರದ್ದುಮಾಡಬೇಕಾಯಿತು.

25-30 ವರ್ಷಗಳ ಹಿಂದೆ ಉದ್ಯಮಿಗಳ ಜತೆ ನೇರವಾಗಿ ಗುರುತಿಸಿಕೊಳ್ಳಲು ರಾಜಕೀಯ ಪಕ್ಷಗಳು ಹಿಂಜರಿಯುತ್ತಿದ್ದವು. 1975ರಲ್ಲಿ ಜನಸಂಘ ವೀರೇನ್ ಶಹಾ ಎಂಬ ಉದ್ಯಮಿಯನ್ನು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಮಾಡಿದಾಗ ಯಾವ ರೀತಿಯ ಮುಜುಗರದ ಪರಿಸ್ಥಿತಿಯನ್ನು ಎದುರಿಸಬೇಕಾಯಿತು ಎನ್ನುವುದನ್ನು ಹಿರಿಯ ಬಿಜೆಪಿ ನಾಯಕರು ಈಗಲೂ ನೆನೆಸಿಕೊಳ್ಳುತ್ತಾರೆ. 

ನಂತರದ ದಿನಗಳಲ್ಲಿ ಮುಖ್ಯವಾಗಿ ಆರ್ಥಿಕ ಉದಾರೀಕರಣದ ಶಕೆಯ ನಂತರ ಅನೈತಿಕತೆ ಎಂದು ಆರೋಪಿಸುವಷ್ಟರ ಮಟ್ಟಿಗೆ ಉದ್ಯಮಿಗಳು ಮತ್ತು ರಾಜಕಾರಣಿಗಳ ಸಂಬಂಧ ಬೆಳೆಯುತ್ತಾ ಬಂತು. ಆಕಾಂಕ್ಷಿ ಉದ್ಯಮಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಅವರ ಪ್ರವೇಶಕ್ಕೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ರೂಪಿಸುವ ಪಿತೂರಿ ಕೂಡಾ ಪ್ರಾರಂಭವಾಯಿತು.
 
ರಾಜ್ಯಸಭೆಗೆ ಸ್ಪರ್ಧಿಸುವವರು ಅವರನ್ನು ಆರಿಸಿ ಕಳುಹಿಸುವ ರಾಜ್ಯದ ಮತದಾರರಾಗಿರಬೇಕು ಮತ್ತು `ಸಾಮಾನ್ಯ ನಿವಾಸಿಗಳು` ಆಗಿರಬೇಕು ಎಂಬ ಷರತ್ತು ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿತ್ತು. ಎನ್‌ಡಿಎ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ಮಾಡಿ `ದೇಶದ ಯಾವುದೇ ಭಾಗದಲ್ಲಿ ಮತದಾರರಾಗಿರುವರು` ರಾಜ್ಯಸಭೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತು. 

ಈ ತಿದ್ದುಪಡಿಯನ್ನು ಪ್ರಶ್ನಿಸಿ ಹಿರಿಯ ಪತ್ರಕರ್ತರಾದ ಕುಲದೀಪ್ ನಯ್ಯರ್ ಮತ್ತು ಇಂದರ್‌ಜಿತ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಾಡುತ್ತಿರುವ ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಿಲ್ಲ. ತಿದ್ದುಪಡಿ ರದ್ದಾದರೆ ಮನಮೋಹನ್‌ಸಿಂಗ್ ಸೇರಿದಂತೆ ಹಲವರು ರಾಜ್ಯಸಭಾ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ.

ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿನ ಇಂತಹ ಅಕ್ರಮಗಳು ನಾಮಕರಣಕ್ಕೆ ಸಂಬಂಧಿಸಿದಂತೆ  ಕೇಳಿ ಬರದೆ ಇದ್ದರೂ, ಈ ಅವಕಾಶವನ್ನು ರಾಜಕೀಯವಾಗಿ ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ಎಲ್ಲ ಪಕ್ಷಗಳೂ ಎದುರಿಸುತ್ತಿವೆ. 

ಆಡಳಿತಾರೂಢ ಪಕ್ಷಗಳು ನಾಮಕರಣದ ನೆಪದಲ್ಲಿ ಒಂದೆಡೆ ತಮ್ಮ ಪಕ್ಷದ ಸದಸ್ಯರನ್ನೇ ರಾಜ್ಯಸಭೆಗೆ ನಾಮಕರಣ ಮಾಡುತ್ತಾ ಬಂದಿದ್ದರೆ, ಇನ್ನೊಂದೆಡೆ ಗಣ್ಯರನ್ನು ನಾಮಕರಣಕ್ಕೆ ಆಯ್ಕೆ ಮಾಡುವಾಗಲೂ ಆ ಸ್ಥಾನಕ್ಕೆ ಬೇಕಾದ ಅರ್ಹತೆಗಿಂತಲೂ ಹೆಚ್ಚಾಗಿ ಅದರಿಂದ ಆಗಲಿರುವ ರಾಜಕೀಯ ಲಾಭದ ಲೆಕ್ಕಾಚಾರ ಮಾಡುತ್ತಾ ಬಂದಿರುವುದನ್ನು ಕಾಣಬಹುದು. 

ಇಲ್ಲಿಯವರೆಗೆ ನಾಮಕರಣಗೊಂಡ ಕ್ರಿಕೆಟಿಗ ಸಚಿನ್, ಚಿತ್ರತಾರೆ ರೇಖಾ ಸೇರಿದಂತೆ ರಾಜ್ಯಸಭೆಗೆ ನಾಮಕರಣಗೊಂಡ 121 ಸದಸ್ಯರ ಪಟ್ಟಿ ಮೇಲೆ ಕಣ್ಣಾಡಿಸಿದರೆ ಇದು ಇನ್ನಷ್ಟು ನಿಚ್ಚಳವಾಗಿ ಕಾಣುತ್ತದೆ. 

ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ ಅವರನ್ನು ಎದುರು ಹಾಕಿಕೊಳ್ಳದೆ ಹೋಗಿದ್ದರೆ ಇಲ್ಲವೇ ಕಾಂಗ್ರೆಸ್ ಬಗ್ಗೆ ಟೀಕೆ ಮಾಡಿದ್ದರೆ, ಸಚಿನ್ ಅವರ ನಾಮಕರಣಕ್ಕೆ ಕಾಂಗ್ರೆಸ್ ಮುಂದಾಗುತ್ತಿತ್ತೇ ಎನ್ನುವುದು ಪ್ರಶ್ನೆ.

ಈಗಿನ ರಾಜ್ಯಸಭೆಯಲ್ಲಿ ನಾಮಕರಣಗೊಂಡ ಹತ್ತು ಸದಸ್ಯರಿದ್ದಾರೆ. ಇವರಲ್ಲಿ ಕಾಂಗ್ರೆಸ್ ಸದಸ್ಯರಾದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಮತ್ತು ಬಾಲಚಂದ್ರ ಮುಂಗೇಕರ್ ಅವರು `ಗಣ್ಯರ` ಹೆಸರಲ್ಲಿ ನುಸುಳಿದವರು. ಉಳಿದಂತೆ ಜಾವೇದ್ ಅಖ್ತರ್ (ಸಾಹಿತಿ) ಎಚ್.ಕೆ.ದುವಾ (ಪತ್ರಕರ್ತ), ಅಶೋಕ್ ಗಂಗೂಲಿ (ಉದ್ಯಮಿ), ಬಿ.ಜಯಶ್ರಿ (ರಂಗಭೂಮಿ ಕಲಾವಿದೆ), ಅನು ಅಗಾ (ಉದ್ಯಮಿ) ರೇಖಾ (ಚಿತ್ರನಟಿ) ಮತ್ತು ಸಚಿನ್ ತೆಂಡೂಲ್ಕರ್(ಕ್ರಿಕೆಟಿಗ) ಅವರು ಗಣ್ಯರ ಕೋಟಾದಲ್ಲಿ ನಾಮಕರಣಗೊಂಡವರು. 

ಈ ಆರೂ ಮಂದಿ ತಮ್ಮ  ಕ್ಷೇತ್ರದಲ್ಲಿ ಸಾಧನೆ ಮೂಲಕ ಅಗ್ರಗಣ್ಯರೆಂಬ ಗೌರವಕ್ಕೆ ಪಾತ್ರರಾದವರು. ಆದರೆ ರಾಜ್ಯಸಭೆಯ ಇತಿಹಾಸವನ್ನು ನೋಡಿದರೆ ಈ `ಅಗ್ರಗಣ್ಯ`ರೆನಿಸಿಕೊಂಡ ಸದಸ್ಯರ ಸಾಧನೆ ನಿರಾಶಾದಾಯಕ.
 
ನಿಷ್ಕ್ರಿಯರೆನಿಸಿಕೊಂಡ ನಾಮಕರಣ ಸದಸ್ಯರಲ್ಲಿ ಹಿಂದಿ ಚಿತ್ರರಂಗದಿಂದ ಬಂದವರಿಗೆ ಮೊದಲ ಸ್ಥಾನ. 1999ರಿಂದ 2005ರ ವರೆಗೆ ರಾಜ್ಯಸಭಾ ಸದಸ್ಯರಾಗಿದ್ದ ಖ್ಯಾತ ಹಿಂದಿ ಗಾಯಕಿ ಲತಾ ಮಂಗೇಶ್ಕರ್ ಅವರು ಪ್ರಮಾಣ ವಚನ ಸ್ವೀಕರಿಸಲು ಹೋಗಿದ್ದನ್ನು ಬಿಟ್ಟರೆ ಎಂದೂ ಕಲಾಪದಲ್ಲಿ ಭಾಗವಹಿಸಿಯೇ ಇಲ್ಲ. 

ದಿಲೀಪ್‌ಕುಮಾರ್, ದಾರಾಸಿಂಗ್,ಧರ್ಮೇಂದ್ರ, ಶ್ಯಾಮ್ ಬೆನೆಗಲ್ ಸೇರಿದಂತೆ ರಾಜ್ಯಸಭೆಗೆ ನಾಮಕರಣಗೊಂಡ ಚಿತ್ರನಟರ ಸಂಸದೀಯ ಸಾಧನೆ ಶೂನ್ಯ. ಇವರಿಗೆಲ್ಲ ಹೋಲಿಸಿದರೆ ರಾಜ್ಯಸಭೆಯಲ್ಲಿದ್ದು ಸದ್ದು ಮಾಡಿದವರು ನಟಿ ಶಬನಾ ಅಜ್ಮಿ ಮಾತ್ರ.  `ಚಿರಯುವತಿ` ರೇಖಾ ಯಾವ ಸಾಲಿಗೆ ಸೇರಲಿದ್ದಾರೆ ಎನ್ನುವುದನ್ನು ನೋಡಬೇಕಾಗಿದೆ.

ಕರ್ನಾಟಕದವರಾದ ರಂಗಭೂಮಿ ಕಲಾವಿದೆ ಬಿ.ಜಯಶ್ರಿ ಅವರು ರಾಜ್ಯಸಭೆ ಪ್ರವೇಶಿಸಿ ಎರಡು ವರ್ಷಗಳಾಗಿವೆ. ಇಲ್ಲಿಯವರೆಗೆ ಅವರು ಸದನದಲ್ಲಿ ಒಂದೇ ಒಂದು ಪ್ರಶ್ನೆಯನ್ನು ಕೇಳಿಲ್ಲ. ವಿಶೇಷ ಪ್ರಸ್ತಾವ ಮಾಡಿಲ್ಲ. ಯಾವ ಮಸೂದೆಯ ಬಗ್ಗೆಯೂ ಮಾತನಾಡಿಲ್ಲ. 

ಆಶ್ಚರ್ಯವೆಂದರೆ ಟಿವಿ ಚಾನೆಲ್‌ಗಳಲ್ಲಿ ನೋಡುತ್ತಿರುವಾಗ ವಾಚಾಳಿಯಂತೆ ಕಾಣಿಸುವ ಜಾವೇದ್ ಅಖ್ತರ್  ಚರ್ಚೆಗಳಲ್ಲಿ ಒಂದಷ್ಟು ಹೊತ್ತು ಭಾಗವಹಿಸಿದ್ದು ಬಿಟ್ಟರೆ, ಪ್ರಶ್ನೆಗಳನ್ನು ಕೇಳಿದ ಇಲ್ಲವೆ ವಿಶೇಷ ಪ್ರಸ್ತಾವವನ್ನು ಮಾಡಿದ ದಾಖಲೆಗಳು ಇಲ್ಲ. ಉದ್ಯಮಿ ಅಶೋಕ್ ಗಂಗೂಲಿಯವರ ಸಾಧನೆಯೂ ಅಷ್ಟಕ್ಕಷ್ಟೆ. ಈ ವರೆಗೆ ರಾಜ್ಯಸಭೆಗೆ ನಾಮಕರಣಗೊಂಡ ಸದಸ್ಯರಲ್ಲಿ ಕ್ರಿಯಾಶೀಲರಾಗಿದ್ದವರೆಂದರೆ ಪತ್ರಕರ್ತರು ಮಾತ್ರ.
 
ನಾಮಕರಣಗೊಂಡ ಹಾಲಿ ಸದಸ್ಯರಲ್ಲಿ ಮಣಿ ಶಂಕರ್ ಅಯ್ಯರ್ ಅವರನ್ನು ಬಿಟ್ಟರೆ ಸಕ್ರಿಯವಾಗಿ ಕಲಾಪದಲ್ಲಿ ಭಾಗವಹಿಸುತ್ತಿರುವವರು ಹಿರಿಯ ಪತ್ರಕರ್ತ ಎಚ್.ಕೆ.ದುವಾ. ಆರ್.ಕೆ.ಕರಂಜಿಯಾ ಅವರಿಂದ ಹಿಡಿದು ಇತ್ತೀಚಿನ ಚಂದನ್ ಮಿತ್ರ ವರೆಗೆ ರಾಜ್ಯಸಭೆಗೆ ನಾಮಕರಣಗೊಂಡ ಪತ್ರಕರ್ತರೆಲ್ಲರೂ ಕಸಬುದಾರ ರಾಜಕಾರಣಿಗಳನ್ನು ಮೀರಿಸುವಂತೆ ಕಲಾಪದಲ್ಲಿ ಭಾಗವಹಿಸಿದ್ದಾರೆ.

ಆದರೆ ಸಚಿನ್ ತೆಂಡೂಲ್ಕರ್? ರಾಜ್ಯಸಭೆಯ ಕಲಾಪದಲ್ಲಿ ಭಾಗವಹಿಸುವಷ್ಟು ಸಮಯ ಅವರಲ್ಲಿದೆಯೇ ಎನ್ನುವುದು ಮೊದಲ ಪ್ರಶ್ನೆ. ಮಾರ್ಚ್‌ಗೆ ಕೊನೆಗೊಂಡ ಒಂದು ವರ್ಷದಲ್ಲಿ ಸಚಿನ್ 250 ದಿನ ಕ್ರಿಕೆಟ್ ಆಡಿದ್ದಾರೆ.
 
ಈಗಲೂ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಸೂಚನೆಯನ್ನು ಅವರು ನೀಡುತ್ತಿಲ್ಲ. ಹೀಗಿದ್ದಾಗ ರಾಜ್ಯಸಭಾ ಸದಸ್ಯತ್ವವನ್ನು ಅಲಂಕಾರಿಕ ಹುದ್ದೆಯನ್ನಾಗಿ ಸ್ವೀಕರಿಸುವುದಕ್ಕೆ ಏನು ಅರ್ಥ ಇದೆ? ನಿವೃತ್ತಿಯಾಗಲು ಅವರು ನಿರ್ಧರಿಸಿದರೂ ಬಿಡುವಿನ ಸಮಯವನ್ನು ಉಪಯೋಗಿಸಿಕೊಳ್ಳುವುದಕ್ಕೆ ಅವರದ್ದೇ ಆದ ಕ್ಷೇತ್ರ ಇದೆ.
 
ಅವರ ಅನುಭವದ ಅಗತ್ಯ ರಾಜಕೀಯ ಕ್ಷೇತ್ರಕ್ಕಿಂತ ಹೆಚ್ಚಾಗಿ ಕ್ರೀಡಾ ಕ್ಷೇತ್ರಕ್ಕೆ ಇದೆ. ಕ್ರಿಕೆಟ್ ಎನ್ನುವುದು ಒಂದು ಸರಳ ಕ್ರೀಡೆಯಾಗಿ ಉಳಿದಿಲ್ಲ, ಅದು ಉದ್ಯಮದ ಸ್ವರೂಪ ಪಡೆದು ಆಟಗಾರರೆಲ್ಲ ಹಣ ಗಳಿಸುವ ಯಂತ್ರಗಳಾಗಿ ಹೋಗಿದ್ದಾರೆ. 

ಸಚಿನ್ ತೆಂಡೂಲ್ಕರ್ ಎಂಬ ಮಹಾನ್ ತಾರೆ ಉದಿಯಮಾನವಾಗಿರುವ ಕಾಲದಲ್ಲಿಯೇ ಕ್ರಿಕೆಟ್ ಕ್ಷೇತ್ರ ಇಂತಹ ನೈತಿಕ ಅಧೋಗತಿಗೆ ತಲುಪಿರುವುದನ್ನು ಹೇಗೆ ತಳ್ಳಿಹಾಕುವುದು? ಈ ಅವನತಿಯಲ್ಲಿ ಸಚಿನ್ ಪಾಲಿಲ್ಲವೇ? 

ಹಿರಿಯರಿಂದ ಬಳುವಳಿಯಾಗಿ ಪಡೆದ  ಸ್ವಚ್ಚ ಕ್ರಿಕೆಟ್ ಮೈದಾನವನ್ನೇ  ಮುಂದಿನ ಜನಾಂಗಕ್ಕೆ ಬಿಟ್ಟು ಹೋಗುತ್ತಿದ್ದೇನೆ ಎಂದು ಎದೆಮುಟ್ಟಿ ಹೇಳುವ ಧೈರ್ಯ ಸಚಿನ್ ಅವರಿಗಿದೆಯೇ? ಇಲ್ಲ ಎಂದಾದರೆ ಕ್ರಿಕೆಟ್ ಕ್ಷೇತ್ರ ಕಳೆದುಕೊಳ್ಳುತ್ತಿರುವ ಗೌರವವನ್ನು ಮರಳಿ ಗಳಿಸಿಕೊಡುವ ಹೊಣೆ ಈ ಮಹಾನ್ ತಾರೆಗೆ ಇಲ್ಲವೇ?

ದೇಶದಲ್ಲಿರುವ ಬಹುತೇಕ ಕ್ರೀಡಾ ಸಂಸ್ಥೆಗಳ ಉನ್ನತ ಪದಾಧಿಕಾರ ಸ್ಥಾನಗಳಲ್ಲಿ ರಾಜಕಾರಣಿಗಳು ವಿರಾಜಮಾನರಾಗಿದ್ದಾರೆ. ಕ್ರೀಡಾ ಕ್ಷೇತ್ರದ ಅವನತಿಗೆ ಇದು ಮುಖ್ಯ ಕಾರಣ. ಸಚಿನ್ ಕ್ರೀಡಾ ಕ್ಷೇತ್ರವನ್ನು ರಾಜಕಾರಣದ ಹಿಡಿತದಿಂದ ಮುಕ್ತಗೊಳಿಸಿದರೆ ಅದಕ್ಕಿಂತ ದೊಡ್ಡ ಕೊಡುಗೆ ಬೇರೆ ಇರಲಾರದು. ಸಮಾಜದಲ್ಲಿ ತಾನು ಹೊಂದಿರುವ ಗೌರವದ ಸ್ಥಾನ ಮತ್ತು ಗಳಿಸಿರುವ ಜನಪ್ರಿಯತೆಯ ಬಲದಿಂದ ಇದನ್ನು ಮಾಡಿ ತೋರಿಸಲು ಅವರಿಗೆ ಸಾಧ್ಯ ಇದೆ.
 
ರಾಜ್ಯಸಭಾ ಸದಸ್ಯತ್ವವನ್ನು ಒಪ್ಪಿಕೊಂಡು ಸೋನಿಯಾಗಾಂಧಿ ಅವರ ನಿವಾಸಕ್ಕೆ ತೆರಳಿ ಕೃತಜ್ಞತೆ ಸೂಚಿಸಿ ಬರುವುದರಿಂದ ಇದನ್ನು ಮಾಡಲಾಗದು. ರಾಜ್ಯಸಭಾ ಸದಸ್ಯರಾಗಿ ಅಪರೂಪಕ್ಕೆ ಕಲಾಪದಲ್ಲಿ ಭಾಗವಹಿಸಿ ಕುಳಿತ ಆಸನವನ್ನು ಬಿಸಿಮಾಡಿ ಬರುವುದರಲ್ಲಿ ಏನೂ ಲಾಭ ಇಲ್ಲ. 

ಸಚಿನ್ ಅವರೊಬ್ಬ ಪ್ರತಿಭಾಶಾಲಿ ಆಟಗಾರನಿರಬಹುದು, ಕ್ರಿಕೆಟ್ ಕ್ಷೇತ್ರದಲ್ಲಿ ಅವರು ಯಶಸ್ಸನ್ನೂ ಗಳಿಸಿರಬಹುದು. ಆದರೆ ರಾಜಕೀಯ ಎನ್ನುವುದು ಬೇರೆಯೇ ಚೆಂಡಿನ ಆಟ. ಗೊತ್ತಿಲ್ಲದ ಆಟವನ್ನು ಆಡಲು ಹೊರಡುವವನು ಕ್ರೀಡಾಪಟು ಅಲ್ಲ. 

ದಲಿತ ಐಡೆಂಟಿಟಿಯ ಕೊನೆ ಇಲ್ಲದ ಬಿಕ್ಕಟ್ಟುಗಳು April 23, 2012

ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯಂದು `ಪ್ರಜಾವಾಣಿ` ಹೊರತಂದ ವಿಶೇಷ ಸಂಚಿಕೆ  ಉಂಟು ಮಾಡಿರುವ ಸಂಚಲನಕ್ಕೆ ಓದುಗರು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳೇ ಸಾಕ್ಷಿ. 

ವಿಶೇಷ ಎಂದರೆ ಸಾಮಾನ್ಯ ವ್ಯಕ್ತಿಗಳಿಂದ ಹಿಡಿದು ಸಾಹಿತಿಗಳು, ಸಮಾಜ ಸೇವಕರು, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳವರೆಗೆ ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 90ರಷ್ಟು ಓದುಗರು ದಲಿತೇತರರು. ಅವರ ಮನಸ್ಸಲ್ಲಿ ಮೂಡಿದ ಅಪರಾಧಿ ಪ್ರಜ್ಞೆ, ಆತ್ಮಾವಲೋಕನದ ಹಂಬಲ, ಬದಲಾವಣೆಯ ತುಡಿತಗಳನ್ನು ಅವರು ಬರೆದ ಪತ್ರಗಳಲ್ಲಿ ಕಾಣಬಹುದು. 

ಜಾತಿ-ಧರ್ಮಗಳಿಂದ  ಸೀಳಿ ಹೋಗಿರುವ ಸಮಾಜದಲ್ಲಿ ಈ ರೀತಿಯಲ್ಲಿ ಆಲೋಚನೆಯನ್ನಾದರೂ ಮಾಡಬಲ್ಲ ಜಾಗೃತ ಸಮುದಾಯ ಇದೆ ಎನ್ನುವುದೇ ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸುವಂತಹ ಬೆಳವಣಿಗೆ. 

ಆಶಯದ ಮಟ್ಟದಲ್ಲಿ ಇವೆಲ್ಲ ಸರಿ, ಆದರೆ ಆಚರಣೆಯಲ್ಲಿ ಈಗಲೂ ಅಸ್ಪೃಶ್ಯತೆಯಂತಹ ಅಮಾನವೀಯ ನಡವಳಿಕೆಯನ್ನು ಮೈಗೂಡಿಸಿಕೊಂಡಿರುವ ಮತ್ತು ಅದನ್ನು ಬೆಂಬಲಿಸುವ ಜನವರ್ಗ ದೊಡ್ಡಸಂಖ್ಯೆಯಲ್ಲಿ ನಮ್ಮ ನಡುವೆ ಇದೆ ಎನ್ನುವುದು ಆಶಯ ಮತ್ತು ಆಚರಣೆಯ ನಡುವಿನ ಕಂದಕವನ್ನು ತೋರಿಸುತ್ತದೆ.

ವಿಶೇಷ ಸಂಚಿಕೆಯನ್ನು ರೂಪಿಸುವಾಗ ನಮ್ಮ ಸಂಪಾದಕರು ನೀಡಿದ್ದ ಕೆಲವು ಸಲಹೆಗಳಲ್ಲಿ ಎರಡು ಪ್ರಮುಖವಾದುವುಗಳು. ನಮ್ಮಲ್ಲಿಯೇ ಯಾರಾದರೊಬ್ಬ ದಲಿತೇತರ ಸಹೋದ್ಯೋಗಿ ದಲಿತರ ಕೇರಿಗೆ ಹೋಗಿ ಒಂದು ದಿನ ಜತೆಯಲ್ಲಿಯೇ ಇದ್ದು ಅವರ ನಿತ್ಯ ಜೀವನದ ಯಥಾವತ್ ವರದಿಯನ್ನು ಮಾಡಬೇಕೆಂಬುದು ಅವುಗಳಲ್ಲೊಂದು. 

ಅದರಂತೆ ನಮ್ಮ ಮೈಸೂರಿನ ಹಿರಿಯ ವರದಿಗಾರ ಸುದೇಶ್ ದೊಡ್ಡಪಾಳ್ಯ ಅವರು ನಂಜನಗೂಡು ತಾಲ್ಲೂಕಿನ ಕಪ್ಪಸೋಗೆ ಎಂಬ ಊರಿಗೆ ಹೋಗಿ ಒಂದು ದಿನ ಅಲ್ಲಿದ್ದು ತಮ್ಮ ಅನುಭವವನ್ನು ದಾಖಲಿಸಿದ್ದರು. ಸಂಚಿಕೆಯ ಅತಿಥಿ ಸಂಪಾದಕರಾದ ದೇವನೂರ ಮಹಾದೇವ ಅವರಿಂದಲೂ ವಿಶೇಷ ಪ್ರಶಂಸೆಗೆ ಪಾತ್ರವಾದ ಈ ವರದಿ ಪ್ರಜ್ಞಾವಂತರೆಲ್ಲ ಆತ್ಮಸಾಕ್ಷಿಯನ್ನು ಕೆಣಕುವಂತಿತ್ತು. 

ಅದೇ ಅದರ ಉದ್ದೇಶ ಆಗಿತ್ತೇ ಹೊರತಾಗಿ ಯಾವುದೋ ಒಂದು ಊರಿನ ಮರ್ಯಾದೆ ತೆಗೆಯುವುದು ಇಲ್ಲವೇ ಜಗಳ ಹಚ್ಚುವುದು ಆಗಿರಲಿಲ್ಲ. ಕಪ್ಪಸೋಗೆ ಎಂಬ ಊರನ್ನು ಪ್ರಾತಿನಿಧಿಕವಾಗಿ ಆಯ್ಕೆಮಾಡಲಾಗಿತ್ತು. ಇದರ ಅರ್ಥ ಆ ಊರೊಂದನ್ನು ಬಿಟ್ಟು ಬೇರೆಲ್ಲೂ ಅಸ್ಪೃಶ್ಯತೆಯ ನಡವಳಿಕೆ ಇಲ್ಲ ಎಂದಲ್ಲ. ಅಲ್ಲಿಗಿಂತಲೂ ಭೀಕರವಾದ ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ಆಚರಿಸುವ ಊರುಗಳು ಇವೆ.

 ಆದರೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಿಂದ ಊರಿನ ಮರ್ಯಾದೆ ಹಾಳಾಯಿತೆಂದು ಅಲ್ಲಿನ ಒಂದು ವರ್ಗದ ಜನರು ಪ್ರತಿಭಟಿಸಿದ್ದಾರೆ. ಇದರಿಂದಾಗಿ ಅಲ್ಲಿ ನಿರ್ಮಾಣವಾಗಿದ್ದ ಬಿಗುವಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹೋಗಿ ನಾಲ್ಕುದಿನ ಕಾವಲು ನಿಲ್ಲಬೇಕಾಯಿತು. 

ನಮ್ಮ ವರದಿಗಾರರನ್ನು ಊರಿಗೆ ಕರೆದುಕೊಂಡು ಬಂದವನು ಎಂಬ ಶಂಕೆಯಿಂದ ಅದೇ ಊರಿನ ದಲಿತ ವಿದ್ಯಾರ್ಥಿಯೊಬ್ಬನನ್ನು ಬೆದರಿಸುವ ಪ್ರಯತ್ನಗಳೂ ನಡೆದಿವೆ. ಊರಲ್ಲಿ ಅಸ್ಪೃಶ್ಯತೆ ಆಚರಣೆ ನಡೆಯುತ್ತಿಲ್ಲ ಎಂದು ಯಾರೂ ಧೈರ್ಯದಿಂದ ಮುಂದೆ ಬಂದು ಹೇಳುತ್ತಿಲ್ಲ. ಅಂತಹ ನಡವಳಿಕೆಯಿಂದ ಊರಿನ ಮರ್ಯಾದೆ ಹಾಳಾಗುತ್ತಿದೆ ಎನ್ನುವ ಅವಮಾನವೂ ಅವರನ್ನು ಕಾಡುತ್ತಿಲ್ಲ. ಅವೆಲ್ಲವೂ ಪತ್ರಿಕೆಯಲ್ಲಿ ಪ್ರಕಟವಾಗಬಾರದಿತ್ತು ಎನ್ನುವುದಷ್ಟೇ ಅವರ ವಾದ. ಇದಕ್ಕೇನು ಪರಿಹಾರ?

 ಪೊಲೀಸರು ಒಂದಷ್ಟು ದಿನ ಕಾವಲು ಕಾಯಬಹುದು, ಅದರ ನಂತರ? ಕಪ್ಪಸೋಗೆ ಎನ್ನುವ ಊರು ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು. ಆ ಊರಲ್ಲಿ ಇಂತಹ ಘಟನೆ ನಡೆದಾಗ ಅಲ್ಲಿಗೆ ಮೊದಲು ಧಾವಿಸಿಹೋಗಬೇಕಾದವರು ಅಲ್ಲಿನ ಶಾಸಕರು. 

ಆದರೆ ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ನೊಂದಿರುವ ದಲಿತರಿಗೆ ನೆರವಾಗಬೇಕೆಂಬ ಪ್ರಾಮಾಣಿಕ ಉದ್ದೇಶ ಮೀಸಲು ಕ್ಷೇತ್ರದ ದಲಿತ ಪ್ರತಿನಿಧಿಗಳಿಗೆ ಇದ್ದರೂ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವ ಸ್ಥಿತಿಯಲ್ಲಿ ಅವರಿಲ್ಲ. 

ಎಲ್ಲ ಜಾತಿ-ಧರ್ಮಗಳ ಮತಗಳನ್ನು ಅವಲಂಬಿಸಿರುವ ಅವರು ಕೇವಲ ದಲಿತರ ಪರವಾಗಿ ನಿಂತರೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ. ಭವಿಷ್ಯದಲ್ಲಿ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದೆಂಬ ಎಚ್ಚರಿಕೆಯಿಂದಲೇ ಅಂಬೇಡ್ಕರ್ ಅವರು ದಲಿತ ಮತದಾರರಷ್ಟೇ ದಲಿತ ಪ್ರತಿನಿಧಿಗಳನ್ನು ಆಯ್ಕೆ ಮಾಡುವಂತಹ ಪ್ರತ್ಯೇಕ ಮತದಾನದ ಹಕ್ಕಿಗಾಗಿ ಒತ್ತಾಯಿಸಿದ್ದು.   

ಇತಿಹಾಸವನ್ನು ಕೆದಕಿ, ಪ್ರತ್ಯೇಕ ಮತದಾನ ಹಕ್ಕು ಯಾಕೆ ಸಿಗಲಿಲ್ಲ ಎನ್ನುವ ಚರ್ಚೆಯನ್ನು ಬೆಳೆಸುವುದರಿಂದ ಇನ್ನಷ್ಟು ಮನಸ್ಸುಗಳು ಒಡೆದುಹೋಗಬಹುದೇ ಹೊರತು ಬೇರೇನೂ ಲಾಭವಾಗಲಾರದು. ಇದಕ್ಕಾಗಿ ಬೇರೆಯೇ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. 

ಈ ಹಿನ್ನೆಲೆಯಲ್ಲಿ ದೇವನೂರ ಮಹಾದೇವ ಅವರು ವಿಶೇಷ ಸಂಚಿಕೆಯ ಸಂಪಾದಕೀಯಕ್ಕೆ ಸೂಚಿಸಿದ್ದ `ಸಾಮಾಜಿಕ ಪೊಲೀಸರು` ಎಂಬ ವಿಷಯದ ಬಗ್ಗೆ ಚರ್ಚೆ ನಡೆಯುವ ಅಗತ್ಯ ಇದೆ. ಜರ್ಮನಿಯೂ ಸೇರಿದಂತೆ ಕೆಲವು ದೇಶಗಳಲ್ಲಿ ಇಂತಹದ್ದೊಂದು ವ್ಯವಸ್ಥೆ ಇರುವುದನ್ನು ಅವರು ಹೇಳಿದ್ದರು. 

ಜಾತಿ ತಾರತಮ್ಯ ಇಲ್ಲವೇ ಅಸ್ಪೃಶ್ಯತೆಯ ಆಚರಣೆ ವಿಕೋಪಕ್ಕೆ ಹೋಗುವವರೆಗೆ ಕಾಯುತ್ತ ಕೂರದೆ, ಅಂತಹ ನಡವಳಿಕೆಗಳ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ಎರಡು ಪಂಗಡಗಳ ಜತೆ ಚರ್ಚೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎನ್ನುವುದು ಅವರ ಅಭಿಪ್ರಾಯ. 

ವೃತ್ತಿನಿರತ ರಾಜಕಾರಣಿಗಳನ್ನು ದೂರ ಇಟ್ಟು ಸಾಮಾಜಿಕ ಕಳಕಳಿ ಹೊಂದಿರುವ ಅಧಿಕಾರಿಗಳು,ಪ್ರಾಧ್ಯಾಪಕರು, ವಕೀಲರು, ಪತ್ರಕರ್ತರು, ಸಮಾಜಸೇವಕರು -ಹೀಗೆ ವಿವಿಧ ವರ್ಗಗಳ ಪ್ರತಿನಿಧಿಗಳನ್ನು ಈ `ಸಾಮಾಜಿಕ ಪೊಲೀಸ್` ವ್ಯವಸ್ಥೆಯಲ್ಲಿ ಸೇರಿಸಿಕೊಳ್ಳಬೇಕು ಎಂದು ದೇವನೂರ ಹೇಳುತ್ತಾರೆ.

  ಕಪ್ಪಸೋಗೆಯಿಂದಲೇ ಇಂತಹದ್ದೊಂದು ಸಾಮಾಜಿಕ ಸಾಮರಸ್ಯದ ಪ್ರಯೋಗವನ್ನು ಪ್ರಾರಂಭಿಸಬಹುದೇನೋ?

`ಹಳ್ಳಿಗಳಲ್ಲಿ ಇಂತಹ ಪರಿಸ್ಥಿತಿ ಇರಬಹುದು, ನಗರದ ಶಿಕ್ಷಿತ ವಲಯಗಳಲ್ಲಿ ಅಸ್ಪೃಶ್ಯತೆ ಎಲ್ಲಿದೆ? ಯಾರು ಯಾರ ಮನೆಯ ಒಳಗೆ ಹೋಗಿ ಊಟ-ತಿಂಡಿ ಮಾಡುವ ಪರಿಸ್ಥಿತಿ ಇಲ್ಲವೇ? ಮಡಿ-ಮೈಲಿಗೆಯನ್ನು ಯಾರು ಆಚರಿಸುತ್ತಾರೆ?` ಎಂದೆಲ್ಲ ಪ್ರಶ್ನಿಸುವವರು ಇದ್ದಾರೆ. ಮೇಲ್ನೋಟಕ್ಕೆ ಇದು ಸತ್ಯದಂತೆ ಕಾಣುತ್ತದೆ ಕೂಡಾ.
 
ಆದರೆ ಇದು ನಿಜವಾದ ಸತ್ಯ ಅಲ್ಲ. ಇದಕ್ಕೆ ಸಂಬಂಧಿಸಿದಂತೆ ಸಂಪಾದಕರು ಕೊಟ್ಟಿದ್ದ ಇನ್ನೊಂದು ಸಲಹೆ ಕುತೂಹಲಕರವಾಗಿತ್ತು. `ಸರ್ಕಾರೇತರ ಅದರಲ್ಲೂ ಮುಖ್ಯವಾಗಿ ಅಸಂಪ್ರದಾಯಿಕವಾದ, ಉದಾಹರಣೆಗೆ ಕ್ರಿಕೆಟ್, ಸಿನೆಮಾ, ಸಂಗೀತ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅವರಿಂದ ಅನುಭವವನ್ನು ಬರೆಸಬೇಕು, ಆ ಮೂಲಕ ಅವರನ್ನು ಸ್ಪೂರ್ತಿದಾಯಕರನ್ನಾಗಿ ಬಿಂಬಿಸಬೇಕು` ಎನ್ನುವುದು ಅವರ ಅಭಿಪ್ರಾಯವಾಗಿತ್ತು. 

ಆದರೆ ಅಂತಹವರನ್ನು ಹುಡುಕಲು ಹೊರಟಾಗ ಆದ ಅನುಭವ ಉತ್ತೇಜನಕಾರಿಯಾಗಿರಲಿಲ್ಲ. ಸಾಂಪ್ರದಾಯಿಕವಾಗಿ ದಲಿತರ ಪ್ರಾತಿನಿಧ್ಯ ಇಲ್ಲದೆ ಇರುವ ಹಲವಾರು ಕ್ಷೇತ್ರಗಳಲ್ಲಿ ಈಗ ದಲಿತರಿದ್ದಾರೆ ಎನ್ನುವುದು ನಿಜ. ಆದರೆ ಅವರಲ್ಲಿ ಹೆಚ್ಚಿನವರು ತಮ್ಮ ಗುರುತು ಬಹಿರಂಗಕ್ಕೆ ಇಚ್ಚಿಸುವುದಿಲ್ಲ. ಇದರಿಂದಾಗಿ ಈ ಬಗ್ಗೆ ಲೇಖನ ಪ್ರಕಟಣೆ ಸಾಧ್ಯವಾಗಲಿಲ್ಲ.

ರಾಜಕೀಯ ಮತ್ತು ಸಾಹಿತ್ಯ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿರುವ ದಲಿತರು ತಮ್ಮ ಜಾತಿಯನ್ನು ಬಹಿರಂಗಪಡಿಸಲು ಇಚ್ಚಿಸುವುದಿಲ್ಲ. ರಾಜಕೀಯದಲ್ಲಿ ಜಾತಿ ಒಂದು ಬಂಡವಾಳದ ರೂಪದಲ್ಲಿ ಕೆಲಸ ಮಾಡುವುದರಿಂದ ಅಲ್ಲಿ  ದಲಿತರು ಪೈಪೋಟಿಗೆ ಬಿದ್ದು ಜಾತಿಯನ್ನು ಘೋಷಿಸಿಕೊಳ್ಳುತ್ತಾರೆ. 

ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ದಲಿತ ಸಾಹಿತ್ಯ ಚಳುವಳಿ ಶಕ್ತಿಶಾಲಿ ರೂಪದಲ್ಲಿ ಸಾಗಿಬಂದ ಕಾರಣದಿಂದಾಗಿ ಆ ಕ್ಷೇತ್ರದಲ್ಲಿಯೂ ದಲಿತ ಲೇಖಕರು ತಮ್ಮ ಗುರುತನ್ನು ಬಹಿರಂಗಪಡಿಸಲು ಹಿಂಜರಿಯುವುದಿಲ್ಲ. 

ಆದರೆ ಬೇರೆ ಕ್ಷೇತ್ರಗಳಲ್ಲಿ ಅಂತಹ ಸ್ಥಿತಿ ಇಲ್ಲ. ದಲಿತರೆನ್ನುವುದು ಬಹಿರಂಗಗೊಂಡರೆ ಬಹಳ ಕಷ್ಟಪಟ್ಟು ಗಳಿಸಿಕೊಂಡಿರುವ ಸ್ಥಾನಕ್ಕೆ ಕುತ್ತು ಬರಬಹುದು ಎಂಬ ಆತಂಕ ಅವರನ್ನು ಕಾಡುತ್ತಿರುತ್ತದೆ. ಇದು ಕಣ್ಣಿಗೆ ಕಾಣಿಸಿಕೊಳ್ಳದ ಮತ್ತು ರಹಸ್ಯವಾಗಿ ಕಾರ್ಯರೂಪದಲ್ಲಿರುವ ಅಸ್ಪೃಶ್ಯತೆ. 

ಹಳ್ಳಿಗಳಲ್ಲಿ ಎಲ್ಲರ ಕಣ್ಣಿಗೆ ಕಾಣಿಸುವಂತೆ ಬಹಿರಂಗವಾಗಿ ನಡೆಯುತ್ತಿರುವ `ಮುಟ್ಟದಿರುವ` ಇಲ್ಲವೆ `ಒಳಗೆ ಕರೆದುಕೊಳ್ಳದ` ಸಾಮಾನ್ಯ ಬಗೆಯ ಅಸ್ಪೃಶ್ಯತೆಗಿಂತ ಭಿನ್ನವಾದುದು. ನಗರದಲ್ಲಿ ದಲಿತರಿಗೆ ಮನೆಯೊಳಗೆ ಪ್ರವೇಶ ಇರುತ್ತದೆ, ಜತೆಯಲ್ಲಿಯೇ ಕೂತು ಊಟಮಾಡುವ ಅವಕಾಶವೂ ಇರುತ್ತದೆ. 

ಆದರೆ ಅದೇ ದಲಿತ ಯುವಕ ಯಾವುದೋ ಉದ್ಯೋಗಕ್ಕೆ ಅರ್ಜಿ ಹಾಕಿದರೆ ಅದನ್ನು ಮೆತ್ತಗೆ ಪಕ್ಕಕ್ಕೆ ಸರಿಸಲಾಗುತ್ತದೆ. ಸರ್ಕಾರಿ ಇಲಾಖೆಗಳಲ್ಲಿ ಭರ್ತಿಯಾಗದೆ ಬಿದ್ದಿರುವ ಬ್ಯಾಕ್‌ಲಾಗ್ ಹುದ್ದೆಗಳ ಹಿಂದೆಯೂ ಇಂತಹದ್ದೇ ಹುನ್ನಾರ ಇದೆ. ಪರಿಣಾಮದ ದೃಷ್ಟಿಯಿಂದ ನೋಡಿದರೆ ಇದು ಹಳ್ಳಿಗಳಲ್ಲಿ ನಡೆಯುವ ಅಸ್ಪೃಶ್ಯತೆಗಿಂತಲೂ ಕ್ರೂರವಾದುದು.
 
ಬಹಿರಂಗವಾಗಿ ಆಚರಿಸಲಾಗುವ ಅಸ್ಪೃಶ್ಯತೆ ವಿರುದ್ಧ ಪ್ರತಿಭಟಿಸಬಹುದು, ಅದರ ವಿರುದ್ಧ ಹೋರಾಟಕ್ಕೆ ಕಾನೂನಿನ ಬೆಂಬಲವೂ ಇದೆ. ಆದರೆ ಕಣ್ಣಿಗೆ ಕಾಣದ ಎರಡನೆ ಬಗೆಯ ಅಸ್ಪೃಶ್ಯತೆಯನ್ನು ಎದುರಿಸಲು ಅಂತಹ ಯಾವ ಹತಾರಗಳೂ ಸದ್ಯಕ್ಕೆ ಇಲ್ಲ, ಸುಲಭದಲ್ಲಿ ಶತ್ರುವರ್ಗ ರಚಿಸುವ ವ್ಯೆಹಗಳು ಬಡಪಾಯಿ ದಲಿತರಿಗೆ ಗೊತ್ತಾಗುವುದೂ ಇಲ್ಲ. 

ದಲಿತ ಸಮುದಾಯದ ಯಶಸ್ವಿ ವ್ಯಕ್ತಿಗಳೆಲ್ಲರೂ ಇಂತಹ ಆತಂಕದಿಂದಲೇ ತಮ್ಮ  ಗುರುತನ್ನು ಬಚ್ಚಿಡುತ್ತಾರೆ ಎಂದು ಸಾರಸಗಟಾಗಿ ಹೇಳುವುದು ಕೂಡಾ ಸರಿಯಾಗಲಾರದು. ದೇಶ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲೊಬ್ಬರಾಗಿರುವ ವಿಜಯಕೃಷ್ಣ ತಮ್ಮನ್ನು ದಲಿತರೆಂದು ಗುರುತಿಸಿಕೊಳ್ಳಲೇ ಇಲ್ಲ, ಈಗಲೂ ಯಾರಾದರೂ ತಮ್ಮ ಜಾತಿ ಮೂಲಕ ಗುರುತಿಸುವುದು ಅವರಿಗೆ ಇಷ್ಟವಾಗುವುದಿಲ್ಲ. 

ಕ್ರಿಕೆಟ್ ಆಡುತ್ತಿದ್ದ ಕಾಲದಲ್ಲಿ ಆ ರೀತಿ ನಡೆದುಕೊಂಡಿದ್ದರೆ ಅದಕ್ಕೆ ಕಾರಣಗಳು ಇರಬಹುದು. ಆದರೆ ಈಗ ? ಖ್ಯಾತ ಸಂಗೀತಗಾರ ಇಳಯರಾಜಾ ಅವರು  ಇಂದು ಯಾವ ಎತ್ತರಕ್ಕೆ ಏರಿದ್ದಾರೆಂದರೆ ಅವರು ದಲಿತರೆಂದು ಹೇಳಿಕೊಂಡರೂ ಆ ಕಾರಣಕ್ಕಾಗಿ ಅವರನ್ನು ಈಗ ಇರುವ ಸ್ಥಾನದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಾಗಲಾರದು.
 
ಪೊಲೀಸ್ ಸೇವೆಯಿಂದ ನಿವೃತ್ತರಾಗಿರುವ ಡಾ.ಅಜಯಕುಮಾರ್‌ಸಿಂಗ್ ದಲಿತರೆಂದು ಹೇಳಿಕೊಳ್ಳುವುದರಿಂದ ಕಳೆದುಕೊಳ್ಳುವುದು ಏನೂ ಇಲ್ಲ. ಇಂತಹ ಪ್ರಭಾವಶಾಲಿ ದಲಿತ ಸಾಧಕರು  ಜಾತಿ ರಹಸ್ಯವನ್ನು ಕಾಪಾಡಿಕೊಂಡು ಬರುವುದನ್ನು ಸಮರ್ಥಿಸಿಕೊಳ್ಳುವುದು ಕಷ್ಟ.

ಇತ್ತೀಚೆಗೆ ನಮ್ಮ ಪುರವಣಿಯೊಂದರಲ್ಲಿ ದಲಿತ ಸಮುದಾಯಕ್ಕೆ ಸೇರಿರುವ ರಂಗಕರ್ಮಿಯ ಪರಿಚಯ ಪ್ರಕಟವಾಯಿತು. ಅದನ್ನು ಓದಿದ ಸ್ನೇಹಿತರೊಬ್ಬರು ದಲಿತ ಕಲಾವಿದ ಎಂದು ಕರೆದಿದ್ದು ಸರಿಯೇ ಎಂದು ಪ್ರಶ್ನಿಸಿದರು. ಇವೆಲ್ಲವೂ ಚರ್ಚೆ ನಡೆಯಬೇಕಾದ ಸೂಕ್ಷ್ಮ ವಿಚಾರಗಳು. ಒಬ್ಬ ಕಳ್ಳನನ್ನೊ, ವಂಚಕನನ್ನೋ ಆತ ಹುಟ್ಟಿದ ಜಾತಿ ಮೂಲಕ ಪರಿಚಯಿಸುವುದು  (ಉದಾಹರಣೆಗೆ ಚಂದಪ್ಪ ಹರಿಜನ) ಖಂಡಿತ ಸರಿ ಅಲ್ಲ.
 
ವ್ಯಕ್ತಿಯೊಬ್ಬ ನಡೆಸಿರುವ ಅಪರಾಧಕ್ಕೂ, ಆತ ಹುಟ್ಟಿದ ಜಾತಿಗೂ ಸಂಬಂಧ ಇರುವುದಿಲ್ಲ. ಆದರೆ ಉತ್ತಮ ಕೆಲಸ ಮಾಡಿರುವ ಇಲ್ಲವೆ ಇತರರಿಗೆ ಸ್ಪೂರ್ತಿ ನೀಡಬಲ್ಲಂತಹ ಸಾಧನೆ ಮಾಡಿದ  ದಲಿತ ವ್ಯಕ್ತಿಯನ್ನು ದಲಿತನೆಂದು ಯಾಕೆ ಪರಿಚಯಿಸಬಾರದು ಎಂದು ಕೇಳುವವರಿದ್ದಾರೆ. 

ದಲಿತ ಸಾಧಕರು ತಮ್ಮ ಜಾತಿಯನ್ನು ಬಹಿರಂಗ ಪಡಿಸುವುದರಿಂದ, ಕೀಳರಿಮೆಯಿಂದ ಬಳಲುತ್ತಿರುವ ಕೋಟ್ಯಂತರ ದಲಿತ ಯುವಕ-ಯುವತಿಯರಿಗೆ ಸ್ಫ್ಪೂರ್ತಿ ನೀಡಿದಂತಾಗುತ್ತದೆ ಎನ್ನುವುದು ಅವರ ವಾದ. ವಿಜಯಕೃಷ್ಣ, ಇಳಯರಾಜಾ ಇಲ್ಲವೇ ಇತ್ತೀಚಿನ ಯಶಸ್ವಿ ಚಿತ್ರ `ಸಂಜು ವೆಡ್ಸ್ ಗೀತಾ` ಚಿತ್ರದ ನಿರ್ದೇಶಕ ನಾಗಶೇಖರ್ ಅವರು ಜಾತಿಯ ಬಲದಿಂದ ಸಾಧನೆಯ ಶಿಖರ ಏರಿದವರಲ್ಲ.
 
ಆದರೆ ಜಾತಿ ಎನ್ನುವ ಹೊರೆಯನ್ನು ಬೆನ್ನಮೇಲೆ ಕಟ್ಟಿಕೊಂಡು ಸಾಧನೆಯ ಶಿಖರವನ್ನು ಏರಿದ ಅವರ ಪ್ರಯತ್ನ ಖಂಡಿತ ಇತರ ದಲಿತರು ಸಾಧನೆಯ ಹಾದಿಯಲ್ಲಿ ಮುಂದುವರಿಯಲು ಪ್ರೇರೇಪಿಸುವಂತಹದ್ದು. ಈ ಹಿನ್ನೆಲೆಯಲ್ಲಿ ದಲಿತ ಐಡೆಂಟಿಟಿಯ ಬಿಕ್ಕಟ್ಟನ್ನು ಇನ್ನಷ್ಟು ಚರ್ಚೆಗೆ ಒಡ್ಡುವ ಅಗತ್ಯ ಇದೆ.

ದಲಿತ ರಾಜಕಾರಣಕ್ಕೆ ಯಾರು ಮಾದರಿ? April 16, 2012

`ನಾ ವು ರಾಜಕೀಯ ಕ್ಷೇತ್ರದಲ್ಲಿ ಸಮಾನತೆ ಪಡೆಯಲಿದ್ದೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದ ಅಸಮಾನತೆ ಎಂದಿನಂತೆ ಮುಂದುವರಿಯಲಿದೆ. ಈ ವಿರೋಧಾಭಾಸವನ್ನು ನಿವಾರಿಸಿಕೊಳ್ಳದೆ ಹೋದರೆ ಅಸಮಾನತೆಯಿಂದ ನೊಂದವರು ಮುಂದೊಂದು ದಿನ ರಾಜಕೀಯ ಪ್ರಜಾಪ್ರಭುತ್ವವನ್ನು ಕಿತ್ತೊಗೆಯಲಿದ್ದಾರೆ` ಎಂದು 1950ರ ಜನವರಿ 26ರಂದು ಭಾರತ ಸಂವಿಧಾನವನ್ನು ಒಪ್ಪಿಕೊಂಡ ದಿನವೇ ಬಿ.ಆರ್.ಅಂಬೇಡ್ಕರ್ ಹೇಳಿದ್ದರು.
 
ಸಮಾನತೆಯನ್ನು ಸಾರುವ ಪ್ರಜಾಪ್ರಭುತ್ವ ಮತ್ತು ಅಸಮಾನತೆಯೇ ಸಾರವಾಗಿರುವ ಸಾಮಾಜಿಕ ವ್ಯವಸ್ಥೆಯ ನಡುವಿನ ವೈರುಧ್ಯದ ಅರಿವು ಅವರಿಗಿದ್ದ ಕಾರಣದಿಂದಲೇ ಕಟ್ಟಾ ಪ್ರಜಾಪ್ರಭುತ್ವ ಪ್ರೇಮಿಯಾಗಿದ್ದ ಅಂಬೇಡ್ಕರ್ ಕೂಡಾ ಇಂತಹ ಕಟುಮಾತುಗಳನ್ನು ಆಡಿದ್ದರು. ಅರವತ್ತೆರಡು ವರ್ಷಗಳ ನಂತರವಾದರೂ ಪರಿಸ್ಥಿತಿ ಬದಲಾಗಿದೆಯೇ?
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಎಲ್ಲವನ್ನೂ ನಿರ್ಣಯಿಸುತ್ತದೆ ಎಂದು ಹೇಳುವವರಿದ್ದಾರೆ. 

ರಾಜಕೀಯ ನಾಯಕರ ಯಶಸ್ಸಿನಲ್ಲಿ ಜಾತಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ವಿಶ್ಲೇಷಿಸುವವರಿದ್ದಾರೆ. ಹೀಗಿದ್ದರೂ ದೇಶದ ಜನಸಂಖ್ಯೆಯಲ್ಲಿ ಶೇಕಡಾ 16.2ರಷ್ಟಿರುವ ಪರಿಶಿಷ್ಟ ಜಾತಿಯವರಲ್ಲಿ ಯಾರೊಬ್ಬರೂ ಪ್ರಧಾನಮಂತ್ರಿ ಆಗಲಿಲ್ಲ. ಪ್ರಧಾನಿಯಾಗುವ ಅರ್ಹತೆಯನ್ನು ಸಾಧನೆಯ ಬಲದಿಂದಲೇ ಹೊಂದಿದ್ದ ಬಾಬು ಜಗಜೀವನರಾಂ ಅವರಿಗೆ ಪ್ರಧಾನಿ ಪಟ್ಟದ ಸಮೀಪವೂ ಸುಳಿಯಲೂ ಸಾಧ್ಯವಾಗಲಿಲ್ಲ.
 
ಆಂಧ್ರಪ್ರದೇಶ (ಸಂಜೀವಯ್ಯ), ರಾಜಸ್ತಾನ (ಜಗನ್ನಾಥ ಪಹಾಡಿಯಾ), ಉತ್ತರ ಪ್ರದೇಶ (ಮಾಯಾವತಿ), ಬಿಹಾರ (ರಾಮಸುಂದರ ದಾಸ್) ಮತ್ತು ಮಹಾರಾಷ್ಟ್ರವನ್ನು (ಸುಶೀಲ್‌ಕುಮಾರ್ ಶಿಂಧೆ) ಹೊರತುಪಡಿಸಿದರೆ ಬೇರೆ ಯಾವ ರಾಜ್ಯಗಳಲ್ಲಿಯೂ ದಲಿತರು ಮುಖ್ಯಮಂತ್ರಿಯಾಗಲಿಲ್ಲ. ಹಿಮಾಚಲಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದ್ದರೂ ಆ ರಾಜ್ಯಗಳಲ್ಲಿ ಯಾರೂ ಮುಖ್ಯಮಂತ್ರಿ ಆಗಲಿಲ್ಲ. 

ಮಹಾರಾಷ್ಟ್ರವನ್ನು ಹೊರತುಪಡಿಸಿದರೆ ದಲಿತ ಚಳವಳಿ ಹೆಚ್ಚು ಸಕ್ರಿಯವಾಗಿರುವ ಕರ್ನಾಟಕದಲ್ಲಿಯೂ ದಲಿತರೂ ಮುಖ್ಯಮಂತ್ರಿಯಾಗಲಿಲ್ಲ. ಪ್ರಧಾನಿ ಇಲ್ಲವೇ ಮುಖ್ಯಮಂತ್ರಿಗಳ ಸ್ಥಾನ ಒತ್ತಟ್ಟಿಗಿರಲಿ, ಉತ್ತರಪ್ರದೇಶವೊಂದನ್ನು ಹೊರತುಪಡಿಸಿ ಬೇರೆ ಯಾವ ರಾಜ್ಯಗಳ ರಾಜಕೀಯದಲ್ಲಿಯೂ ದಲಿತರು ನಿರ್ಣಾಯಕ ಸ್ಥಾನದಲ್ಲಿ ಇಲ್ಲ.
ಇವೆಲ್ಲವನ್ನು ಮೊದಲೇ ತಿಳಿದುಕೊಂಡಿದ್ದ ಪ್ರವಾದಿಯಂತೆ ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ ಮಾತನಾಡಿದ್ದರು. 

1952ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಪಕ್ಷವೊಂದನ್ನು ಕಟ್ಟಿ ಚುನಾವಣೆ ಎದುರಿಸಿದ ಅವರು ಜಲಂಧರ್ ನಡೆದ ಪ್ರಚಾರಸಭೆಯಲ್ಲಿ ದಲಿತ ರಾಜಕೀಯದ ಭವಿಷ್ಯದ ಹೊಳಹುಗಳನ್ನು ನೀಡಿದ್ದರು. ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ದಲಿತರನ್ನು ಅವರು `ಕಾಂಗ್ರೆಸ್‌ನ ಗುಲಾಮರು` ಎಂದು ಚುಚ್ಚಿದ್ದರು. `ಬಹಳಷ್ಟು ಅಸ್ಪೃಶ್ಯರು ಕಾಂಗ್ರೆಸ್ ಟಿಕೆಟ್‌ನಿಂದ ಗೆದ್ದು ಲೋಕಸಭೆ ಪ್ರವೇಶಿಸಿದ್ದಾರೆ. 

ಅಂತಹ 30 ಸದಸ್ಯರಿದ್ದಾರೆ. ಇವರು ಎಂದಾದರೂ ಸದನದಲ್ಲಿ ಯಾವುದಾದರೂ ಪ್ರಶ್ನೆಗಳನ್ನು ಕೇಳಿದ್ದಾರೆಯೇ? ಯಾವುದಾದರೂ ಗೊತ್ತುವಳಿ ಇಲ್ಲವೇ ಮಸೂದೆಯನ್ನು ಮಂಡಿಸಿದ್ದಾರೆಯೇ? ತಮಗೆ ಅನಿಸಿದ್ದನ್ನು ಮುಲಾಜಿಲ್ಲದೆ ಹೇಳುವ ಧೈರ್ಯ ತೋರಿದ್ದಾರೆಯೇ? ಕಾಂಗ್ರೆಸ್ ಪಕ್ಷಕ್ಕೆ ಅರ್ಹ ದಲಿತರು ಬೇಕಾಗಿಲ್ಲ, ಗುಲಾಮರು ಬೇಕಾಗಿದೆ. ಇಂತಹ ಪಕ್ಷದ ಗುಲಾಮರು ದಲಿತರ ಪ್ರತಿನಿಧಿಗಳು ಹೇಗಾಗುತ್ತಾರೆ?` ಎಂದು ಅವರು ಪ್ರಶ್ನಿಸಿದ್ದರು. 

ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಜಕೀಯವಾಗಿ ದಲಿತರ ಸ್ಥಿತಿ ಏನಾಗಲಿದೆ ಎಂಬ ಸ್ಪಷ್ಟ ಅರಿವು ಅಂಬೇಡ್ಕರ್ ಅವರಿಗಿತ್ತು. ಅದಕ್ಕಾಗಿಯೇ ಅವರು `ದಲಿತ ಪ್ರತಿನಿಧಿಗಳನ್ನು ದಲಿತ ಮತದಾರರೇ ಆಯ್ಕೆ ಮಾಡುವಂತಹ ಪ್ರತ್ಯೇಕ ಮತದಾನದ ಹಕ್ಕನ್ನು ನೀಡುವಂತೆ ದುಂಡುಮೇಜಿನ ಪರಿಷತ್‌ನಲ್ಲಿ ವಾದಿಸಿದ್ದರು. ದಲಿತ ಮತದಾರರು ಉಳಿದೆಲ್ಲರ ಜತೆಯಲ್ಲಿ ಸೇರಿ ಸಾಮಾನ್ಯ ಅಭ್ಯರ್ಥಿಗೆ ಮತದಾನ ಮಾಡುವ ಜತೆಯಲ್ಲಿ, ಕೇವಲ ತಮ್ಮ ಮತದಿಂದಲೇ ದಲಿತ ಅಭ್ಯರ್ಥಿಯನ್ನು ಚುನಾಯಿಸುವ ಅಧಿಕಾರವೂ ಇರಬೇಕು.
 
ಇಲ್ಲದೆ ಹೋದರೆ ದಲಿತ ಜನಪ್ರತಿನಿಧಿಗಳು ರಾಜಕೀಯ ಪಕ್ಷಗಳ ಗುಲಾಮರಾಗುತ್ತಾರೆ` ಎಂದು ಅವರು ಪ್ರತಿಪಾದಿಸಿದ್ದರು. ಕೊನೆಗೂ ಬ್ರಿಟಿಷ್ ಪ್ರಧಾನಿ ರಾಮ್ಸೆ ಮ್ಯಾಕ್‌ಡೊನಾಲ್ಡ್ ಅಂಬೇಡ್ಕರ್ ಅಭಿಪ್ರಾಯವನ್ನು ಒಪ್ಪಿಕೊಂಡರೂ ಗಾಂಧೀಜಿಯವರ ವಿರೋಧದಿಂದಾಗಿ ಅದು ಕಾರ್ಯರೂಪಕ್ಕೆ ಬರಲಿಲ್ಲ. 

ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು ನೀಡುವುದನ್ನು ವಿರೋಧಿಸಿ ಗಾಂಧೀಜಿ ಪ್ರಾರಂಭಿಸಿದ್ದ ಆಮರಣಾಂತ ಉಪವಾಸಕ್ಕೆ ಮಣಿದ ಅಂಬೇಡ್ಕರ್ ಒಲ್ಲದ ಮನಸ್ಸಿನಿಂದಲೇ ತಮ್ಮ ಬೇಡಿಕೆಯನ್ನು ಕೈಬಿಟ್ಟು `ಪೂನಾ ಒಪ್ಪಂದ`ಕ್ಕೆ ಸಹಿ ಹಾಕಿದ್ದರು. ಇದರ ಪರಿಣಾಮ ತಿಳಿದುಕೊಳ್ಳಲು ಬಹಳ ಕಾಲವೇನೂ ಬೇಕಾಗಲಿಲ್ಲ. ಸ್ವತಂತ್ರಭಾರತದಲ್ಲಿ ಸ್ವಂತ ಪಕ್ಷ ಕಟ್ಟಿ ಸ್ಪರ್ಧಿಸಿದ್ದ ಎರಡೂ ಚುನಾವಣೆಗಳಲ್ಲಿ ಅಂಬೇಡ್ಕರ್ ಸೋಲಬೇಕಾಯಿತು. 

ಈಗಲಾದರೂ ಪರಿಸ್ಥಿತಿ ಬದಲಾಗಿದೆಯೇ? ಬೇರೆಬೇರೆ ರಾಜ್ಯಗಳಲ್ಲಿ ದಲಿತ ಸಮುದಾಯಕ್ಕೆ ಸೇರಿರುವ ಐದು ಮಂದಿ ಮುಖ್ಯಮಂತ್ರಿಗಳಾದರೂ ಅವರಲ್ಲಿ ನಾಲ್ಕು ಮಂದಿ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳು. ಅವರೆಲ್ಲ ಮುಖ್ಯಮಂತ್ರಿಯಾಗಿದ್ದು ಸ್ವಂತ ಬಲದಿಂದ ಅಲ್ಲ, ಕಾಂಗ್ರೆಸ್ ಬೆಂಬಲದಿಂದ. ಇದಕ್ಕೆ ಹೊರತಾದವರೆಂದರೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿಯವರೊಬ್ಬರೇ. 

ಈ ಕಾರಣದಿಂದಲೇ ದಲಿತ ರಾಜಕೀಯದ ಯಶಸ್ವಿ ಮಾದರಿ -ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷದ್ದು ಮಾತ್ರ. ಕಳೆದ ಚುನಾವಣೆಯಲ್ಲಿ ಬಿಎಸ್‌ಪಿ ಪರಾಭವಗೊಂಡಿದ್ದರೂ ತಳ್ಳಿಹಾಕಿ ಬಿಡುವಂತಹ ಪಕ್ಷ ಅದಲ್ಲ ಎನ್ನುವುದು ಅದರ ಬೆಳವಣಿಗೆಯನ್ನು ಗಮನಿಸುತ್ತ ಬಂದವರಿಗೆಲ್ಲರಿಗೂ ಗೊತ್ತು. ಅದರ ಈ ಶಕ್ತಿಯನ್ನು ತಿಳಿದುಕೊಳ್ಳಬೇಕಾದರೆ  ಆ ಪಕ್ಷದ ಸ್ಥಾಪಕರಾದ ಕಾನ್ಸಿರಾಮ್ ಅವರನ್ನು ಮೊದಲು ಅರ್ಥಮಾಡಿಕೊಳ್ಳಬೇಕು. 

ಅಂಬೇಡ್ಕರ್ ಅವರ ನಂತರದ ಬಹುಮುಖ್ಯ ದಲಿತ ರಾಜಕೀಯ ನಾಯಕ ಕಾನ್ಸಿರಾಮ್ ಎನ್ನುವುದರಲ್ಲಿ ಅನುಮಾನ ಇಲ್ಲ. ವಿದ್ಯೆಯಲ್ಲಿಯಾಗಲಿ, ವಿದ್ವತ್‌ನಲ್ಲಿಯಾಗಲಿ  ಅಂಬೇಡ್ಕರ್ ಅವರಿಗೆ ಕಾನ್ಸಿರಾಮ್ ಸಮ ಅಲ್ಲ. ಆದರೆ ರಾಜಕೀಯವಾಗಿ ಅಂಬೇಡ್ಕರ್ ಅವರಿಗಿಂತಲೂ ಕಾನ್ಸಿರಾಮ್ ಯಶಸ್ವಿ ರಾಜಕಾರಣಿ.

1918ರಿಂದ 1930ರ ವರೆಗಿನ ಅಂಬೇಡ್ಕರ್ ಅವರ ಜೀವನದ ಮೊದಲ ಘಟ್ಟದಲ್ಲಿ ಬಹಿಷ್ಕೃತ ಹಿತಕರಣೆ ಸಭಾ ಸ್ಥಾಪನೆ, ಮಹಾಡ್ ಸತ್ಯಾಗ್ರಹ, ಪೂನಾದ ಪಾರ್ವತಿ ದೇವಸ್ಥಾನ ಮತ್ತು ನಾಸಿಕ ಕಾಳಾರಾಮ ದೇವಸ್ಥಾನ ಪ್ರವೇಶ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ಚಳವಳಿಯನ್ನು ಮುನ್ನಡೆಸಿದ್ದ ಅಂಬೇಡ್ಕರ್, ನಂತರ 1930ರಿಂದ 1951ರ ವರೆಗಿನ ಅವಧಿಯಲ್ಲಿ ತಮ್ಮನ್ನು ರಾಜಕೀಯವಾಗಿ ತೊಡಗಿಸಿಕೊಂಡಿದ್ದರು. 

ಈ ಅವಧಿಯಲ್ಲಿ ಸ್ವತಂತ್ರ ಕಾರ್ಮಿಕ ಪಕ್ಷ, ಪರಿಶಿಷ್ಟ ಜಾತಿ ಒಕ್ಕೂಟ ಮತ್ತು ಭಾರತೀಯ ರಿಪಬ್ಲಿಕನ್ ಪಕ್ಷ ಎಂಬ ಮೂರು ರಾಜಕೀಯ ಪಕ್ಷಗಳನ್ನೂ ಅವರು ಕಟ್ಟಿದ್ದರು. ಆದರೆ ಅಂಬೇಡ್ಕರ್ ಅವರಿಗೆ ರಾಜಕೀಯ ಯಶಸ್ಸು ಸಿಗಲೇ ಇಲ್ಲ. ಈ ವೈಫಲ್ಯಕ್ಕೆ ಅಂಬೇಡ್ಕರ್ ಅವರ ಕಡು ಸೈದ್ಧಾಂತಿಕ ನಿಷ್ಠೆ ಮತ್ತು ದಲಿತ ಕೇಂದ್ರಿತ ರಾಜಕಾರಣದ ಮಿತಿಯೂ ಕಾರಣವಾಗಿರಬಹುದು. ಇದನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಬೇಕಾದರೆ ಕಾನ್ಸಿರಾಮ್ ರಾಜಕಾರಣವನ್ನು ಇನ್ನಷ್ಟು ಒಳಹೊಕ್ಕು ನೋಡಬೇಕಾಗುತ್ತದೆ.

ಶುದ್ಧ ಸೈದ್ಧಾಂತಿಕ ರಾಜಕಾರಣದ ಬಗ್ಗೆ ಕಾನ್ಸಿರಾಮ್ ಅವರಿಗೆ ನಂಬಿಕೆ ಇರಲಿಲ್ಲ ಎಂದು ಹೇಳಲಾಗದು. ಆದರೆ ಅದರ ಬಗ್ಗೆ ಅವರು ಸಾರ್ವಜನಿಕವಾಗಿ ಮಾತನಾಡುತ್ತಿದ್ದದ್ದು ಕಡಿಮೆ. ಅವರದ್ದು ವಾಸ್ತವದ ನೆಲೆಗಟ್ಟಿನ ರಾಜಕಾರಣ. ಈ ಮೂಲಕ ಅವರು ದಲಿತರು ಮತ್ತು ಬಹುಜನರ ನಡುವಿನ ಸಂಬಂಧದ ವ್ಯಾಕರಣವನ್ನೇ ಬದಲಿಸಿದ್ದರು. ಜೀವನದ ಪ್ರಾರಂಭದ ದಿನಗಳಲ್ಲಿ ಅವರು ಮಹಾರಾಷ್ಟ್ರದಲ್ಲಿ ಒಂದಷ್ಟು ಕಾಲ ಭಾರತೀಯ ರಿಪಬ್ಲಿಕನ್ ಪಕ್ಷದ (ಆರ್‌ಪಿಐ) ಜತೆಯಿದ್ದರೂ ಆ ಪಕ್ಷದ ದಲಿತ ಕೇಂದ್ರಿತ ರಾಜಕಾರಣವನ್ನು ಇಷ್ಟಪಡುತ್ತಿರಲಿಲ್ಲ.
 
ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯ `ಬಹುಜನ ಸಮಾಜ`ದ ಭಾಗವೆಂದೇ ಅವರು ಹೇಳುತ್ತಿದ್ದರು. ಇದರಿಂದಾಗಿ ಅವರು ಪ್ರಾರಂಭದಲ್ಲಿ ಕಟ್ಟಿದ `ಅಖಿಲ ಭಾರತ ಹಿಂದುಳಿದ (ಎಸ್‌ಸಿ, ಎಸ್‌ಟಿ, ಒಬಿಸಿ) ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರ ಒಕ್ಕೂಟ` (ಬಿಎಎಂಸಿಇಎಫ್) ವಾಗಲಿ, ಅದರ ನಂತರ ಸ್ಥಾಪಿಸಿದ್ದ `ದಲಿತ್ ಶೋಷಿತ್ ಸಮಾಜ್ ಸಂಘರ್ಷ ಸಮಿತಿ, ಇಲ್ಲವೇ ಡಿಎಸ್-4 ಆಗಲಿ ಕೊನೆಗೆ ಸ್ಥಾಪಿಸಿದ ಬಹುಜನ ಸಮಾಜ ಪಕ್ಷವಾಗಲಿ (ಬಿಎಸ್‌ಪಿ) ಕೇವಲ ದಲಿತ ಕೇಂದ್ರಿತ ಸಂಘಟನೆಗಳಾಗಿರಲಿಲ್ಲ. 

ಮೀಸಲಾತಿಯ ಕಾರಣದಿಂದಾಗಿ ಎಷ್ಟೋ ಕಡೆ ಹಿಂದುಳಿದ ಜಾತಿಗಳಿಗಿಂತ ದಲಿತರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಅವರು ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದರು.  ಬಿಎಸ್‌ಪಿಯ ಬ್ಯಾನರ್, ಪೋಸ್ಟರ್ ಇಲ್ಲವೇ ಲೆಟರ್‌ಹೆಡ್‌ಗಳಲ್ಲಿ ಕಡ್ಡಾಯವಾಗಿ ಅಂಬೇಡ್ಕರ್ ಅವರ ಜತೆಯಲ್ಲಿ ಜ್ಯೋತಿಬಾ ಪುಲೆ, ಸಾಹು ಮಹಾರಾಜ್, ಪೆರಿಯಾರ್ ಮತ್ತು ನಾರಾಯಣ ಗುರುಗಳ ಭಾವಚಿತ್ರ ಅಚ್ಚುಹಾಕಿಸುವುದನ್ನು ಅವರು ಕಡ್ಡಾಯಗೊಳಿಸಿದ್ದರು.

1995ರಲ್ಲಿ ಮುಖ್ಯಮಂತ್ರಿಯಾದ ಮಾಯಾವತಿ ತಮ್ಮ ಬಜೆಟ್‌ನ ಶೇಕಡಾ 27ರಷ್ಟು ಹಣವನ್ನು ಹಿಂದುಳಿದ ಜಾತಿಗಳಿಗೆ ಮೀಸಲಿಟ್ಟಿದ್ದರು. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಎಲ್ಲ ಸೌಲಭ್ಯಗಳನ್ನು ಮುಸ್ಲಿಮ್ ವಿದ್ಯಾರ್ಥಿಗಳಿಗೂ ವಿಸ್ತರಿಸಿದ್ದರು. ಸರ್ಕಾರಿ ನೌಕರಿಗಳಲ್ಲಿ ಮುಸ್ಲಿಮರಲ್ಲಿರುವ ಹಿಂದುಳಿದ ಸಮುದಾಯಗಳಿಗೂ ಮೀಸಲಾತಿ ನೀಡಬೇಕೆಂಬ ಉತ್ತರಪ್ರದೇಶ ಹಿಂದುಳಿದ ಜಾತಿಗಳ ಒಕ್ಕೂಟದ ವರದಿಯನ್ನು ಮಾಯಾವತಿ ಜಾರಿಗೊಳಿಸಿದ್ದರು. 

ಹಿಂದುಳಿದ ಜಾತಿಗಳ ಶೇಕಡಾ 27ರ ಮೀಸಲಾತಿಯಲ್ಲಿ ಶೇಕಡಾ ಎಂಟರಷ್ಟನ್ನು ಮುಸ್ಲಿಮರಲ್ಲಿನ ಹಿಂದುಳಿದ ಜಾತಿಗಳಿಗೆ ನೀಡಿದ್ದರು. 1996ರ ವಿಧಾನಸಭಾ ಚುನಾವಣೆಯಲ್ಲಿನ ಬಿಎಸ್‌ಪಿ ಅಭ್ಯರ್ಥಿಗಳಲ್ಲಿ ಶೇಕಡಾ 29ರಷ್ಟು ಮಾತ್ರ ಪರಿಶಿಷ್ಟ ಜಾತಿಗೆ ಸೇರಿದವರಿದ್ದರು. ಉಳಿದಂತೆ ಶೇಕಡಾ 34ರಷ್ಟು ಹಿಂದುಳಿದ ಜಾತಿಗಳು, ಶೇಕಡಾ 18ರಷ್ಟು ಮುಸ್ಲಿಮರಿದ್ದರು. 

ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಬಿಎಸ್‌ಪಿಯಲ್ಲಿ ಮಾಯಾವತಿಯವರೇ ಎಲ್ಲವೂ ಆಗಿದ್ದರೂ ಪಕ್ಷದ ಪದಾಧಿಕಾರಗಳನ್ನು ಜಾತಿಜನಸಂಖ್ಯೆಗೆ ಅನುಗುಣವಾಗಿ ನೀಡುತ್ತಾ ಬಂದಿದ್ದಾರೆ. ಹಿಂದುಳಿದ ಜಾತಿಗಳಲ್ಲಿ ಮುಖ್ಯವಾಗಿ ಅತೀ ಹಿಂದುಳಿದಿರುವ ನಿಷಾದ್, ಸೈನಿ, ಶಾಖ್ಯ, ಬಗೇಲ್, ಕಶ್ಯಪ್ ಮತ್ತು ರಾಜ್‌ಭರ್ ಸಮುದಾಯಕ್ಕೆ ಬಿಎಸ್‌ಪಿಯಲ್ಲಿ ಈಗಲೂ ಹೆಚ್ಚಿನ ಪ್ರಾತಿನಿಧ್ಯ ಇದೆ.

ವಿಧಾನಸಭೆ ನಮ್ಮ ಸುತ್ತಲಿನ ಸಮಾಜದ ರಚನೆಯನ್ನು ಪ್ರತಿಬಿಂಬಿಸುವಂತಿರಬೇಕು ಎನ್ನುವುದು ಕಾನ್ಸಿರಾಮ್ ಅವರ ಚಿಂತನೆಯಾಗಿತ್ತು. ಈ ಕಾರಣದಿಂದಾಗಿಯೇ ಮೇಲ್ಜಾತಿಯೂ ಸೇರಿದಂತೆ ಎಲ್ಲರಿಗೂ ಅವರ ಜಾತಿ ಜನಸಂಖ್ಯೆಯ ಆಧಾರದಲ್ಲಿ ಪ್ರಾತಿನಿಧ್ಯ ನೀಡಬೇಕೆಂದು ಅವರು ಹೇಳುತ್ತಿದ್ದದ್ದು ಮಾತ್ರವಲ್ಲ, 2002ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಹೇಳಿದಂತೆ ಮಾಡಿಯೂ ತೋರಿಸಿದ್ದರು. ನಂತರದ ದಿನಗಳಲ್ಲಿ ಮಾಯಾವತಿಯವರೂ ಆ ಸೂತ್ರವನ್ನು ಪಾಲಿಸಿಕೊಂಡು ಬಂದಿದ್ದಾರೆ. 

ಮಾಯಾವತಿಯವರೂ ಸೇರಿದಂತೆ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದ ಮೊದಲ ಚುನಾವಣೆಯಿಂದ ಸ್ವಂತ ಬಲದಿಂದ ಸರ್ಕಾರ ರಚಿಸುವಷ್ಟು ಬಹುಮತ ಗಳಿಸಿದ್ದ 2007ರ ಚುನಾವಣೆಯ ವರೆಗೆ ಬಿಎಸ್‌ಪಿ ಸಾಗಿ ಬಂದ ಹಾದಿಯನ್ನು ನೋಡುತ್ತಾ ಬಂದರೆ ಉದ್ದಕ್ಕೂ ಈ ರೀತಿ ತನ್ನ ನೆಲೆಯನ್ನು ವಿಸ್ತರಿಸುತ್ತಾ ಬಂದಿರುವುದನ್ನು ಕಾಣಬಹುದು. 

ಬಿಜೆಪಿ ಜತೆಗಿನ ಮೈತ್ರಿ, `ಬ್ರಾಹ್ಮಣ್ ಜೋಡೋ`-ಎಲ್ಲವೂ ಈ ಕಾರ್ಯತಂತ್ರದ ಭಾಗವೇ ಆಗಿತ್ತು. ಇದರಿಂದ ಬಿಎಸ್‌ಪಿ ಗಳಿಸಿದ್ದು ಹೆಚ್ಚು ಕಳೆದುಕೊಂಡದ್ದು ಬಹಳ ಕಡಿಮೆ. ಈ ಬಾರಿಯ ಚುನಾವಣೆಯಲ್ಲಿಯೂ ಬಿಎಸ್‌ಪಿ ಸೋಲಿಗೆ ಗೆಲುವಿನ ಮದದಿಂದ ನಡೆಸಿದ ವೈಯಕ್ತಿಕ ಹುಚ್ಚಾಟಗಳೇ ಕಾರಣ ಹೊರತು, ಅದರ ರಾಜಕೀಯ ಕಾರ್ಯತಂತ್ರದ ವೈಫಲ್ಯ ಅಲ್ಲ. 

ಇದರಿಂದಾಗಿಯೇ ರಾಜಕೀಯ ಪಕ್ಷಗಳ ಗುಲಾಮಗಿರಿಯಿಂದ ಹೊರತಾದ ಸ್ವತಂತ್ರ ಮತ್ತು ಸ್ವಾಭಿಮಾನಿ ದಲಿತ ರಾಜಕಾರಣಕ್ಕೆ ಅಂಬೇಡ್ಕರ್ ಪ್ರೇರಣೆ ಒದಗಿಸಬಹುದು, ಆದರೆ ಮಾದರಿಯಾಗಿ ಕಾನ್ಸಿರಾಮ್ ಅವರನ್ನೇ ಸ್ವೀಕರಿಸಬೇಕಾಗುತ್ತದೆ.

ಕಮರಿಹೋದ ಅಣ್ಣಾ ಚಳವಳಿ ಎಂಬ ಕನಸು April 09, 2012


ಭ್ರಷ್ಟಾಚಾರ ವಿರೋಧಿಸಿ ನಡೆದ ದೇಶದ ಮೂರನೇ ಹೋರಾಟದ ಗರ್ಭಪಾತವಾಗಿದೆ. ಎಪ್ಪತ್ತರ ದಶಕದ ಪ್ರಾರಂಭದಲ್ಲಿ ಜಯಪ್ರಕಾಶ್ ನಾರಾಯಣ್ ಮತ್ತು ಎಂಬತ್ತರ ದಶಕದ ಕೊನೆಯ ಭಾಗದಲ್ಲಿ ವಿಶ್ವನಾಥ್ ಪ್ರತಾಪ್ ಸಿಂಗ್ ನೇತೃತ್ವದಲ್ಲಿ ನಡೆದ ಚಳವಳಿಗಳು ಕೂಡಾ  ಭ್ರಷ್ಟಾಚಾರ ನಿರ್ಮೂಲನೆಯ ಗುರಿಯನ್ನೇ ಹೊಂದಿದ್ದವು.

ಆ ಎರಡೂ ಚಳವಳಿಗಳು ಅಂತಿಮವಾಗಿ ಚುನಾವಣೆಯಲ್ಲಿ ಭ್ರಷ್ಟರ ಸೋಲಿನ ಮೂಲಕ ಸತ್ತೆಯ ಬದಲಾವಣೆಯಲ್ಲಿ ಕೊನೆಗೊಂಡಿದ್ದವು. ತನ್ನ ನೇತೃತ್ವದ ಚಳವಳಿಗೆ ವರ್ಷ ತುಂಬಿದ ಸಂದರ್ಭದಲ್ಲಿ ಮಾತನಾಡಿರುವ ಅಣ್ಣಾ ಹಜಾರೆ ಅವರೂ ಮುಂದಿನ ಲೋಕಸಭಾ ಚುನಾವಣೆಯ ಕಾಲದಲ್ಲಿ ನಿರ್ಣಾಯಕ ಹೋರಾಟ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.

ಆದರೆ, ಹಿಂದಿನ ಎರಡು ಭ್ರಷ್ಟಾಚಾರ ವಿರೋಧಿ ಚಳವಳಿಗಳ ಜತೆ ಕೆಲವು ಅತ್ಯುತ್ಸಾಹಿಗಳು ಹೋಲಿಸುತ್ತಾ ಬಂದ ಅಣ್ಣಾ ಹಜಾರೆ ಚಳವಳಿ ಮುಂದೆ ಹೆಜ್ಜೆ ಇಡಲಾಗದೆ ನಡು ಹಾದಿಯಲ್ಲಿಯೇ ಏದುಸಿರು ಬಿಡುತ್ತಿರುವುದನ್ನು ನೋಡಿದರೆ ಬಹಳ ದೂರ ಸಾಗುವ ಸಾಧ್ಯತೆಗಳು ಕಾಣುತ್ತಿಲ್ಲ.

ಕಳೆದ ವರ್ಷದ ಏಪ್ರಿಲ್ ಐದರಂದು ದೇಶಕ್ಕೆ ಅಷ್ಟೇನೂ ಪರಿಚಿತರಲ್ಲದ ಅಣ್ಣಾ ಹಜಾರೆ ಅವರು ದೆಹಲಿಯ ಜಂತರ್ ಮಂತರ್ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದಾಗ ಹರಿದುಬಂದ ಜನಬೆಂಬಲವನ್ನು ಮುಗ್ಧ ಕಣ್ಣುಗಳಿಂದ ನೋಡಿದವರಲ್ಲಿ ಹೆಚ್ಚಿನವರು ಆಗಲೇ ಲೋಕಪಾಲರ ನೇಮಕವಾಗಿಯೇ ಬಿಟ್ಟಿತು ಎಂಬ ಸಂಭ್ರಮದಲ್ಲಿದ್ದರು.

ಒಂದು ವರ್ಷ ಕಳೆದ ಮೇಲೂ ಲೋಕಪಾಲರ ನೇಮಕದ ಮಸೂದೆಯನ್ನು ಸಂಸತ್ ಅಂಗೀಕರಿಸಿಲ್ಲ, ಅದಕ್ಕೆ ಅಂಗೀಕಾರ ದೊರೆಯುವ ಭರವಸೆಯೂ ಇಲ್ಲ. ಸದ್ಯಕ್ಕೆ ಇದು ಮುಗಿದ ಅಧ್ಯಾಯ.

ಇದನ್ನು ಇನ್ನೊಂದು `ಸ್ವಾತಂತ್ರ್ಯ ಹೋರಾಟ` ಎಂದು ಬಣ್ಣಿಸುತ್ತಾ ಅರಬ್ ರಾಷ್ಟ್ರಗಳಲ್ಲಿ ನಡೆದ ಕ್ರಾಂತಿ ಇಲ್ಲಿಯೂ ನಡೆದೇ ಬಿಟ್ಟಿತು ಎಂಬ ಭ್ರಮೆಯನ್ನು ಸೃಷ್ಟಿಸಿದ್ದ ಮಾಧ್ಯಮಗಳು, ಮುಖ್ಯವಾಗಿ ಟಿವಿ ಚಾನೆಲ್‌ಗಳು, ಕೂಡಾ ಅಣ್ಣಾಹಜಾರೆ ಚಳವಳಿಯನ್ನು ಮರೆತುಬಿಟ್ಟಿವೆ. ವರ್ಷದ ಹಿಂದೆ ಹರಿದು ಬಂದ ಜನಸಾಗರ ಈಗ ಬೇಸಿಗೆಯ ಕಾಲದ ನದಿಯಂತಾಗಿದೆ.

ಅಣ್ಣಾ ಹಜಾರೆ ಉಪವಾಸ ಕೂತರೆ ಜಂತರ್‌ಮಂತರ್ ಮುಂದೆಯೇ ಜನಸೇರುತ್ತಿಲ್ಲ, ರಾಮಲೀಲಾ ಮೈದಾನವನ್ನು ತುಂಬುವುದು ಇನ್ನೂ ಕಷ್ಟ. ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿದ್ದವರು ಆಗಲೇ ಮೌನವಾಗಿದ್ದಾರೆ.

ಇವೆಲ್ಲವನ್ನೂ ನೋಡಿಯೋ ಏನೋ, ತಮ್ಮ ಬೇಡಿಕೆ ಈಡೇರಿಕೆಗೆ `ಒಂದು ದಿನ ಇಲ್ಲವೇ ಒಂದು ಗಂಟೆಯನ್ನೂ ಕೊಡಲಾರೆ` ಎಂದು ಗುಡುಗುತ್ತಿದ್ದ ಅಣ್ಣಾ ಹಜಾರೆ ಅವರು ಈಗ ಒಂದೂವರೆ ವರ್ಷಗಳ ದೀರ್ಘ ಗಡುವನ್ನು ನೀಡಿದ್ದಾರೆ.

ಜೆ.ಪಿ. ಮತ್ತು ವಿ.ಪಿ. ನೇತೃತ್ವದ ಚಳವಳಿಗಳ ಹರಹು ಮತ್ತು ತೀವ್ರತೆ ಗುರಿ ಮುಟ್ಟುವವರೆಗೆ ಹೆಚ್ಚಾಗುತ್ತಾ ಹೋಗಿತ್ತೇ ಹೊರತು ಕಡಿಮೆಯಾಗಿರಲಿಲ್ಲ. ಆದರೆ, ಅಣ್ಣಾ ಚಳವಳಿ ನಡುಹಾದಿಯಲ್ಲಿಯೇ ಸೊರಗಿಹೋಗುತ್ತಿದೆ. ಒಂದು ಚಳವಳಿಯ ಸೋಲು-ಗೆಲುವು ಅದರ ಉದ್ದೇಶ, ಸಂಘಟನೆಯ ಬಲ ಮತ್ತು ಹೋರಾಟದ ದಾರಿಯನ್ನು ಅವಲಂಬಿಸಿರುತ್ತದೆ.

ಭ್ರಷ್ಟಾಚಾರದ ನಿರ್ಮೂಲನೆಯ ಬಗ್ಗೆ ಅಣ್ಣಾ ಮತ್ತು ಅವರ ತಂಡದ ಸದಸ್ಯರು ಎಷ್ಟೇ ಭಾಷಣ ಮಾಡಿದರೂ ಉದ್ದೇಶವನ್ನು ಮಾತ್ರ ಲೋಕಪಾಲರ ನೇಮಕಕ್ಕೆ ಸೀಮಿತಗೊಳಿಸುತ್ತಾ ಬಂದಿದ್ದಾರೆ.

ಬಹುಮುಖ್ಯವಾದ ಚುನಾವಣಾ ಸುಧಾರಣೆ ಬಗ್ಗೆಯೂ ಅವರು ಹೆಚ್ಚು ಮಾತನಾಡುತ್ತಿಲ್ಲ. ಲೋಕಪಾಲರ ನೇಮಕವಾದ ಕೂಡಲೇ ಸಾರ್ವಜನಿಕ ಜೀವನದಲ್ಲಿರುವ ಭ್ರಷ್ಟಾಚಾರ ನಿರ್ಮೂಲನೆಯಾಗಿ ಬಿಡುತ್ತದೆ ಎಂಬ ಭ್ರಮೆ ಅವರಿಗೂ ಇರಲಾರದು. ಆದರೆ ಅವರ ಮಾತುಗಳು ಮಾತ್ರ ಆ ಭ್ರಮೆಯನ್ನು ಹುಟ್ಟಿಸುವ ರೀತಿಯಲ್ಲಿಯೇ ಇವೆ. ಇದು ಬಹಳ ಸರಳೀಕೃತ ಅಭಿಪ್ರಾಯ.

ತಾವು ತಿಳಿದುಕೊಂಡಿರುವ ಭ್ರಷ್ಟಾಚಾರದ ಅರ್ಥ ಏನು ಎಂಬುದನ್ನು ಅಣ್ಣಾ ತಂಡ ಈ ವರೆಗೆ ಬಿಡಿಸಿ ಹೇಳಿಲ್ಲ. ಭ್ರಷ್ಟಾಚಾರ ಎಂದರೆ ಕೇವಲ ಸಾರ್ವಜನಿಕ ಹಣದ ದುರುಪಯೋಗ ಇಲ್ಲವೇ ಹಣದ ಸೋರಿಕೆ ಮಾತ್ರವೇ? ತಾಲ್ಲೂಕು ಕಚೇರಿಯ ಗುಮಾಸ್ತ ಪಡೆಯುವ ಲಂಚ ಮತ್ತು  ರಕ್ಷಣಾ ಸಾಮಗ್ರಿಗಳ ಖರೀದಿಯಲ್ಲಿ ದಲ್ಲಾಳಿಗಳಿಂದ ಪಡೆಯುವ ಕಮಿಷನ್ ಎರಡನ್ನೂ ಒಂದೇ ಗುಂಪಿನಲ್ಲಿ ಸೇರಿಸಬಹುದೇ?

ಅಧಿಕಾರದ ದುರುಪಯೋಗ, ಸ್ವಜನ ಪಕ್ಷಪಾತ ಮತ್ತು ವಶೀಲಿ ಕೂಡಾ ಭ್ರಷ್ಟಾಚಾರದ ವ್ಯಾಪ್ತಿಗೆ ಬರುತ್ತವೆಯೇ? ಅಧಿಕಾರದ ದುರುಪಯೋಗವೂ ಭ್ರಷ್ಟಾಚಾರದ ವ್ಯಾಖ್ಯೆಯಲ್ಲಿ ಸೇರಿಕೊಳ್ಳುವುದಿದ್ದರೆ ಯಾವ ಅಧಿಕಾರ? ರಾಜಕಾರಣದ ಮೂಲಕ ಗಳಿಸಿದ್ದೇ ಇಲ್ಲವೇ ಶ್ರೇಣಿಕೃತ ಸಮಾಜ ಮತ್ತು ಆರ್ಥಿಕ ಅಸಮಾನತೆಯ ವ್ಯವಸ್ಥೆಯ ನೆರವಿನಿಂದ ಪಡೆದುಕೊಂಡದ್ದೇ?

ಭ್ರಷ್ಟಾಚಾರವನ್ನು ಕೇವಲ ಕಾನೂನಿನ ಮೂಲಕ ವ್ಯಾಖ್ಯಾನಿಸುವುದು ಸರಿಯೇ? ಅದನ್ನು ನೈತಿಕ ದೃಷ್ಟಿಯಿಂದಲೂ ನೋಡುವುದು ಬೇಡವೇ?- ಈ ಪ್ರಶ್ನೆಗಳಿಗೆ ಅಣ್ಣಾ ತಂಡದ ಸದಸ್ಯರಲ್ಲಿ ಉತ್ತರ ಇಲ್ಲ, ಹುಡುಕಲು ಹೋದರೆ ಸಿಗುವ ಉತ್ತರ ಚಳವಳಿಗೆ ಇನ್ನಷ್ಟು ಮುಜುಗರ ಉಂಟುಮಾಡಬಹುದು.

ಇದಕ್ಕಾಗಿ `ಮೊದಲು ಲೋಕಪಾಲರು ಬರಲಿ` ಎಂಬ ಮಂತ್ರವನ್ನಷ್ಟೇ ಅವರು ಪಠಿಸುತ್ತಿದ್ದಾರೆ. ಬಹುಮುಖಗಳ ರಕ್ಕಸನಂತೆ ಬೆಳೆಯುತ್ತಿರುವ ಭ್ರಷ್ಟಾಚಾರವನ್ನು ಕೇವಲ ಲೋಕಪಾಲರ ನೇಮಕದಿಂದ ನಾಶಮಾಡಬಹುದೆಂದು ಅಣ್ಣಾ ತಂಡ ಈಗಲೂ ತಿಳಿದುಕೊಂಡಿರುವುದೇ ಅವರ ಕಾಲಿನಡಿಯ ನೆಲ ಕುಸಿಯುತ್ತಿರುವುದಕ್ಕೆ ಕಾರಣ.

ಇನ್ನು ಸಂಘಟನೆ. ಚಳವಳಿಗೆ ಅಗತ್ಯವಾದ ಸಂಘಟನೆಯನ್ನು ಕಟ್ಟುವುದರಲ್ಲಿಯೂ ಅಣ್ಣಾ ತಂಡ ಸೋತಿದೆ. ಜಯಪ್ರಕಾಶ್ ನಾರಾಯಣ್ ಅವರ ಹೆಸರಿನ ಜತೆ ಸೇರಿಕೊಂಡಿರುವ ಎಪ್ಪತ್ತರ ದಶಕದ ನವನಿರ್ಮಾಣ ಚಳವಳಿ ಅವರಿಂದಲೇ ಪ್ರಾರಂಭವಾದುದಲ್ಲ. ಅದು ಭ್ರಷ್ಟಾಚಾರ ಇಲ್ಲವೇ ಸರ್ವಾಧಿಕಾರದ ವಿರುದ್ಧದ ಹೋರಾಟ ಆಗಿಯೂ ಪ್ರಾರಂಭವಾಗಿರಲಿಲ್ಲ.

ಅಹ್ಮದಾಬಾದ್‌ನ ಎಲ್.ಡಿ.ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಟೀನ್ ಬಿಲ್ ಹೆಚ್ಚಳದ ವಿರುದ್ದ 1973ರ ಡಿಸೆಂಬರ್‌ನಲ್ಲಿ ಪ್ರಾರಂಭಿಸಿದ ಸಣ್ಣಮಟ್ಟದ ಪ್ರತಿಭಟನೆ ಬೆಳೆಯುತ್ತಾ ಹೋಗಿ ನಂತರದ ದಿನಗಳಲ್ಲಿ ಸ್ವತಂತ್ರಭಾರತದ ಅತ್ಯಂತ ಬಲಿಷ್ಠ ರಾಜಕೀಯ ನಾಯಕಿ ಅಧಿಕಾರ ಕಳೆದುಕೊಳ್ಳುವುದಕ್ಕೆ ಕಾರಣವಾಯಿತು.

ಅಣ್ಣಾ ತಂಡದ ರೀತಿಯಲ್ಲಿ ಅಹ್ಮದಾಬಾದ್‌ನ ವಿದ್ಯಾರ್ಥಿಗಳಿಗೂ ತಮ್ಮ ಹೋರಾಟಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು. ಎಳೆಯರಾದರೂ ಪರಿಸ್ಥಿತಿಯನ್ನು ಬಹುಬೇಗ ಅರ್ಥಮಾಡಿಕೊಂಡ ವಿದ್ಯಾರ್ಥಿ ನಾಯಕರು ಒಂದೇ ತಿಂಗಳ ಅವಧಿಯಲ್ಲಿ ತಮ್ಮ ಹೋರಾಟಕ್ಕೆ ಸಾರ್ವಜನಿಕವಾದ ರೂಪ ಕೊಟ್ಟರು.

1973ರ ಜನವರಿಯಲ್ಲಿ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಅಹ್ಮದಾಬಾದ್ ಬಂದ್‌ಗೆ ಕರೆಕೊಟ್ಟಾಗ ಅವರ ಮುಖ್ಯ ಘೋಷಣೆ ಬೆಲೆ ಏರಿಕೆ ವಿರುದ್ಧವಾಗಿತ್ತು, ಕ್ಯಾಂಟೀನ್ ಬಿಲ್ ಹೆಚ್ಚಳದ ವಿರುದ್ಧದ ಪ್ರತಿಭಟನೆ ನೇಪಥ್ಯಕ್ಕೆ ಸರಿದುಹೋಗಿತ್ತು.

ಎಪ್ಪತ್ತರ ದಶಕದ ಸಮಾಜ ಭ್ರಷ್ಟಾಚಾರ, ಬೆಲೆ ಏರಿಕೆ, ಆಹಾರ ಸಾಮಗ್ರಿಗಳ ಕೊರತೆ, ಸರ್ಕಾರಿ ನೌಕರರ ಸಂಬಳದ ಮೇಲೆ ಮಿತಿ ಹೇರಿಕೆ ಮೊದಲಾದ ಕಾರಣಗದಾಗಿ ಒಳಗಿಂದೊಳಗೆ ಕುದಿಯುತ್ತಿತ್ತು. ಅದು ಸಿಡಿಯಲು ಬೇಕಾದ ದಾರಿಯನ್ನಷ್ಟೇ ನವನಿರ್ಮಾಣ ಚಳವಳಿ ಮಾಡಿಕೊಟ್ಟಿತ್ತು.

ಅಣ್ಣಾ ಹಜಾರೆ ಉಪವಾಸ ಪ್ರಾರಂಭಿಸಿದಾಗ ದೇಶದಲ್ಲಿ ಎಪ್ಪತ್ತರ ದಶಕದ ಪರಿಸ್ಥಿತಿಯೇ ಇತ್ತು, ಈಗಲೂ ಇದೆ. ಒಂದಾದ ಮೇಲೆ ಒಂದರಂತೆ ಭ್ರಷ್ಟಾಚಾರದ ಹಗರಣಗಳು ಬಯಲಾಗತೊಡಗಿವೆ, ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿಹೋಗಿದ್ದಾರೆ, ಉದ್ಯೋಗದ ಅವಕಾಶಗಳು ಕಡಿಮೆಯಾಗತೊಡಗಿವೆ.

ಜನ ಎದುರಿಸುತ್ತಿರುವ ಈ ಎಲ್ಲ ಸಮಸ್ಯೆಗಳ ಗಂಗೋತ್ರಿ ಭ್ರಷ್ಟಾಚಾರದಲ್ಲಿಯೇ ಇದೆ. ಆದ್ದರಿಂದಲೇ ಅಣ್ಣಾ ಹಜಾರೆ ಚಳವಳಿಗೆ ಜನ ಪ್ರಾಮಾಣಿಕವಾಗಿಯೇ ಸ್ಪಂದಿಸಿದ್ದರು. ಆದರೆ, ಅದನ್ನು ಬಳಸಿಕೊಳ್ಳಲು ಚಳವಳಿಯ ನಾಯಕರು ಸೋತುಹೋದರು.

ನವನಿರ್ಮಾಣ ಚಳವಳಿಯ ನೇತೃತ್ವ ವಹಿಸಲು ಜೆಪಿ ಅಹ್ಮದಾಬಾದ್‌ಗೆ ಹೋಗಿದ್ದಾಗ ಆಗಲೇ ವಿದ್ಯಾರ್ಥಿ ಚಳವಳಿಗಾರರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಚಿಮಣ್ ಬಾಯ್ ಪಟೇಲ್ ಸರ್ಕಾರವನ್ನು ಪದಚ್ಯುತಿಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಮಾಡಿಬಿಟ್ಟಿದ್ದರು.

ಆ ಚಳವಳಿಗಾರರಿಗೆ ಜೆಪಿಯ ಅಗತ್ಯಕ್ಕಿಂತ ಹೆಚ್ಚಾಗಿ ಜೆಪಿಗೆ ಆ ಚಳವಳಿಯ ಅಗತ್ಯ ಇತ್ತು.  `ನಾನು ಎರಡು ವರ್ಷಗಳ ಕಾಲ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ಸಹಮತ ಮೂಡಿಸಲು ಪ್ರಯತ್ನಪಟ್ಟು ಸೋತುಹೋಗಿದ್ದೆ.

ಆಗ ನನ್ನ ಕಣ್ಣಿಗೆ ಬಿದ್ದ ಗುಜರಾತ್ ವಿದ್ಯಾರ್ಥಿಗಳು ನನಗೆ ದಾರಿ ತೋರಿಸಿದ್ದರು` ಎಂದು ಜೆಪಿಯವರೇ ವಿನಯಪೂರ್ವಕವಾಗಿ ಬರೆದುಕೊಂಡಿದ್ದಾರೆ. `ಅಣ್ಣಾ ಹಜಾರೆ ಅವರು ಸಂಸತ್‌ಗಿಂತಲೂ ಮೇಲು` ಎಂಬ ಅರವಿಂದ ಕೇಜ್ರಿವಾಲ್ ಅವರ ಮೂರ್ಖ ಹೇಳಿಕೆ ನೆನಪಾಗುತ್ತಿದೆಯೇ?

 ಒಂದು ಚಳವಳಿ ಯಶಸ್ವಿಯಾಗಬೇಕಾದರೆ ಅದರ ನೇತೃತ್ವ ವಹಿಸುವ ಸಂಘಟನೆಯ ಮೇಲೆ ಸಾಮಾನ್ಯ ಜನರಿಗೂ ನಂಬಿಕೆ ಇರಬೇಕಾಗುತ್ತದೆ. ಅಣ್ಣಾ ತಂಡದ ನಡೆ ಮೊದಲ ದಿನದಿಂದಲೇ ನಿಗೂಢವಾಗಿತ್ತು. ಪ್ರಾರಂಭದಲ್ಲಿಯೇ ಬೇರೆಬೇರೆ ಕಾರಣಗಳಿಗಾಗಿ ಅಲ್ಲಿಂದ ಹೊರನಡೆದವರು ಯೋಗಗುರು ರಾಮ್‌ದೇವ್; ನಂತರ ಸ್ವಾಮಿ ಅಗ್ನಿವೇಶ್, ರಾಜೀಂದರ್‌ಸಿಂಗ್, ವೇಣುಗೋಪಾಲ್ ಮೊದಲಾದವರು ಬಿಟ್ಟುಹೋದರು.

ಆಗಲೇ ಅಣ್ಣಾ ತಂಡದ ಉಳಿದ ಕೆಲವು ಸದಸ್ಯರ ಮೇಲೆ ಆರೋಪಗಳು ಕೇಳಿ ಬರತೊಡಗಿದ್ದವು. ಅದು ಮುಖ್ಯವಾಗಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ್ದವು. ಅಷ್ಟು ಹೊತ್ತಿಗೆ ಇಡೀ ದೇಶದಲ್ಲಿ ಚಳವಳಿ ಪಸರಿಸಿತ್ತು.

`ಜನ ಸ್ವಂತ ಇಚ್ಛೆಯಿಂದ ಬರುತ್ತಿದ್ದಾರೆ` ಎಂದು ಹೇಳಿಕೊಂಡರೂ ಜನ ಸೇರಿಸುವುದು, ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಜೋಡಿಸುವುದು, ಸಂಪನ್ಮೂಲ ಕ್ರೋಡೀಕರಿಸುವುದು ಸುಲಭದ ಕೆಲಸ ಅಲ್ಲ.

ನೋಡುನೋಡುತ್ತಿದ್ದಂತೆಯೇ ಭ್ರಷ್ಟ ರಾಜಕಾರಣಿಗಳು, ದುಷ್ಟ ಆಲೋಚನೆಯ ಉದ್ಯಮಿಗಳು, ಆಷಾಢಭೂತಿ ಧರ್ಮಗುರುಗಳು, ಶಿಕ್ಷಣದ ವ್ಯಾಪಾರಿಗಳು, ರೋಗಿಗಳನ್ನು ಸುಲಿಯುವ ವೈದ್ಯರು, ಕಕ್ಷಿದಾರರನ್ನು ಕಾಡಿಸುವ ವಕೀಲರು ಹೀಗೆ ಎಲ್ಲರೂ ಸೇರಿಕೊಳ್ಳತೊಡಗಿದ್ದರು.

ಯಾರು ಪ್ರಾಮಾಣಿಕರು, ಯಾರು ಭ್ರಷ್ಟರು? ಎನ್ನುವುದನ್ನು ಗುರುತಿಸಲಾಗದ ಅಯೋಮಯ ಸ್ಥಿತಿ. ಸೇರಿದವರಲ್ಲಿ ನಿಜವಾದ ಕಾಳಜಿ ಹೊಂದಿದ್ದವರು ಎಷ್ಟು ಮಂದಿ ಇದ್ದರೆನ್ನುವುದನ್ನು ಹುಡುಕುವುದೇ ಕಷ್ಟವಾಗಿತ್ತು. ಜೆಪಿ ಪ್ರವೇಶಕ್ಕೆ ಮುನ್ನವೇ ಗುಜರಾತ್‌ನಲ್ಲಿ ತಾರಕಕ್ಕೇರಿದ್ದ ನವನಿರ್ಮಾಣ ಚಳವಳಿಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ 80 ಮಂದಿ ಪೊಲೀಸ್ ಗುಂಡೇಟಿನಿಂದ ಪ್ರಾಣ ಕಳೆದುಕೊಂಡಿದ್ದರು.

ಅಂತಹ ಒಂದು ಗೋಲಿಬಾರ್ ನಡೆದಿದ್ದರೆ ಸತ್ಯಾಗ್ರಹದ ಶಿಬಿರದಲ್ಲಿ ಎಷ್ಟು ಮಂದಿ ಉಳಿದುಕೊಳ್ಳುತ್ತಿದ್ದರೋ ಗೊತ್ತಿಲ್ಲ. ಅಣ್ಣಾ ಚಳವಳಿಗೆ ಏಟು ನೀಡಿದ್ದೇ ಅವರ ಸಂಘಟನೆಯ ಬಗ್ಗೆ ಸಾರ್ವಜನಿಕರಲ್ಲಿ ಹುಟ್ಟಿಕೊಳ್ಳತೊಡಗಿದ್ದ ಇಂತಹ ಗುಮಾನಿಗಳು.

ಇದನ್ನು ಇನ್ನಷ್ಟು ಬಲಪಡಿಸಿದ್ದು ಹರಿಯಾಣದ ಹಿಸ್ಸಾರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಅಣ್ಣಾ ತಂಡ ನಡೆಸಿದ್ದ ಪ್ರಚಾರ. ಅದರ ನಂತರ ನಡೆದ ಉತ್ತರಪ್ರದೇಶದ ಚುನಾವಣೆಯಲ್ಲಿ ಅಣ್ಣಾ ತಂಡದ ಸದಸ್ಯರನ್ನು ಯಾರೂ ಲೆಕ್ಕಕ್ಕೆ ಇಟ್ಟುಕೊಳ್ಳಲಿಲ್ಲ.

ಕೊನೆಯದಾಗಿ ಹೋರಾಟದ ದಾರಿ. ಉದ್ದೇಶ ಉದಾತ್ತವಾಗಿದ್ದರೂ ಸಂಘಟನೆ  ಬಲವಾಗಿದ್ದರೂ ಹೋರಾಟದ ದಾರಿಯಲ್ಲಿ ಎಡವಿದರೆ ಚಳವಳಿ ಗುರಿಮುಟ್ಟುವುದು ಕಷ್ಟ. ಉಪವಾಸ ಬಹಳ ಪರಿಣಾಮಕಾರಿ ಹೋರಾಟದ ಅಸ್ತ್ರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಉಪವಾಸದ ಮೊದಲ ಉದ್ದೇಶ ಸ್ವಂತ ಆತ್ಮಾವಲೋಕನ, ಎರಡನೆಯದು, ಎದುರಾಳಿಯ ಆತ್ಮಪರಿವರ್ತನೆ.

ಈ ಉದ್ದೇಶಗಳಿಲ್ಲದ ಉಪವಾಸ `ಬ್ಲಾಕ್‌ಮೇಲ್` ಆಗುತ್ತದೆ. ಅದಕ್ಕಾಗಿಯೇ ಗಾಂಧೀಜಿಯವರು ಹದಿನಾರು ಬಾರಿ ಉಪವಾಸ ಮಾಡಿದ್ದರೂ ಆ ಅಸ್ತ್ರವನ್ನು ಅವರೆಂದೂ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟಕ್ಕೆ ಬಳಸಿಕೊಳ್ಳಲಿಲ್ಲ. ಅವರು ಬಳಸಿದ್ದೆಲ್ಲವೂ ಆತ್ಮಶುದ್ಧಿ ಮತ್ತು ಆತ್ಮಪರಿವರ್ತನೆಗಾಗಿ.

ಉಪವಾಸದ ಮೂಲಕ ಉದ್ದೇಶ ಸಾಧಿಸುವುದಕ್ಕಿಂತ ಹೆಚ್ಚಾಗಿ ಹುತಾತ್ಮನಾಗುವ ಆಸೆಯೇ ಹೆಚ್ಚಿದೆಯೋ ಏನೋ ಎಂದು ಅನಿಸುವ ರೀತಿಯಲ್ಲಿ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹದ ಅಸ್ತ್ರವನ್ನು ಸದಾ ಝಳಪಿಸುತ್ತಿರುತ್ತಾರೆ.

ಆದರೆ ಆತ್ಮಾವಲೋಕನಕ್ಕೆ ಅವರು ತಯಾರಿಲ್ಲ, ಆತ್ಮಪರಿವರ್ತನೆಗೆ ತಮ್ಮನ್ನು ಒಡ್ಡಿಕೊಳ್ಳುವಷ್ಟು ಅಧಿಕಾರರೂಢರು ಸೂಕ್ಷ್ಮಮತಿಗಳಾಗಿಲ್ಲ. ಈ ಸ್ಥಿತಿಯಲ್ಲಿ ಉಪವಾಸ ಕೇವಲ `ಬ್ಲಾಕ್‌ಮೇಲ್` ಆಗುವ ಅಪಾಯ ಇದೆ.
ಕೊನೆಗೂ ಇದರ ಅರಿವು ಅಣ್ಣಾ ಹಜಾರೆ ಅವರಿಗೂ ಆಗುತ್ತಿದೆಯೇನೋ? ಇತ್ತೀಚೆಗೆ ಅವರು ಆತ್ಮಾವಲೋಕನದ ಧಾಟಿಯಲ್ಲಿ `ದೇಶ ಸುತ್ತಿ ಜನಜಾಗೃತಿಗೊಳಿಸುವ` ಮಾತುಗಳನ್ನಾಡುತ್ತಿದ್ದಾರೆ. ಜಂತರ್ ಮಂತರ್‌ಗೆ ಹೋಗುವ ಮೊದಲು ಈ ಕೆಲಸ ಮಾಡಿದ್ದರೆ ಅವರ ಕೈಗೆ ತಮ್ಮ ಕನಸುಗಳನ್ನೆಲ್ಲ ಕೊಟ್ಟವರು ಭಗ್ನಹೃದಯಿಗಳಾಗುತ್ತಿರಲಿಲ್ಲ.