Friday, November 20, 2015

ಬಿಲ್ಲವರು ಎಲ್ಲಿರಬೇಕಿತ್ತು? ಎಲ್ಲಿದ್ದಾರೆ?

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಸುಧಾರಣಾ ಕಾಯಿದೆಯಿಂದಾಗಿ ಭೂಮಿ ಪಡೆದುಕೊಂಡವರು, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಮೀಸಲಾತಿಯ ಫಲ ಉಂಡವರು ಮತ್ತು ಸಂತ ನಾರಾಯಣ ಗುರುಗಳ ಸಂದೇಶ ತೋರಿದ ಸುಧಾರಣೆಯ ಹಾದಿಯನ್ನು ಬಹಳ ಬೇಗ ತಿಳಿದುಕೊಂಡವರು ಬಿಲ್ಲವರು. ಈ ಎಲ್ಲ ಬೆಳವಣಿಗಳ ಫಲಾನುಭವಿ ಬಿಲ್ಲವರು ಎಲ್ಲಿರಬೇಕಿತ್ತು? ಎಲ್ಲಿದ್ದಾರೆ?
ಕೇರಳದಲ್ಲಿ ನಾರಾಯಣ ಗುರು ಚಳುವಳಿ ನಡೆದ 50 ವರ್ಷಗಳ ನಂತರ ಅಲ್ಲಿನ ಈಳವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿತ್ತು. ನಾರಾಯಣ ಗುರು ಚಳುವಳಿಯ ಯಶಸ್ಸಿನ ಬಿಂಬವನ್ನು ಆ ಸಮೀಕ್ಷೆಯ ವರದಿಯಲ್ಲಿ ಕಾಣಬಹುದು. ವಕೀಲರು, ವೈದ್ಯರು, ಪತ್ರಕರ್ತರು, ರಾಜಕಾರಣಿಗಳು,ಸರ್ಕಾರಿ ಅಧಿಕಾರಿಗಳು ಶಿಕ್ಷಕರು, ಉದ್ಯಮಿಗಳು, ವ್ಯಾಪಾರಿಗಳು, ಬ್ಯಾಂಕರ್ ಗಳು, ಕಲಾವಿದರು ಸೇರಿದಂತೆ ಹತ್ತು ವೃತ್ತಿಗಳಲ್ಲಿರುವ ಈಳವರನ್ನು ಗುರುತಿಸುವ ಕೆಲಸಅಲ್ಲಿ ನಡೆಯಿತು. ಅಷ್ಟೊತ್ತಿಗೆ ಈ ಎಲ್ಲ ವೃತ್ತಿಗಳಲ್ಲಿ ಈಳವರು ತಮ್ಮ ಆಧಿಪತ್ಯ ಸ್ಥಾಪಿಸಿದ್ದರು.

ಕೇರಳದ ಈಳವರಂತೆಯೇ ನಾರಾಯಣ ಗುರುಗಳ ಮಾರ್ಗದರ್ಶನ ಪಡೆದ, ಅಲ್ಲಿಯಂತೆಯೇ ಭೂ ಸುಧಾರಣೆ ಮತ್ತು ಮೀಸಲಾತಿಯ ಫಲಾನುಭವಿಗಳಾದ ಬಿಲ್ಲವರು ಈಗ ಎಲ್ಲಿದ್ದಾರೆ? ಬಿಲ್ಲವರಲ್ಲಿ ಎಷ್ಟುಮಂದಿ ವಕೀಲರು, ವೈದ್ಯರು, ಎಂಜನಿಯರ್ ಗಳು, ಉದ್ಯಮಿಗಳು, ಪತ್ರಕರ್ತರು, ಸರ್ಕಾರಿ ನೌಕರರು, ಪ್ರಾಧ್ಯಾಪಕರು ಇದ್ದಾರೆ?
ಬಿಲ್ಲವ ಯುವಕರು ಎಲ್ಲಿದ್ದಾರೆಂದು ಹುಡುಕಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಠಾಣೆಗಳ ದಾಖಲೆಗಳನ್ನು ನೋಡಬೇಕು. ಸೂತ್ರಧಾರಿಗಳು ತಲೆಗೆ ತುಂಬಿದ ಧರ್ಮದ ನಶೆಯೇರಿಸಿಕೊಂಡ ಪಾತ್ರಧಾರಿ ಬಿಲ್ಲವ ಯುವಕರು ಧರ್ಮದ ಹೆಸರಲ್ಲಿ ಒಂದಷ್ಟು ಮಂದಿಯ ಪ್ರಾಣ ತೆಗೆದಿದ್ದಾರೆ, ತಾವೂ ಅದೇ ದ್ವೇಷಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹಾದಿ ತಪ್ಪಿದ ಈ ಅಮಾಯಕ ಯುವಕರ ಬಡ ತಂದೆತಾಯಿಗಳು ಬದುಕಿಯೂ ಸತ್ತಂತಿದ್ದಾರೆ.
ಈ ಪಾತ್ರಧಾರಿಗಳನ್ನು ಪೋಷಿಸಿಕೊಂಡು ಬಂದ ಸೂತ್ರಧಾರಿಗಳು ತಮ್ಮ ಮಕ್ಕಳನ್ನು ಡಾಕ್ಟರ್, ಎಂಜನಿಯರ್, ಅಡ್ವೋಕೇಟ್, ಉದ್ಯಮಿಗಳನ್ನಾಗಿ ಮಾಡಿ ಆಗಾಗ ಹಿಂದೂ ಧರ್ಮಕ್ಕೆ ಒದಗಿ ಬಂದ ಆಪತ್ತಿನ ಬಗ್ಗೆ ಅಂಗರಕ್ಷಕರನ್ನು ಅಕ್ಕಪಕ್ಕದಲ್ಲಿಟ್ಟುಕೊಂಡು ಭಾಷಣ ಮಾಡುತ್ತಾ ಹೊಸ ಬಲಿಪಶುಗಳನ್ನು ತಯಾರುಮಾಡುತ್ತಿದ್ದಾರೆ.
ಈ ಅಮಾಯಕ ಯುವಕರಿಗೆ ಸರಿತಪ್ಪು ತಿಳಿಸಿ ಅವರನ್ನು ಹಾದಿ ತಪ್ಪದಂತೆ ನೋಡಿಕೊಳ್ಳಬೇಕಾದ ಬಿಲ್ಲವ ಸಮುದಾಯದ ನಾಯಕರು ಧರ್ಮಸ್ಥಳ, ಕೊಲ್ಲೂರಿಗೆ ಪೈಪೋಟಿ ನೀಡುತ್ತಿದ್ದೇವೆ ಎಂದು ಎದೆತಟ್ಟಿಕೊಂಡು ದೇವಸ್ಥಾನದ ಜೀರ್ಣೋದ್ದಾರಕ್ಕೆ ತಮ್ಮನ್ನು ಅರ್ಪಿಸಿಕೊಂಡು ತಾವೇ ನಿಜವಾದ ಹಿಂದೂಗಳೆಂದು ಸಾಬೀತುಮಾಡಲು ಹೊರಟಿದ್ದಾರೆ. ನಾರಾಯಣ ಗುರು ಸ್ಥಾಪಿಸಿದ್ದ ದೇವಸ್ಥಾನದಲ್ಲಿ ಅವರ ಸಂದೇಶದ ಗೋರಿ ಕಾಣಿಸುತ್ತಿದೆ. ನಾರಾಯಣ ಗುರು ಸಂದೇಶದಿಂದ ಬೆಳಗಬೇಕಾದ ಬಿಲ್ಲವರ ಮನೆಗಳಲ್ಲಿ ಕತ್ತಲು ತುಂಬಿದೆ.
---------------------------------------------------------------------------------------------------------------------------------

(ನನಗೆ ವೈಯಕ್ತಿಕವಾಗಿ ಪರಿಚಿತರಲ್ಲದ ವಿಶು ಶೆಟ್ಟಿ ಮತ್ತು ಪರಿಚಿತರಾದ ಹರಿಶ್ಚಂದ್ರ ಭಟ್ ಸೇರಿದಂತೆ ಕೆಲವರು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ನನ್ನದೂ ಒಂದಷ್ಟು ಪ್ರಶ್ನೆಗಳಿವೆ. ಅವುಗಳನ್ನು ನಿಮ್ಮ ಮುಂದಿಟ್ಟಿದ್ದೇನೆ.)
ನಾನು ಮೊಗವೀರ,ಬ್ಯಾರಿ,ಬಂಟರ ಜತೆಯಲ್ಲಿ ವಿದ್ಯಾರ್ಥಿ ಜೀವನ ಮತ್ತು ವೃತ್ತಿ ಬದುಕಿನ ಸುಮಾರು 20 ವರ್ಷಗಳನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದವನು. ಈ ಎಲ್ಲ ಸಮುದಾಯಗಳ ನಡುವೆ ಆಗಲೂ ಸ್ನೇಹ, ಪ್ರೀತಿ,ವಿಶ್ವಾಸದ ಜತೆಯಲ್ಲಿ ಸಿಟ್ಟು, ಜಗಳ, ಅಸೂಯೆ, ದ್ವೇಷ ಕೂಡಾ ಇತ್ತು.
ಹಿಂದೂ ಹುಡುಗರು, ಮುಸ್ಲಿಮ್ ಹುಡುಗಿಯರನ್ನು ಛೇಡಿಸುವುದು, ಮುಸ್ಲಿಮ್ ಹುಡುಗರು ಹಿಂದೂ ಹುಡುಗಿಯರ ಜತೆ ಐಸ್ ಕ್ರೀಮ್ ಪಾರ್ಲರ್ ಗಳಿಗೆ ಹೋಗುವುದು ಕೂಡಾ ನಡೆದಿತ್ತು. ಎರಡೂ ಧರ್ಮಗಳ ಗಂಡು-ಹೆಣ್ಣಿನ ನಡುವಿನ ಅಕ್ರಮ ಸಂಬಂಧಗಳ ಬಗ್ಗೆ ಆಗಲೂ ಗಾಳಿಸುದ್ದಿಗಳು ಹಾರಾಡುತ್ತಿತ್ತು. ಈ ಕಾರಣಗಳಿಗಾಗಿ ನಮ್ಮ ನಡುವೆ ಜಗಳ-ಹೊಡೆದಾಟಗಳೂ ನಡೆಯುತ್ತಿದ್ದುದೂ ಉಂಟು.
ಆದರೆ ನಾವೆಂದೂ ಧರ್ಮದ ಕನ್ನಡಕ ಹಾಕಿಕೊಂಡು ಪ್ರೀತಿ-ಜಗಳ ಮಾಡುತ್ತಿರಲಿಲ್ಲ. ಆ ಕಾಲದಲ್ಲಿ ನನ್ನೂರಿನ ಹುಡುಗಿಯೊಬ್ಬಳನ್ನು ನನ್ನ ಮುಸ್ಲಿಮ್ ಸ್ನೇಹಿತ ಪ್ರೀತಿಸಿ ಮದುವೆಯಾದಾಗ ನಮ್ಮೂರು ಹೊತ್ತಿ ಉರಿದಿರಲಿಲ್ಲ. ಅದು ಎರಡು ಕುಟುಂಬಗಳಿಗೆ ಸಂಬಂಧಿಸಿದ ವಿಷಯವೆಂದು ಉಳಿದವರು ಅದನ್ನು ಸಹಜವಾಗಿ ಸ್ವೀಕರಿಸಿದ್ದರು.
ಆಗ ನಮ್ಮ ನಡುವೆ ಇಲ್ಲದ ಧರ್ಮ ಕೇಂದ್ರಿತ ಸಿಟ್ಟು, ಜಗಳ, ದ್ವೇಷ ಈಗ ಯಾಕೆ ಹುಟ್ಟಿಕೊಂಡಿದೆ ಎನ್ನುವುದು ಪ್ರಶ್ನೆ. ಪರಸ್ಪರ ಪ್ರಾಣ ತೆಗೆಯಲು ಕಾದಾಡುವಂತಹ ಮಟ್ಟಕ್ಕೆ ಹಿಂದೂ-ಮುಸ್ಲಿಮರು ಇಳಿಯುವಷ್ಟು ದ್ವೇಷ ಹುಟ್ಟಿಸುವ ಯಾವ ಘಟನೆ-ಬೆಳವಣಿಗೆ ಕಳೆದ ಮೂವತ್ತು ವರ್ಷಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ ಎನ್ನುವುದನ್ನು ಯಾರಾದರೂ ಹೇಳಬಲ್ಲಿರಾ?
ಹಿಂದೂಗಳು, ಮುಸ್ಲಿಮರ ಇಲ್ಲವೆ ಮುಸ್ಲಿಮರು ಹಿಂದೂಗಳ ಆಸ್ತಿ-ಭೂಮಿ ಕಿತ್ತುಕೊಂಡರೇ? ಸಾವಿರಾರು ಸಂಖ್ಯೆಯಲ್ಲಿ ಮತಾಂತರ ನಡೆಯಿತೇ? ಯಾವುದಾದರೂ ದೇವಸ್ಥಾನ, ಮಸೀದಿಗಳ ಧ್ವಂಸ ನಡೆಯಿತೇ? ಏನಾಯಿತು ಹೇಳಿ?


ಧರ್ಮದ ಕನ್ನಡಕ ಕೆಳಗಿಟ್ಟು ಸುತ್ತಲಿನ ಸಮಾಜ ನೋಡಿದರೆ ಬಂಟ,ಬ್ಯಾರಿ,ಬಿಲ್ಲವ,ಮೊಗವೀರ, ಕ್ರಿಶ್ಚಿಯನರು ಕೂಡಿ ಸ್ವಾಭಿಮಾನದಿಂದ ಕಟ್ಟಿದ ಸ್ವಾವಲಂಬಿ ಜಿಲ್ಲೆಯನ್ನು ಕಾಣಬಹುದು. ಅದು ಪರಸ್ಪರ ಕಾದಾಡಿ, ರಕ್ತಹರಿಸಿ ಕಟ್ಟಿದ್ದಲ್ಲ, ಶ್ರಮಪಟ್ಟು, ಊರೂರು ಅಲೆದು ಬೆವರು ಸುರಿಸಿ ಕಟ್ಟಿದ ಜಿಲ್ಲೆ. (ನನ್ನ ಅಪ್ಪ ಇದ್ದ ತುಂಡುಭೂಮಿಯನ್ನು ಉಳಿಸಲು ಮುಂಬೈಗೆ ಓಡಿ ಹೋಗಿ ಬೆವರು-ರಕ್ತ ಸುರಿಸಿ ದುಡಿಯದೆ ಇದ್ದಿದ್ದರೆ ನಾನು ಮಟ್ಟುವಿನಲ್ಲಿ ದೋಣಿ ಓಡಿಸುತ್ತಾ ಇರುತ್ತಿದ್ದೆನೋ ಏನೋ?)
ಈ ಜಿಲ್ಲೆಯ ಈಗಿನ ಸ್ಥಿತಿ ಏನಾಗಿದೆ ನೋಡಿ. ಬೀದಿಯಲ್ಲಿ ರಕ್ತ ಹರಿಯುತ್ತಿದೆ. ಪಾಸ್ ಪೋರ್ಟ್ ಕಚೇರಿ ಮುಂದೆ ಕ್ಯೂ ನಿಲ್ಲುತ್ತಿದ್ದ ಹಿಂದೂ-ಮುಸ್ಲಿಮ್ ಯುವಕರು ಪೊಲೀಸ್ ಠಾಣೆಯ ಮುಂದೆ ನಿಂತಿದ್ದಾರೆ. ಪೊಲೀಸ್ ಕೇಸ್ ಗಳಿಂದಾಗಿ ಬೇರೆ ದೇಶಗಳಿಗೆ ಹೋಗಿ ದುಡಿಯವ ಅವಕಾಶದ ಬಾಗಿಲು ಮುಚ್ಚಿದೆ. ಒಮ್ಮೆ ಕ್ರಿಮಿನಲ್ ಎಂಬ ಕಳಂಕ ಹತ್ತಿದರೆ ಅದನ್ನು ಕಿತ್ತುಹಾಕುವುದು ಕಷ್ಟ. ಈ ಚಕ್ರವ್ಯೂಹದೊಳಗೆ ಸಿಕ್ಕಿಹಾಕಿಕೊಂಡ ನಮ್ಮ ಯುವಕರು ಹೊರಬರಲಾಗದೆ ಇನ್ನಷ್ಟು ವ್ಯಗ್ರರಾಗಿ,ಕ್ರೂರಿಗಳಾಗಿ, ಕೊಲೆಗಡುಕರಾಗಿ ಬದಲಾಗುತ್ತಿದ್ದಾರೆ.
ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಜವಾಗಿ ನಡೆಯಬೇಕಾದ ಹೋರಾಟದ ಬಗ್ಗೆ ಯಾರೂ ತಲೆ ಕೆಡಿಸುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಬದಲಾಗುತ್ತಿದೆ. ನೆಲ-ಜಲ-ಜೀವದ ಧಾರಣಾ ಸಾಮರ್ಥ್ಯವನ್ನು ಮೀರಿ ಕೈಗಾರಿಕಿಕರಣ ನಡೆಯುತ್ತಿದೆ. ಕಳೆದ 30 ವರ್ಷಗಳಲ್ಲಿ ಸಾವಿರಾರು ಕುಟುಂಬಗಳು ಭೂಮಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಗಾಳಿಯಲ್ಲಿ ವಿಷ ತುಂಬಿದೆ. ಈ ಬಗ್ಗೆ ಸೊಲ್ಲೆತ್ತುವವರೇ ಇಲ್ಲ. ಶತ್ರುಗಳು ಮರೆಯಲ್ಲಿ ನಿಂತು ಮುಸಿಮುಸಿ ನಗುತ್ತಿದ್ದಾರೆ, ಮಿತ್ರರಂತೆ ಇರಬೇಕಾದವರು ಬೀದಿಯಲ್ಲಿ ಕಾದಾಡುತ್ತಿದ್ದಾರೆ.
ಹೀಗೆ ಯಾಕಾಯಿತು ಎಂದು ನಾನು ಬಿಡಿಸಿ ಹೇಳುವುದಿಲ್ಲ. ಅದು ಮತ್ತೆ ಬಿಜೆಪಿ-ಕಾಂಗ್ರೆಸ್ ನಡುವಿನ ಥೂಥೂ- ಮೈಮೈ ಜಗಳವಾಗುತ್ತದೆ. ಈ ಗಂಡಾಂತಕಾರಿ ಬೆಳವಣಿಗೆಯ ನಿಜವಾದ ಫಲಾನುಭವಿಗಳು ಯಾರು?ಬಲಿಪಶುಗಳು ಯಾರು ಎನ್ನುವುದನ್ನು ನೀವೇ ಯೋಚಿಸಿ ತೀರ್ಮಾನಕ್ಕೆ ಬನ್ನಿ.

No comments:

Post a Comment