Tuesday, February 24, 2015

ಬದಲಾಗದ ಬೀಡಿ ಈ ಸುರಕೋಡ

ಈ ಚಿತ್ರದಲ್ಲಿರುವ ಮನೆ ಗೆಳೆಯರಾದ ಹಸನ್ ನಯೀಂ ಸುರಕೋಡ ಅವರದ್ದು. ನಾನು ಇವರನ್ನು ಮೊದಲು ಭೇಟಿಯಾಗಿದ್ದು ಸುಮಾರು 30 ವರ್ಷಗಳ ಹಿಂದೆ ಮುಂಗಾರು ಪತ್ರಿಕೆಯ ಕಚೇರಿಯಲ್ಲಿ. ಆಗಲೂ ಇದೇ ಬಿಳಿ ಜುಬ್ಬಾ, ಬಿಳಿ ಪೈಜಾಮ, ಹೆಗಲಿಗೊಂದು ಚೀಲ,ತುಟಿಯಲ್ಲಿ ಹೊಗೆಯಾಡುತ್ತಿದ್ದ ಬೀಡಿ. ಪತ್ರಿಕೆ ಪ್ರಾರಂಭವಾದ ನಾಲ್ಕೇ ತಿಂಗಳಲ್ಲಿ ನಮಗೆಲ್ಲ ಗುರುಗಳಂತಿದ್ದ ಎನ್.ಎಸ್.ಶಂಕರ್, ಕೋಟಿಗಾನಹಳ್ಳಿ ರಾಮಯ್ಯ, ಇಂದೂಧರ ಹೊನ್ನಾಪುರ ಮೊದಲಾದವರೆಲ್ಲರೂ ವಡ್ಡರ್ಸೆಯವರ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಪತ್ರಿಕೆ ಬಿಟ್ಟು ಹೊರಟಿದ್ದರು. ನಾವಿನ್ನೂ ಕಣ್ಣುಬಿಡುತ್ತಿದ್ದವರು, ಹಠಾತ್ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲಾಗದೆ ಪಿಳಿಪಿಳಿ ಕಣ್ಣು ಬಿಟ್ಟು ಅಹಿತಕರವಾದ ವಿದ್ಯಮಾನಕ್ಕೆ ಸಾಕ್ಷಿಗಳಾಗಿದ್ದೆವು.

ಆಗ ನಾವು ಒಂದಷ್ಟು ಗೆಳೆಯರು ಬೈಕಂಪಾಡಿಯ ಕಚೇರಿ ಪಕ್ಕದ ಹಂಗರಗುಂಡಿಯಲ್ಲಿ ಮನೆ ಮಾಡಿಕೊಂಡಿದ್ದೆವು. ಸುರಕೋಡ ನಮ್ಮ ಜತೆಗಿದ್ದರು. ಪತ್ರಿಕೆ ಬಿಟ್ಟು ಹೊರಟು ನಿಂತ ಇತರರ ಮುಖದಲ್ಲಿನ ಆತ್ಮವಿಶ್ವಾಸ ನೋಡಿದಾಗ ಅವರ ಭವಿಷ್ಯದ ಬಗ್ಗೆ ನಮಗೆ ಚಿಂತೆಯಾಗಿರಲಿಲ್ಲ. ಆದರೆ ನಮ್ಮ ಚಿಂತೆ ಸುರಕೋಡ ಅವರ ಬಗ್ಗೆ. ಪರಸ್ಪರ ಎಲ್ಲವನ್ನೂ ಹಂಚಿಕೊಂಡ ನಮಗೆ ಸುರಕೋಡ ಅವರ ಮನೆಪರಿಸ್ಥಿತಿ ಗೊತ್ತಿತ್ತು. ಈ ಕಾರಣಕ್ಕಾಗಿ ನಾನು ಮತ್ತು ಹನೀಫ್ ಧೈರ್ಯ ಮಾಡಿ ಸುರಕೋಡ ಬಳಿ ಹೋಗಿ ‘ ಅವರೆಲ್ಲ ಹೋಗ್ಲಿ ಸಾರ್, ನೀವು ಇದ್ದು ಬಿಡಿ ‘ ಎಂದೆವು. ಅಷ್ಟು ಹೇಳಿದ್ದೇ ತಡ, ಕುಳಿತ ಚಾಪೆಯಿಂದ ಧಿಗ್ಗನೆ ಎದ್ದು ನಿಂತ ಸುರಕೋಡ ಕೈಯಲ್ಲಿದ್ದ ಮೋಟು ಬೀಡಿಯನ್ನು ಎಸೆದು ನಮ್ಮನ್ನು ಕೆಂಗಣ್ಣುಗಳಿಂದ ದಿಟ್ಟಿಸಿ ನೋಡಿ ‘ ನೀವು ವಡ್ಡರ್ಸೆಯವರ ಏಜಂಟರಾ?’ ಎಂದು ಮುಖಕ್ಕೆ ಉಗಿದಂತೆ ಹೇಳಿ ಹೊರಟುಬಿಟ್ಟರು. ಆ ಉರಿಯುವ ಕಣ್ಣುಗಳಲ್ಲಿ ಸ್ವಾಭಿಮಾನಿಯೊಬ್ಬನ ಸಾತ್ವಿಕ ಸಿಟ್ಟನ್ನು ಕಂಡು ನಾನು ಕಲ್ಲಾಗಿ ನಿಂತಿದ್ದೆ. ಆಗ ಸ್ವಲ್ಪ ಸಿಟ್ಟಾಗಿದ್ದು ನಿಜ, ಆದರೆ ನಿಧಾನವಾಗಿ ಅದು ಕರಗಿ ಸ್ನೇಹವಷ್ಟೇ ನಮ್ಮ ನಡುವೆ ಉಳಿದಿದೆ. ಬಹಳ ದಿನಗಳಿಂದ ಮನೆಗೆ ಕರೆಯುತ್ತಿದ್ದರು. ಮೊನ್ನೆ ರಾಮದುರ್ಗದಲ್ಲಿರುವ ಅವರ ಮನೆಗೆ ಹೋಗಿ ದೇವನೂರ ಮಹದೇವ ಜತೆ ಕೂತು ಹರಟುತ್ತಿದ್ದಾಗ ಹಳೆಯದ್ದೆಲ್ಲ ನೆನಪಾಯಿತು.
ಸುರಗೋಡ ಅವರದ್ದು ಈಗಲೂ ಬಡತನವನ್ನು ಹಾಸಿ ಹೊದ್ದು ಮಲಗುವ ಸ್ಥಿತಿ. ಅದನ್ನು ವಿವರಿಸ ಹೊರಟರೆ ಸ್ವಾಭಿಮಾನಿಯಾದ ಅವರಿಗೆ ನೋವಾದೀತು. ಕಷ್ಟಕಾರ್ಪಣ್ಯಗಳೇನೇ ಇದ್ದರೂ ಸುರಕೋಡ ತಾನು ನಂಬಿದ ಮೌಲ್ಯಗಳ ಜತೆ ರಾಜಿಮಾಡಿಕೊಂಡವರಲ್ಲ, ಶ್ರಮ ಇಲ್ಲದ ದುಡ್ಡಿಗಾಗಿ, ವಶೀಲಿ ಮಾಡಿ ಪಡೆಯುವ ಪ್ರಶಸ್ತಿ-ಪುರಸ್ಕಾರಕ್ಕಾಗಿ ಆಸೆ ಪಟ್ಟವರಲ್ಲ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಅವರು ಬದುಕಿನುದ್ದಕ್ಕೂ ಕಹಿಯನ್ನೇ ಉಂಡರೂ ಅದು ಅವರ ಮಾತು ಇಲ್ಲವೆ ನಡವಳಿಕೆಯಲ್ಲಿ ಎಂದೂ ವ್ಯಕ್ತವಾಗಿಲ್ಲ. ರಾಮದುರ್ಗದಲ್ಲಿ ಪ್ರಗತಿಪರವಾಗಿ ಯೋಚನೆ ಮಾಡುವ ಒಂದು ದೊಡ್ಡ (ಸಣ್ಣದ್ದಲ್ಲ) ಗುಂಪನ್ನು ಅವರು ಕಟ್ಟಿಕೊಂಡಿದ್ದಾರೆ. ಸುರಕೋಡ ಅವರ ಹಿತವನ್ನು ಬಯಸುವವರು ಇಡೀ ರಾಜ್ಯದಲ್ಲಿದ್ದಾರೆ. ಯಾರ್ಯಾರಿಗೋ 50,60, 70 ವರ್ಷಗಳ ಆಚರಣೆ ಮಾಡುತ್ತೇವೆ. ಎಲ್ಲರೂ ಸೇರಿ ಸುರಕೋಡ ಅವರ ಕಷ್ಟವನ್ನು ಸ್ವಲ್ಪ ಹಂಚಿಕೊಳ್ಳುವ ಏನಾದರೂ ಕಾರ್ಯಕ್ರಮ ಮಾಡಬಾರದೇಕೇ?

No comments:

Post a Comment