Monday, November 12, 2012

ಬಂಗಾರಪ್ಪನವರ ಹಾದಿಯಲ್ಲಿ ಯಡಿಯೂರಪ್ಪ Nov 12 2012


ಸಾರೆಕೊಪ್ಪ ಬಂಗಾರಪ್ಪ ಮತ್ತು ಬೂಕನಕೆರೆ ಯಡಿಯೂರಪ್ಪನವರ ನಡುವೆ ಶಿವಮೊಗ್ಗ ಎನ್ನುವ ರಾಜಕೀಯ ಕರ್ಮಭೂಮಿಯ ಸಾಮ್ಯತೆ ಒಂದೇ ಅಲ್ಲ, ಇನ್ನೂ ಹಲವು ಇವೆ.
ರಾಜಕೀಯ ಮಹತ್ವಾಕಾಂಕ್ಷೆ, ನೇರಮಾತು, ಮುಂಗೋಪ, ಅತ್ಯುಗ್ರ ಸ್ವಾಭಿಮಾನ, ಬಂಡುಕೋರ ಮನಸ್ಸು, ನಂಬಿದವರನ್ನು ಕಷ್ಟಕಾಲದಲ್ಲಿಯೂ ಕೈಬಿಡದ ಸ್ನೇಹನಿಷ್ಠೆ  ಮತ್ತು ಭ್ರಷ್ಟಾಚಾರ ಎಂಬುದು ರಾಜಕೀಯ ಕ್ಷೇತ್ರದ ಅನಿವಾರ್ಯ ಕರ್ಮ ಎಂದು ಭಾವಿಸುವ ಅಸೂಕ್ಷ್ಮತೆಯಂತಹ ಗುಣಗಳು ಶಿವಮೊಗ್ಗ ಜಿಲ್ಲೆಯ ಇವರಿಬ್ಬರ ವ್ಯಕ್ತಿತ್ವದಲ್ಲಿ ಕಾಣಬಹುದು.

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಗಳಿಸಿರುವ ಗರಿಷ್ಠ ಯಶಸ್ಸಿನ ದಾಖಲೆ (ಶೇಕಡಾ ಏಳೂವರೆಯಷ್ಟು ಮತ ಮತ್ತು ಹತ್ತು ಶಾಸಕರು) ಎಸ್.ಬಂಗಾರಪ್ಪನವರ ಹೆಸರಲ್ಲಿದೆ. ಯಡಿಯೂರಪ್ಪನವರು ಈ ದಾಖಲೆಯನ್ನು ಮುರಿಯಬಹುದೇ?
ಯಡಿಯೂರಪ್ಪನವರಿಗೆ ಇನ್ನೂ ಬಿಜೆಪಿಯನ್ನು ಬಿಟ್ಟುಹೋಗುವ ಮನಸ್ಸಿಲ್ಲ, ಪಕ್ಷಕ್ಕೂ ಪ್ರೀತಿಗಿಂತ ಹೆಚ್ಚಾಗಿ ಭಯದಿಂದ ಅವರನ್ನು ಉಳಿಸಿಕೊಳ್ಳಬೇಕೆಂಬ ಆಸೆ ಇದೆ. ಎರಡೂ ಪಾಳಯಗಳಲ್ಲಿ ಈ ತಳಮಳ ಮುಂದುವರಿದಿದೆ.

ಪಕ್ಷ ಸ್ಥಾಪಿಸಿ ಪದಾಧಿಕಾರಿಗಳ ನೇಮಕ ಮಾಡಿದ ಮಾತ್ರಕ್ಕೆ ಎಲ್ಲವೂ ಮುಗಿಯಿತೆಂದು ಹೇಳಲಾಗುವುದಿಲ್ಲ. ಯಡಿಯೂರಪ್ಪನವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ವರೆಗೆ ಯಾವುದೂ ಅಂತಿಮ ಅಲ್ಲ, ಅದರ ನಂತರವೂ ಅಲ್ಲ. ಭಯಗ್ರಸ್ತ ಬಿಜೆಪಿ ಯಡಿಯೂರಪ್ಪನವರ ಷರತ್ತುಗಳನ್ನು ಒಪ್ಪಿಬಿಟ್ಟರೆ ಅವರು ಹೊಸ ಪಕ್ಷವನ್ನೇ ಬಿಜೆಪಿಯಲ್ಲಿ ವಿಲೀನಗೊಳಿಸಲೂಬಹುದು.

ಈಗಾಗಲೇ ಅವರು ರಾಜ್ಯ ಸರ್ಕಾರವನ್ನು `ಮೈತ್ರಿ ಸರ್ಕಾರ~ ಎಂದಿದ್ದಾರೆ. ಆದುದರಿಂದ ಚುನಾವಣೆಯಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯುವ ವರೆಗೆ ಯಡಿಯೂರಪ್ಪನವರ ಬಂಡಾಯದ ಬಗ್ಗೆ ಕೊನೆಯ ಮಾತನ್ನು ಬರೆಯಲಾಗದು.
ಉಭಯ ಬಣಗಳ ಪ್ರಯತ್ನಗಳೆಲ್ಲವೂ ವಿಫಲಗೊಂಡು ಕೊನೆಗೂ ಯಡಿಯೂರಪ್ಪನವರು ತಮ್ಮದೇ ಪಕ್ಷದ ಮೂಲಕ ಚುನಾವಣೆಯನ್ನು ಎದುರಿಸಿದರೆ ಏನಾಗಬಹುದು? ಮೊದಲನೆಯದಾಗಿ ಬಿಜೆಪಿ ಜತೆ ಸಂಬಂಧ ಕಡಿದುಕೊಂಡಾಕ್ಷಣ ಈ ವರೆಗೆ `ಕಮ್ಯುನಲ್~ ಆಗಿದ್ದ ಯಡಿಯೂರಪ್ಪನವರು  `ಸೆಕ್ಯುಲರ್~ ಆಗಿಬಿಡುತ್ತಾರೆ. 
ತಮಾಷೆಯಂತೆ ಕಂಡರೂ ಇದು ದೇಶದ ರಾಜಕೀಯ ವಾಸ್ತವ. ಗುಜರಾತ್‌ನ ಶಂಕರ್‌ಸಿಂಗ್ ವಘೇಲಾ ಅವರಿಂದ ಹಿಡಿದು ಉತ್ತರಪ್ರದೇಶದ ಕಲ್ಯಾಣ್‌ಸಿಂಗ್ ವರೆಗೆ ರಾಷ್ಟ್ರರಾಜಕಾರಣದಲ್ಲಿ ಇದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ,  ಇದರ ಲಾಭ ಖಂಡಿತ ಅವರಿಗೆ ಸಿಗಲಿದೆ.
`ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಯಡಿಯೂರಪ್ಪನವರ ಕೈಬಲಪಡಿಸಬೇಕಾಗುತ್ತದೆ~ ಎಂದು ಈಗಾಗಲೇ ನಮ್ಮ ಅನೇಕ ಜಾತ್ಯತೀತ ಚಿಂತಕರು ಖಾಸಗಿಯಾಗಿ ಹೇಳುತ್ತಿರುವ ಮಾತುಗಳು ಬಹಿರಂಗವಾಗಿ ಕೇಳಿಬರಬಹುದು. ಕಳೆದ 40 ವರ್ಷಗಳಿಂದ ಸಂಘ ಪರಿವಾರದ ಜತೆ ಸಂಬಂಧ ಹೊಂದಿದ್ದರೂ ಯಡಿಯೂರಪ್ಪನವರಿಗೆ ಕೋಮುವಾದಿ ಎಂಬ ಕಳಂಕ ಇಲ್ಲ. 
ಬಿಜೆಪಿಯನ್ನು `ರಾಮನಾಮ~ದ ಮೂಲಕ ಕಟ್ಟಲು ರಾಷ್ಟ್ರನಾಯಕರು ಪ್ರಯತ್ನಿಸುತ್ತಿದ್ದಾಗ ರಾಜ್ಯದಲ್ಲಿ ರೈತಪರ ಹೋರಾಟದ ಮೂಲಕ ಪಕ್ಷವನ್ನು ಬೆಳೆಸಿದವರು ಯಡಿಯೂರಪ್ಪ. ಆದುದರಿಂದ  ಈ `ರೂಪಾಂತರ~ ಅವರಿಗೆ ಕಷ್ಟ ಅಲ್ಲ.
ಎರಡನೆಯದಾಗಿ ಜಾತಿ ಬಲ. ಮುಖ್ಯಮಂತ್ರಿಯಾಗುವ ವರೆಗಿನ ತನ್ನ ರಾಜಕೀಯ ಜೀವನದಲ್ಲಿ ಯಡಿಯೂರಪ್ಪ ಕಟ್ಟಾಜಾತಿವಾದಿಯಂತೆ ನಡೆದುಕೊಂಡಿರಲಿಲ್ಲ. ಅಂತಹ ಆರೋಪ ಅವರ ರಾಜಕೀಯ ವಿರೋಧಿಗಳು ಕೂಡಾ ಮಾಡಿದ್ದು ಕಡಿಮೆ.
ಆದರೆ ಮುಖ್ಯಮಂತ್ರಿಯಾದ ನಂತರ ಬಹಿರಂಗವಾಗಿ ಲಿಂಗಾಯತ ಮಠಗಳ ಜತೆ ಗುರುತಿಸಿಕೊಂಡ ರೀತಿ, ಬಜೆಟ್‌ನಲ್ಲಿ ನೀಡಿದ `ಉಡುಗೊರೆ~ಗಳು ಮತ್ತು  ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾಗಲೂ ಲಿಂಗಾಯತ ಸ್ವಾಮಿಗಳು ಅವರನ್ನು ಸಮರ್ಥಿಸಿಕೊಂಡ ವರ್ತನೆ ಎಲ್ಲವೂ ಸೇರಿ ಯಡಿಯೂರಪ್ಪನವರಿಗೆ ಜಾತಿವಾದಿ ಎಂಬ ಹಣೆಪಟ್ಟಿ ತಂದುಕೊಟ್ಟಿತು.
ಜಾತಿಯನ್ನು ಅವರು ಖಂಡಿತ ರಾಜಕೀಯವಾಗಿ ಬಳಸಿಕೊಂಡಿದ್ದಾರೆ, ಜಾತಿ ಬೆಂಕಿ ಇದ್ದಹಾಗೆ, ಆರಿಸಲು ಹೋದಾಗಲೂ ಕೈಗೆ ತಗಲಿಬಿಡುತ್ತದೆ. ಅಂತಹದ್ದರಲ್ಲಿ ಅದೇ `ಜಾತಿ ಬೆಂಕಿ~ಯ ಜತೆ ಆಟವಾಡಲು ಹೋದ ಯಡಿಯೂರಪ್ಪನವರು ಜಾತಿವಾದಿ ಎಂಬ ಆರೋಪ ಹೊತ್ತಿರುವುದು ಸಹಜವೇ ಆಗಿದೆ.
ಹಿಂದೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಧನಂಜಯಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಹಿಂದುಳಿದ ಜಾತಿಗೆ ಸೇರಿರುವ ಎಂ.ಡಿ.ಲಕ್ಷ್ಮಿನಾರಾಯಣ್ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವ ಮೂಲಕ ಹೊಸ ಪಕ್ಷಕ್ಕೆ ಜಾತ್ಯತೀತ ಸ್ವರೂಪವನ್ನು ನೀಡಲು ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ.
ಇದರಿಂದ ಲಿಂಗಾಯತರ ಬೆಂಬಲ ಕಡಿಮೆಯಾಗಲಾರದು ಎಂದು ಅವರಿಗೆ ಗೊತ್ತು. ನಿಜವಾದ ಜಾತಿನಾಯಕನಲ್ಲಿ ಸ್ವಜಾತಿ ಮತದಾರರ ಮತಗಳನ್ನು ವರ್ಗಾವಣೆ ಮಾಡುವ ಶಕ್ತಿ ಇರುತ್ತದೆ. ಸದ್ಯ ದೇಶದ ರಾಜಕಾರಣದಲ್ಲಿ ಅಂತಹ ಶಕ್ತಿ ಹೊಂದಿರುವವರು ಬಿಎಸ್‌ಪಿ ನಾಯಕಿ ಮಾಯಾವತಿ ಮಾತ್ರ. 
ಬ್ರಾಹ್ಮಣ ಅಭ್ಯರ್ಥಿಗೂ ದಲಿತರ ಮತಗಳನ್ನು ವರ್ಗಾವಣೆ ಮಾಡುವ ಶಕ್ತಿಯೇ ಮಾಯಾವತಿಯವರ ಈ ಯಶಸ್ಸಿಗೆ ಕಾರಣ. ಯಡಿಯೂರಪ್ಪನವರ ಬಗ್ಗೆ ಲಿಂಗಾಯತರಲ್ಲಿರುವ ಕುರುಡು ಅಭಿಮಾನ ನೋಡಿದರೆ ಅವರೂ ಇಂತಹ ಶಕ್ತಿ ಹೊಂದಿರುವಂತೆ ಕಾಣುತ್ತಿದೆ.
ಮೂರನೆಯ ಅನುಕೂಲತೆ ಪ್ರಾದೇಶಿಕ ಆಶೋತ್ತರಗಳಿಗೆ ಸ್ಪಂದಿಸುವ ಸ್ವಾತಂತ್ರ್ಯ. ಹಲವು ರಾಜ್ಯಗಳಲ್ಲಿ ಪಕ್ಷದ ಸಂಘಟನೆಗಳನ್ನು ಹೊಂದಿರುವ ರಾಷ್ಟ್ರೀಯ ಪಕ್ಷಗಳು ರಾಜ್ಯ-ರಾಜ್ಯಗಳ ನಡುವಿನ ನೆಲ-ಜಲ-ಗಡಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಿಟ್ಟನಿಲುವನ್ನು ಕೈಗೊಳ್ಳುವುದು ಸಾಧ್ಯ ಇಲ್ಲ.

ಮೈತ್ರಿರಾಜಕಾರಣದ ಯುಗದಲ್ಲಿ ಇದು ಇನ್ನೂ ಕಷ್ಟ. ಆದರೆ ಪ್ರಾದೇಶಿಕ ಪಕ್ಷಕ್ಕೆ ಈ ಸಮಸ್ಯೆ ಇಲ್ಲ, ಅದು ಸ್ವತಂತ್ರ ನಿಲುವನ್ನು ಕೈಗೊಳ್ಳಬಹುದು. ಇತ್ತೀಚಿನ ಕಾವೇರಿ ವಿವಾದದಲ್ಲಿ ಎಚ್.ಡಿ.ದೇವೇಗೌಡರು ರಾಷ್ಟ್ರೀಯ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಉಪಾಯದಿಂದ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿರುವುದು ಇದಕ್ಕೆ ಉದಾಹರಣೆ.
ಪ್ರಾದೇಶಿಕ ಪಕ್ಷಗಳ ರಾಜಕಾರಣ ಇರುವ ಕರ್ನಾಟಕದ ನೆರೆಹೊರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಗೆ ಹೋಲಿಸಿದರೆ ಕರ್ನಾಟಕದ ಚೌಕಾಸಿ ರಾಜಕಾರಣ ದುರ್ಬಲ ಎಂದು ಅನಿಸಿಕೊಳ್ಳಲು  ರಾಷ್ಟ್ರೀಯ ಪಕ್ಷಗಳ ಬಗ್ಗೆ ಕರ್ನಾಟಕದ ಜನರ ಒಲವೇ ಕಾರಣ ಎನ್ನುವ ಅಭಿಪ್ರಾಯ ಇದೆ. ಇಂತಹ ಹೊತ್ತಿನಲ್ಲಿಯೇ ಯಡಿಯೂರಪ್ಪನವರ ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆಯಾಗಿದೆ.
ನಾಲ್ಕನೆಯದಾಗಿ, ಬಿಜೆಪಿಯಿಂದ ನಿರ್ಗಮಿಸುವ ಮೂಲಕ ಆಡಳಿತಾರೂಡ ಪಕ್ಷವಾಗಿ ಮುಂದಿನ ಚುನಾವಣೆಯಲ್ಲಿ ಅದು ಎದುರಿಸಲಿರುವ ಆಡಳಿತವಿರೋಧಿ ಅಲೆಯಿಂದಲೂ ಯಡಿಯೂರಪ್ಪನವರು ಸ್ಪಲ್ಪಮಟ್ಟಿಗೆ ಮುಕ್ತರಾಗಲಿದ್ದಾರೆ.  `ನಾನು ಮಂಡಿಸಿದ ಬಜೆಟ್‌ನ ಆಶಯಗಳು ಈಡೇರಿಲ್ಲ, ನನ್ನ ಕಾರ್ಯಕ್ರಮಗಳನ್ನು ನಂತರ ಬಂದವರು ಹಾಳು ಮಾಡಿದ್ದಾರೆ~ ಎಂಬ ಆರೋಪಗಳನ್ನು ಅವರು ಈಗಾಗಲೇ ಮಾಡುತ್ತಿದ್ದಾರೆ. ಜನ ಇದನ್ನು ನೂರಕ್ಕೆ ನೂರರಷ್ಟು ನಂಬಲಾರರು. ಆದರೆ ಇಂತಹ ಆರೋಪಗಳನ್ನು ಮಾಡುವ ಸ್ವಾತಂತ್ರ್ಯ ಅವರಿಗೆ ಹೊಸ ಪಕ್ಷದಿಂದ ಸಿಗಲಿದೆ.
ಕೊನೆಯದಾಗಿ ಭ್ರಷ್ಟಾಚಾರದ ಆರೋಪಗಳನ್ನು ಹೊತ್ತುಕೂಡಾ ಪ್ರಾದೇಶಿಕ ಪಕ್ಷದಲ್ಲಿ ನಿಶ್ಚಿಂತೆಯಿಂದ ನಾಯಕರಾಗಿ ಮುಂದುವರಿಯಲು ಯಡಿಯೂರಪ್ಪನವರಿಗೆ ಸಾಧ್ಯ. ಇದು ರಾಷ್ಟ್ರೀಯ ಪಕ್ಷಗಳಲ್ಲಿ ಕಷ್ಟ. ಈ ಕಾರಣದಿಂದಾಗಿಯೇ ಅಲ್ಲವೇ, ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳುವಂತಾಗಿದ್ದು?
ಅಶೋಕ್ ಚವಾಣ್, ಸುರೇಶ್ ಕಲ್ಮಾಡಿ ಮೊದಲಾದವರು ಅಧಿಕಾರ ಕಳೆದುಕೊಂಡದ್ದು ಕೂಡಾ ಇದೇ ಕಾರಣದಿಂದಾಗಿ. ಯಡಿಯೂರಪ್ಪನವರ ಮೇಲಿನ ಆರೋಪಗಳು ಇನ್ನೂ ವಿಚಾರಣಾ ಹಂತದಲ್ಲಿವೆ. ಅದು ಯಾವ ದಾರಿ ಹಿಡಿಯಲಿದೆಯೋ ಗೊತ್ತಿಲ್ಲ. ಇದರ ಹೊರತಾಗಿಯೂ ಒಂದೊಮ್ಮೆ ಅವರು ಚುನಾವಣೆಯ ನಂತರ ಅಧಿಕಾರಕ್ಕೆ ಬರುವಂತಹ ಸಂದರ್ಭ ಕೂಡಿಬಂದರೆ ಅವರ ಮೇಲಿನ ಭ್ರಷ್ಟಾಚಾರದ ಕಳಂಕ ಅದಕ್ಕೆ ಅಡ್ಡಿಯಾಗುವುದಿಲ್ಲ.
ಲಾಲುಪ್ರಸಾದ್ ತನ್ನ ಪತ್ನಿಯನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿ ಜೈಲಿಗೆ ಹೋಗಿ ಬರಲಿಲ್ಲವೇ? ಮಾಯಾವತಿ, ಜಯಲಲಿತಾ ಮೊದಲಾದವರು ಆರೋಪಗಳ ವಿಚಾರಣೆ ನಡೆಯುತ್ತಿರುವಾಗಲೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಿಲ್ಲವೇ?
ಇಷ್ಟೆಲ್ಲ ಅನುಕೂಲತೆಗಳಿದ್ದರೂ ಅಂತಿಮವಾಗಿ ಯಡಿಯೂರಪ್ಪನವರು ಬಯಸಿದ್ದು ಸಿಗಬಹುದೇ? ಇದು ಕಷ್ಟ.
ಮೊದಲನೆಯದಾಗಿ ಹೊಸ ಪಕ್ಷಕ್ಕೆ ಎಷ್ಟೇ ಅನುಕೂಲತೆಗಳಿದ್ದರೂ ಕೂಡಾ ಅದು ಸ್ವಂತ ಬಲದಿಂದ ಅಧಿಕಾರಕ್ಕೆ ಬರುವಷ್ಟು ಬಹುಮತವನ್ನಾಗಲಿ, ಇಲ್ಲವೆ ಅತ್ಯಧಿಕ ಸ್ಥಾನಗಳನ್ನು ಗಳಿಸುವುದಾಗಲಿ ಸಾಧ್ಯವೇ ಇಲ್ಲ. ರಾಜಕೀಯವನ್ನೇ ಉಸಿರಾಡುತ್ತಾ ಬಂದ ಯಡಿಯೂರಪ್ಪನವರಿಗೂ ಇದು ತಿಳಿದಿರಬಹುದು.
ಈ ರೀತಿಯ ಬಂಡುಕೋರ ಪಕ್ಷಗಳು ಮಾತೃಪಕ್ಷವನ್ನು ಸುಲಭದಲ್ಲಿ ಸೋಲಿಸಬಹುದು, ಆದರೆ ತಾನು ಗೆಲ್ಲಲಾಗುವುದಿಲ್ಲ. ಮತ್ತೆ ಬಂಗಾರಪ್ಪನವರ ರಾಜಕಾರಣವನ್ನೇ ಉಲ್ಲೇಖಿಸುವುದಾದರೆ ಅವರ `ಕರ್ನಾಟಕ ಕಾಂಗ್ರೆಸ್ ಪಕ್ಷ~ದಿಂದಾಗಿ ಕಾಂಗ್ರೆಸ್ ಸೋತುಹೋಯಿತು, ಆದರೆ ಅವರು ಅಧಿಕಾರಕ್ಕೆ ಬರಲಾಗಲಿಲ್ಲ.

ಮುಖ್ಯಮಂತ್ರಿ ಸ್ಥಾನಕ್ಕಾಗಿಯೇ ಇಷ್ಟೆಲ್ಲ ಬಡಿದಾಡಿ ಕೊನೆಗೆ ಅದೇ ಸಿಗದೆ ಹೋದರೆ ಹೊಸ ಪಕ್ಷ ರಚಿಸಿ ಏನು ಫಲ ಎಂಬ ಪ್ರಶ್ನೆ ಇಂದಲ್ಲ ನಾಳೆ ಯಡಿಯೂರಪ್ಪನವರಲ್ಲಿ ಹುಟ್ಟಿಕೊಳ್ಳಬಹುದು. ಬಿಜೆಪಿಯಲ್ಲಿಯೇ ಉಳಿದುಬಿಟ್ಟರೆ ಮುಖ್ಯಮಂತ್ರಿಯಾಗುವ ಅವಕಾಶ ಅವರಿಗೆ ಹೆಚ್ಚಿದೆ, ಅದು ಹೊಸ ಪಕ್ಷದಲ್ಲಿ ಖಂಡಿತ ಅವರಿಗೆ ಇಲ್ಲ.
ಎರಡನೆಯದಾಗಿ ಯಡಿಯೂರಪ್ಪನವರು ಬಿಜೆಪಿಯಲ್ಲಿರುವ ವರೆಗೆ ನಿಷ್ಠೆ ತೋರಿಸುತ್ತಿರುವ ಬೆಂಬಲಿಗರಲ್ಲಿ ಹೆಚ್ಚಿನವರು ಹೊಸ ಪಕ್ಷ ಸೇರುವುದು ಕಷ್ಟ. ಇದರ ಸುಳಿವನ್ನರಿತಿರುವ ಯಡಿಯೂರಪ್ಪನವರು `ತಳಮಟ್ಟದಿಂದಲೇ ಪಕ್ಷವನ್ನು ಕಟ್ಟುತ್ತೇನೆ, ನಾಯಕರನ್ನು ತಯಾರು ಮಾಡುತ್ತೇನೆ~ ಎಂದು ಹೇಳುತ್ತಿದ್ದರೂ ಅದು ಸುಲಭದ ಮಾತಲ್ಲ.
ಅಷ್ಟೊಂದು ಕಾಲಾವಕಾಶವೂ ಅವರಿಗಿಲ್ಲ. ಒಂದಷ್ಟು ನಾಯಕರು ಯಡಿಯೂರಪ್ಪನವರ ಜತೆಯಲ್ಲಿ ಉಳಿದು ಚುನಾವಣೆಯಲ್ಲಿ ಗೆದ್ದರೂ, ಅವರೆಲ್ಲ ಪಕ್ಷದಲ್ಲಿಯೇ ಉಳಿಯುತ್ತಾರೆ ಎಂದು ಹೇಳಲು ಸಾಧ್ಯ ಇಲ್ಲ. ಬಂಗಾರಪ್ಪನವರ ಪಕ್ಷದಿಂದ ಹತ್ತುಮಂದಿ ಆಯ್ಕೆಯಾದರೂ ಕೊನೆಗೆ ಅವರೂ ಸೇರಿದಂತೆ ಉಳಿದವರು ಇಬ್ಬರು ಮಾತ್ರ. 
ಸದಸ್ಯಬಲ ಸಂಖ್ಯೆ ಕಡಿಮೆ ಇದ್ದಾಗ ಪಕ್ಷವನ್ನು ಒಡೆಯುವುದು ಸುಲಭ. ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸರ್ಕಾರ ರಚನೆ ಮಾಡುವಷ್ಟು ಬಹುಮತ ಬರುವ ಸಾಧ್ಯತೆ ಈ ಕ್ಷಣದಲ್ಲಿ ಕಾಣುವುದಿಲ್ಲವಾದ ಕಾರಣ ಚುನಾವಣೋತ್ತರ ಧ್ರುವೀಕರಣಗಳು ಅನಿವಾರ್ಯವಾಗಿ ನಡೆದುಹೋಗಬಹುದು. ಅಂತಹ ಸಂದರ್ಭದಲ್ಲಿ ಬಂಗಾರಪ್ಪನವರಂತೆ ಯಡಿಯೂರಪ್ಪನವರೂ ಕೊನೆಗೆ ಒಂಟಿಯಾಗಿ ಉಳಿದುಬಿಡಬಹುದು.
ಮೂರನೆಯದಾಗಿ ಲೆಕ್ಕಾಚಾರ ತಪ್ಪಿದರೆ ರಾಜಕೀಯವಾಗಿ ಜಾತಿ ಎಷ್ಟು ಲಾಭ ತಂದುಕೊಡುತ್ತೋ, ಅಷ್ಟೇ ನಷ್ಟವನ್ನುಂಟು ಮಾಡುತ್ತದೆ. ಯಡಿಯೂರಪ್ಪನವರು ನಂಬಿಕೊಂಡಿರುವುದು ಲಿಂಗಾಯತ ಜಾತಿಯನ್ನು.
ಕಳೆದ ನಾಲ್ಕುವರೆ ವರ್ಷಗಳ ರಾಜ್ಯದ ರಾಜಕಾರಣದಲ್ಲಿ ಈ ಜಾತಿಯ ಪ್ರಭಾವವನ್ನು ಯಾರೂ ನಿರಾಕರಿಸಲಾರರು. ಮುಖ್ಯಮಂತ್ರಿ ಮತ್ತು ಸಚಿವರ ಆಯ್ಕೆಯಿಂದ ಹಿಡಿದು ಅಧಿಕಾರಿಗಳ ವರ್ಗಾವಣೆ ವರೆಗೆ ಜಾತಿ ಪ್ರಧಾನ ಪಾತ್ರ ವಹಿಸಿದೆ. ಇದು ಒಕ್ಕಲಿಗ, ಬ್ರಾಹಣ ಮೊದಲಾದ ಇತರ ಮೇಲ್ಜಾತಿಗಳಲ್ಲಿ ಅಸೂಯೆ ಮತ್ತು ಆಕ್ರೋಶವನ್ನು ಮತ್ತು ಕೆಳಜಾತಿಗಳಲ್ಲಿ ಅಭದ್ರತೆಯನ್ನು ಹುಟ್ಟಿಸಿದೆ. ಈ ಎರಡೂ ಗುಂಪುಗಳು ತಮ್ಮ ಒಟ್ಟು ಮತಗಳಿಂದ ಲಿಂಗಾಯತ ಅಭ್ಯರ್ಥಿಗಳು ಸೋಲುವ ಸಾಧ್ಯತೆ ಇದ್ದ ಕಡೆ ಒಟ್ಟಾಗಲೂ ಬಹುದು.
ಇದೇ ವೇಳೆ ಬಿಜೆಪಿ ಈಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ, `ಬಿಜೆಪಿ ಲಿಂಗಾಯತರಿಗೆ ಅನ್ಯಾಯಮಾಡಿದೆ~ ಎಂಬ ಯಡಿಯೂರಪ್ಪನವರ ಆರೋಪ ಮೊನಚುಕಳೆದುಕೊಳ್ಳಬಹುದು. ಈ ಭಯದಿಂದಲ್ಲವೇ, `ಶೆಟ್ಟರ್ ಸರ್ಕಾರವನ್ನು ಉರುಳಿಸುವುದಿಲ್ಲ~ ಎಂದು ಯಡಿಯೂರಪ್ಪ ಹೇಳುತ್ತಿರುವುದು?
ನಾಲ್ಕನೆಯದಾಗಿ ವೈಯಕ್ತಿಕವಾಗಿ ಅನ್ಯಾಯಕ್ಕೀಡಾಗಿದ್ದೇನೆ ಎಂದು ಹೇಳಿಕೊಂಡು ಪ್ರಾದೇಶಿಕ ಪಕ್ಷ ಕಟ್ಟಿದವರು ಯಶಸ್ಸು ಕಂಡದ್ದು ಕಡಿಮೆ.  ತಮಿಳುನಾಡಿನ ಪ್ರಾದೇಶಿಕ ಪಕ್ಷಗಳಿಗೆ ದ್ರಾವಿಡ ಚಳವಳಿ ಪ್ರೇರಣೆ, `ಕಾಂಗ್ರೆಸ್ ಪಕ್ಷ ತೆಲುಗರ ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡಿದೆ~ ಎಂಬ ಪ್ರಚಾರದ ಬಲದಿಂದಲೇ ಎನ್‌ಟಿಆರ್ ಮುಖ್ಯಮಂತ್ರಿಯಾಗಿದ್ದು.
ದಲಿತರಿಗೆ ಅನ್ಯಾಯವಾಗಿದೆ ಎಂದು ಹೇಳಿಯೇ ಕಾನ್ಶಿರಾಮ್ ಮತ್ತು ಮಾಯಾವತಿ ಬಿಎಸ್‌ಪಿ ಕಟ್ಟಿದ್ದು. ಇವೆಲ್ಲ ಯಶಸ್ಸಿನ ಮಾದರಿಗಳು. ಕರ್ನಾಟಕದಲ್ಲಿರುವುದು  ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ಗುಂಡೂರಾವ್, ಮತ್ತು ಎಸ್.ಬಂಗಾರಪ್ಪ ಮೊದಲಾದವರ ವೈಫಲ್ಯದ ಮಾದರಿಗಳು ಮಾತ್ರ.
ಅವರಿಗೆ ಸಿಗದ ಯಶಸ್ಸು ಯಡಿಯೂರಪ್ಪನವರಿಗೆ ಸಿಗುತ್ತಾ? ಕನಿಷ್ಠ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರಿಗೆ ಸಿಕ್ಕ ಯಶಸ್ಸಾದರೂ ಸಿಗಬಹುದೇ? ಇದನ್ನು ನೋಡಲು ಯಡಿಯೂರಪ್ಪನವರು ಮೊದಲು ಬಿಜೆಪಿ ತ್ಯಜಿಸಬೇಕು, ಹೊಸಪಕ್ಷ ಸೇರಬೇಕು, ಚುನಾವಣೆ ಎದುರಿಸಬೇಕು...ದಾರಿ ದೂರ ಇದೆ, ಸ್ಪಷ್ಟವೂ ಇಲ್ಲ.