Saturday, March 28, 2015

ಕರ್ನಾಟಕ ಮೂಢನಂಬಿಕೆಗಳ ಪ್ರತಿಬಂಧಕ ಮಸೂದೆ (2013) ಕುರಿತು ಚರ್ಚೆ, ಸಂವಾದ



ಚರ್ಚೆ ಮತ್ತು ಸಂವಾದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊಫೆಸರ್ ಗಳು

Thursday, March 26, 2015

ಭಿನ್ನಾಭಿಪ್ರಾಯ ಇಲ್ಲದ ಸ್ನೇಹ ಉಸಿರುಕಟ್ಟಿ ಸಾಯುತ್ತದೆ..

ಮುನೀರ್,ಸತ್ಯಾ,ಅದ್ದೆ,ಸೂಡಾ,ಮಂಜು, ಇಮಾಮ್...ನಿಮ್ಮ ಕಳಕಳಿ ನನಗೆ ಅರ್ಥವಾಗುತ್ತಿದೆ, ಆದರೆ ನೀವು ಆತಂಕಪಡಬೇಕಾಗಿಲ್ಲ.. ನಮ್ಮೆಲ್ಲರದ್ದು ಸಮಾನ ಮನಸ್ಕರ ಸ್ನೇಹ. ನಾವೆಲ್ಲ ‘ರಾಮರಾಜ್ಯ’ದ ಸುಖವನ್ನು ಹಂಚಿಕೊಂಡು ಸಂಭ್ರಮಪಡಲು ಸ್ನೇಹಿತರಾದವರಲ್ಲ, ನಮ್ಮ ಸಂಕಟ,ತಳಮಳ, ಕಳಕಳಿಗಳನ್ನು ಹಂಚಿಕೊಳ್ಳಲು ಒಟ್ಟಾದವರು. ಇಂತಹ ಸ್ನೇಹದಲ್ಲಿ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಯಾಕೆಂದರೆ ಭಿನ್ನಾಭಿಪ್ರಾಯವಿಲ್ಲದ ಸ್ನೇಹ ಉಸಿರುಕಟ್ಟಿ ಸಾಯುತ್ತದೆ. ಭಿನ್ನಾಭಿಪ್ರಾಯ ಇಲ್ಲದೆ ಇದ್ದಲ್ಲಿ ಸ್ನೇಹ ಇರುವುದಿಲ್ಲ, ಗುಲಾಮಗಿರಿ ಇರುತ್ತದೆ. ಗೆಳೆತನದಲ್ಲಿ ಕೂಡಾ ಆಂತರಿಕವಾದ ಪ್ರಜಾಪ್ರಭುತ್ವ ಇರಬೇಕು ಎಂಬುದು ನನ್ನ ಆಶಯ.

ನನ್ನಲ್ಲೊಂದು ಕೊರಗು ಇದೆ. ವೃತ್ತಿಬದುಕಿನಲ್ಲಿ ನನಗೆ ಒಳ್ಳೆಯ ಸಂಪಾದಕರು ಸಿಕ್ಕಿದ್ದಾರೆ. ವಡ್ಡರ್ಸೆಯವರಿಂದ ವೃತ್ತಿಯ ಮೊದಲ ಪಾಠ ಕಲಿತವನು. ಕೆ.ಎನ್. ಹರಿಕುಮಾರ್ ಕಷ್ಟಕಾಲದಲ್ಲಿ ನನಗೆ ನೆರವಾದವರು. ಕೆ.ಎನ್.ಶಾಂತಕುಮಾರ್ ಬೆನ್ನಿಗೆ ನಿಂತು ನನ್ನನ್ನು ಪತ್ರಕರ್ತನಾಗಿ ಬೆಳೆಸಿದವರು. ಈ ಋಣದ ಭಾರ ನನ್ನ ಮೇಲಿದೆ. ಕನ್ನಡದಲ್ಲಿ ವೃತ್ತಿಪರವಾದ ಉತ್ಸಾಹಿ ಯುವಪತ್ರಕರ್ತರ ತಂಡವೊಂದನ್ನು ಕಟ್ಟಲು ನೆರವಾಗುವ ಮೂಲಕ ನನ್ನ ತಲೆಮೇಲಿರುವ ಋಣಭಾರವನ್ನು ಇಳಿಸಬೇಕೆಂಬ ಯೋಚನೆಯೊಂದು ದೆಹಲಿ ಬಿಟ್ಟು ಬಂದಾಗ ನನ್ನ ತಲೆಯಲ್ಲಿತ್ತು. ವಡ್ಡರ್ಸೆಯವರಂತೆ ನಾನು ಕೂಡಾ ಸ್ವಲ್ಪ ಹುಂಬ,ವ್ಯವಹಾರಿಕವಾಗಿ ಜಾಣನಲ್ಲ. ಆದ್ದರಿಂದ ಬಯಸಿದಂತೆ ನಡೆಯಲಿಲ್ಲ.

ನಮ್ಮಲ್ಲೊಂದು ಯಶಸ್ಸಿನ ಸೂತ್ರ ಇದೆ. ಅದು ನಿನಗಿಂತ ಹಿರಿಯ ಸ್ಥಾನದಲ್ಲಿರುವವರ ಭಟ್ಟಂಗಿತನ ಮಾಡು, ಕಿರಿಯರನ್ನು ತುಳಿದುಹಾಕು ಎಂದು ಹೇಳುತ್ತದೆ. ಯಾಕೆಂದರೆ ಹಿರಿಯರ ಭಟ್ಟಂಗಿತನಮಾಡಿದರೆ ಅವರು ಬಿಟ್ಟುಕೊಡುವ ಸ್ಥಾನ ನಿಮಗೆ ಸಿಗುತ್ತದೆ, ಕಿರಿಯರನ್ನು ತುಳಿದುಹಾಕುವುದರಿಂದ ಅವರು ನಿಮ್ಮನ್ನು ಮೀರಿ ಬೆಳೆದುಬಿಡುವ ಸಾಧ್ಯತೆಯನ್ನು ಹೊಸಕಿಹಾಕಿದಂತಾಗುತ್ತದೆ. ಇದನ್ನು ನಾನು ತಮಾಷೆಯಾಗಿ ‘ಪೊಲೀಸ್ ಫಾರ್ಮುಲಾ’ ಎನ್ನುತ್ತೇನೆ (ಇದೇನೆಂದು ಮುಂದೊಂದು ದಿನ ವಿವರಿಸುತ್ತೇನೆ). ನಾನು ಸದಾ ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಾ ಬಂದವನು. 

ನನಗಿಂತ ಹಿರಿಯರನ್ನು ಎದುರುಹಾಕಿಕೊಂಡು ಕಾದಾಡಿದ್ದೇನೆ, ಅದರಿಂದ ಕಷ್ಟ-ನಷ್ಟ ಅನುಭವಿಸಿದ್ದೇನೆ. ನನಗಿಂತ ಕಿರಿಯರು ತಪ್ಪಿದಾಗ ಸಣ್ಣಪುಟ್ಟ ಜಗಳಮಾಡಿಕೊಂಡು ತಪ್ಪಿದಾಗ ತಿದ್ದುವ ಮೂಲಕ ಅವರನ್ನು ಬೆಳೆಸಬೇಕೆಂದು ಪ್ರಾಮಾಣಿಕವಾಗಿ ಆಶಿಸಿದ್ದೇನೆ. ಇದರಿಂದಾಗಿಯೇ ನನಗಿಂತ ಕಿರಿಯರು ಅಪಾರ್ಥ ಮಾಡಿಕೊಂಡರೆ ನನಗೆ ನೋವಾಗುತ್ತದೆ.

ನಾನು ಇಷ್ಟಪಡುವ ನನಗಿಂತ ಕಿರಿಯರ ಕಿವಿ ಹಿಂಡುವ ಅಧಿಕಾರ ನನಗಿದೆ ಎಂದು ತಿಳಿದುಕೊಂಡಿದ್ದೇನೆ. ಯಾಕೆಂದರೆ ನಾನು ನನ್ನ ಹಿರಿಯರಿಂದ ಕಿವಿ ಹಿಂಡಿಸಿಕೊಂಡೇ ಬೆಳೆದವನು. ಆ ಕ್ಷಣದಲ್ಲಿ ಕಿವಿ ನೋವಾದರೂ ಅದು ನಂತರದ ದಿನಗಳಲ್ಲಿ ನಾನು ದಾರಿ ತಪ್ಪುವುದನ್ನು, ತಪ್ಪು ಮಾಡಿ ನೋವು ತಿನ್ನುವುದನ್ನು ತಪ್ಪಿಸಿದೆ.

ಐ.ಎ.ಎಸ್. ಅಧಿಕಾರಿ ಡಿ.ಕೆ. ರವಿ ಸಾವಿನ ಕುರಿತು ಬರೆದದ್ದು..

ಕಳೆದ ಕೆಲವು ದಿನಗಳಿಂದ ಒಂದು ಪ್ರಶ್ನೆ ನನ್ನನ್ನು ಕಾಡುತ್ತಿದೆ. ಐಎ ಎಸ್ ಅಧಿಕಾರಿ ಡಿ.ಕೆ.ರವಿ ಅವರ ಅಸಹಜ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಬಿಜೆಪಿ ಮತ್ತು ಜೆಡಿ (ಎಸ್ ) ಪಕ್ಷಗಳು ಒತ್ತಾಯಿಸುತ್ತಿವೆ. ಕನ್ನಡದ ಬಹುತೇಕ ಸುದ್ದಿ ಚಾನೆಲ್ ಗಳು ಈ ಬೇಡಿಕೆಯನ್ನು ಬೆಂಬಲಿಸಿ ನಿರಂತರವಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ರಾಜ್ಯಸರ್ಕಾರದ ಅಧೀನದಲ್ಲಿರುವ ಸಿಐಡಿಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲವಾದ ಕಾರಣ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂಬುದು ಈ ಬೇಡಿಕೆಯ ಒಟ್ಟು ಸಾರ.ಈ ವಾದವನ್ನು ಒಪ್ಪಿಕೊಳ್ಳೋಣ. ಆದರೆ ಮುಂದೊಂದು ದಿನ ಕೇಂದ್ರ ಸರ್ಕಾರಕ್ಕೆ ಸೇರಿದ ಅಧಿಕಾರಿಯೊಬ್ಬರ ಆತ್ಮಹತ್ಯೆಯೋ, ಕೊಲೆಯೋ ನಡೆದರೆ ತನಿಖೆಯನ್ನು ಯಾರಿಗೆ ಒಪ್ಪಿಸುತ್ತೀರಿ? ಸಿಬಿಐಗೆ? ಅದು ಕೇಂದ್ರ ಸರ್ಕಾರದ ಮರ್ಜಿಯಲ್ಲಿದೆಯಲ್ಲಾ? ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಿಐಡಿಯಿಂದ ತನಿಖೆ ಬೇಡ ಎನ್ನುವುದಾದರೆ, ಕೇಂದ್ರ ಸರ್ಕಾರದ ‘ಪಂಜರದ ಗಿಳಿ’ ಯಾಗಿರುವ ಸಿಬಿಐ ತನಿಖೆ ನಡೆಸಲಿ ಎಂದು ಹೇಗೆ ಹೇಳಲು ಸಾಧ್ಯ? ಹಾಗಿದ್ದರೆ ಅಂತಹ ಪ್ರಕರಣಗಳ ತನಿಖೆ ಯಾರಿಂದ ನಡೆಸುವುದು? ಎಫ್ ಬಿಐ? ಇಂಟರ್ ಪೋಲ್? ವಿಶ್ವ ಸಂಸ್ಥೆ?
ಈ ಪ್ರಶ್ನೆಯನ್ನು ನನಗೆ ಪರಿಚಯ ಇರುವ ಹೋರಾಟಗಾರರನ್ನು ಮತ್ತು ಕೆಲವು ಪತ್ರಕರ್ತರನ್ನು ಕೇಳಿದೆ. ಅವರಿಂದ ಉತ್ತರ ಸಿಗಲಿಲ್ಲ.

(ಮಾರ್ಚ್ 19, 2015)
-------------------------------------------------------------------------------------------------------------------------------
‘ಕಾಂಗ್ರೆಸ್ ಏಜಂಟ’ ನೊಬ್ಬನ ಮನದ ಮಾತು (ಮಾರ್ಚ್ 20, 2015)
ಸಿಐಡಿ ಬೇಡ, ಸಿಬಿಐ ತನಿಖೆ ಮಾಡಲಿ ಎಂದು ಹೇಳುತ್ತಿರುವ ದಿವಂಗತ ಡಿ.ಕೆ.ರವಿ ಅವರ ಅಮಾಯಕ ತಂದೆ-ತಾಯಿಗಳ ಒತ್ತಾಯ ಅರ್ಥಮಾಡಿಕೊಳ್ಳುವಂತಹದ್ದು. ‘ಅದಕ್ಕಿಂತಲೂ ದೊಡ್ಡದು ಏನಾದರೂ ಇದ್ದರೆ ಅದರ ಮೂಲಕವೂ ತನಿಖೆ ನಡೆಯಲಿ’ ಎಂದು ಆ ತಾಯಿ ವಿಧಾನಸೌಧದ ಮುಂದೆ ರೋದಿಸುತ್ತಾ ಹೇಳುತ್ತಿದ್ದರು. ತನ್ನ ಮಗನ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕೆಂಬುದಷ್ಟೇ ಆ ತಾಯಿಯ ಆಸೆ. ಯಾವುದು ಸಿಐಡಿ? ಯಾವುದು ಸಿಬಿಐ? ಎನ್ನುವುದು ಅವರಿಗೆ ಗೊತ್ತಿಲ್ಲ. ಬಿಜೆಪಿ ಮತ್ತು ಜೆಡಿ (ಎಸ್) ಅವರಿಗೆ ಎಲ್ಲವೂ ಗೊತ್ತಿದ್ದೂ ಸಿಬಿಐ ತನಿಖೆ ಕೇಳುತ್ತಿದ್ದಾರೆ. ಹಾಗೆ ಕೇಳಲು ಅವರಿಗೆ ಕಾರಣಗಳಿವೆ, ಅವೆಲ್ಲವೂ ಖಂಡಿತ ಡಿ.ಕೆ.ರವಿ ಮೇಲಿನ ಅಭಿಮಾನ ಇಲ್ಲವೆ ಸತ್ಯ ತಿಳಿಯಬೇಕೆಂಬ ಪ್ರಾಮಾಣಿಕ ಕಳಕಳಿಯಿಂದ ಕೂಡಿದ್ದಲ್ಲ.
‘ಸಿಐಡಿ ರಾಜ್ಯ ಸರ್ಕಾರದ ಅಧೀನದಲ್ಲಿದೆ. ಈ ಕಾರಣಕ್ಕಾಗಿ ತನಿಖೆಯನ್ನು ಸಿಬಿಐಗೆ ಕೊಡಿ’ ಎಂದು ಒತ್ತಾಯಿಸುತ್ತಿರುವವರಲ್ಲಿ ಹೆಚ್ಚಿನವರು ‘ಸಿಬಿಐ ಸರ್ವಸ್ವತಂತ್ರ’ ಎಂದು ತಿಳಿದುಕೊಂಡ ಅಮಾಯಕರು. ಆದರೆ ವಾಸ್ತವ ಹಾಗಿಲ್ಲ. ಸಿಬಿಐ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಖಾತೆಯ ನಿಯಂತ್ರಣದಲ್ಲಿದೆ. ಈ ಖಾತೆ ಪ್ರಧಾನಮಂತ್ರಿಯವರ ಕೈಯಲ್ಲಿದೆ. ಇದರ ಪರಿಣಾಮವೇ ಬಿಜೆಪಿ ಅಧಿಕಾರಕ್ಕೆ ಬಂದು ಎಂಟು ತಿಂಗಳು ಕಳೆಯುವುದರೊಳಗೆ, ಸಿಬಿಐ ನ್ಯಾಯಾಲಯ ಬಿಜೆಪಿ ಅಧ್ಯಕ್ಷ ಅಮಿತ್ ಶಹಾ ಅವರನ್ನು ದೋಷಮುಕ್ತಗೊಳಿಸಿದ್ದು. ಗುಜರಾತ್ ನ ಫೇಕ್ ಎನ್ ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಮಿತ್ ಶಹಾ ಅವರನ್ನು ವಿಚಾರಣೆ ಪೂರ್ಣಗೊಳ್ಳುವ ಮೊದಲೇ ಸಿಬಿಐ ನ್ಯಾಯಾಲಯ ದೋಷಮುಕ್ತಗೊಳಿಸಿತ್ತು. (ವಿವರಗಳಿಗಾಗಿ ಫೆಬ್ರವರಿ 16, 2015ರ ಔಟ್ ಲುಕ್ ವಾರಪತ್ರಿಕೆ ಓದಿ). ಇದು ಬಿಜೆಪಿ ಸರ್ಕಾರದ ಕಾಲದಲ್ಲಿ ಸಿಬಿಐ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದಕ್ಕೆ ಸೂಚನೆ.
‘ಆಳುವ ಪಕ್ಷದಿಂದ ಸಿಬಿಐ ದುರ್ಬಳಕೆಯಾಗುತ್ತಿದೆ’ ಎಂಬ ವಿರೋಧಪಕ್ಷಗಳ ಆರೋಪ ಹಳೆಯದು. ಇದೇ ವಿರೋಧ ಪಕ್ಷಗಳು ಅಧಿಕಾರಕ್ಕೆ ಬಂದಾಗ ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯಲು ಸಿಬಿಐನ ದುರ್ಬಳಕೆ ಮಾಡಲು ಹಿಂಜರಿಯುವುದಿಲ್ಲ. ಇಂದಿರಾಗಾಂಧಿಯವರಿಂದ ಹಿಡಿದು ಅಟಲಬಿಹಾರಿ ವಾಜಪೇಯಿ ವರೆಗೆ ಎಲ್ಲರೂ ಇದನ್ನು ಮಾಡಿದ್ದಾರೆ. ಹೆಚ್ಚು ಕಾಲ ದೇಶವಾಳಿದವರು ಹೆಚ್ಚು ದುರುಪಯೋಗ ಮಾಡಿದ್ದಾರೆ, ಕಡಿಮೆ ಕಾಲ ಆಳಿದವರಿಂದ ಕಡಿಮೆ ದುರುಪಯೋಗವಾಗಿದೆ. ವ್ಯತ್ಯಾಸ ಪ್ರಮಾಣದಲ್ಲಿ ಮಾತ್ರ ನೀತಿಯಲ್ಲಿ ಅಲ್ಲ. ಈ ಸಿಬಿಐ ಅಸ್ತ್ರ ದುರ್ಬಳಕೆಯ ದೌರ್ಬಲ್ಯಕ್ಕೆ ಈಡಾಗದೆ ಇದ್ದಿದ್ದರೆ ಐದು ವರ್ಷಗಳ ಕಾಲ ಕನ್ನಡಿಗರೊಬ್ಬರು ಪ್ರಧಾನಿಯಾಗಿರುತ್ತಿದ್ದರೋ ಏನೋ? ಮಾನ್ಯ ದೇವೇಗೌಡರು ಹಳೆಯ ಕೊಲೆ ಆರೋಪವನ್ನು ಬಳಸಿಕೊಂಡು ಆಗಿನ ಕಾಂಗ್ರೆಸ್ ಅಧ್ಯಕ್ಷ ಸೀತರಾಂ ಕೇಸರಿ ವಿರುದ್ಧ ಸಿಬಿಐ ಅನ್ನು ಅವರ ವಿರುದ್ಧ ಛೂಬಿಟ್ಟದ್ದೇ ಅವರ ಕುರ್ಚಿಗೆ ಮುಳುವಾಗಿ ಹೋಯಿತು.
ಕಾಂಗ್ರೆಸ್ ಸಿಬಿಐ ದುರ್ಬಳಕೆ ಮಾಡಿಕೊಂಡಾಗ ಬೊಬ್ಬಿಟ್ಟವರು ಬಿಜೆಪಿ ನಾಯಕರು. ಆದರೆ ಅವರ ಕೈಗೆ ಅಧಿಕಾರ ಸಿಕ್ಕಾಗ ತಾವು ತಪ್ಪು ಅಂದದ್ದನ್ನೇ ಮಾಡಿದರು. ಎನ್ ಡಿ ಎ ಲಂಚಾವತಾರವನ್ನು ಬಯಲುಗೊಳಿಸಿದ ತೆಹೆಲ್ಕಾ ಡಾಟ್ ಕಾಮ್ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿದ್ದು ಎನ್ ಡಿಎ. ತೆಹೆಲ್ಕಾ ವರದಿಗಾರನನ್ನು ಜೈಲಿಗೆ ತಳ್ಳಲು ಆತನ ವಿರುದ್ಧ ಚಿರತೆ ಹತ್ಯೆ ಆರೋಪವನ್ನು ಹೊರಿಸುವ ಮಟ್ಟಕ್ಕೆ ಇಳಿದಿತ್ತು ಸಿಬಿಐ.
ಇಷ್ಟು ಮಾತ್ರ ಅಲ್ಲ, ಸಿಬಿಐನ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಹರಣಗೊಳಿಸುವ ಪ್ರಯತ್ನವನ್ನು ಕೂಡಾ ನಡೆಸಿದ್ದು ಎನ್ ಡಿ ಎ ಸರ್ಕಾರ. ವಿನೀತ್ ನಾರಾಯಣ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ‘ಕೇಂದ್ರ ಜಾಗೃತ ಆಯೋಗ (ಸಿವಿಸಿ)ಕ್ಕೆ ಶಾಸನಬದ್ಧ ಸ್ಥಾನಮಾನ ನೀಡಿ ಸಿಬಿಐ ಅನ್ನು ಅದರ ಮೇಲ್ವಿಚಾರಣೆಗೆ ಒಪ್ಪಿಸಬೇಕೆಂದು ಹೇಳಿತ್ತು. ಇದರ ಜತೆಗೆ ‘ಜಂಟಿ ಕಾರ್ಯದರ್ಶಿಗಳಿಗಿಂತ ಮೇಲಿನ ಅಧಿಕಾರಿಗಳ ವಿರುದ್ಧ ಸಿಬಿಐ ಕ್ರಮಕೈಗೊಳ್ಳುವ ಮುನ್ನ ಸರ್ಕಾರದ ಪೂರ್ವಾನುಮತಿ ಅಗತ್ಯ’ ಎಂಬ ‘ಏಕ ನಿರ್ದೇಶನ’ವನ್ನು ಸುಪ್ರೀಕೋರ್ಟ್ ರದ್ದು ಪಡಿಸಿತ್ತು. ಆದರೆ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ನೂತನ ‘ಕೇಂದ್ರ ಜಾಗೃತ ಆಯೋಗ ಕಾಯಿದೆಯ ಮೂಲಕ ಹಿಂದೆ ಸುಪ್ರೀಂಕೋರ್ಟ್ ರದ್ದುಪಡಿಸಿದ್ದ ‘ಏಕನಿರ್ದೇಶನಕ್ಕೆ ಮತ್ತೆ ಜೀವ ತುಂಬಿ ಸಿಬಿಐ ಅನ್ನು ದುರ್ಬಲಗೊಳಿಸಿತ್ತು.
ಸಿಬಿಐ ಅನ್ನು ರಾಜಕೀಯ ನಿಯಂತ್ರಣದಿಂದ ಬಿಡುಗಡೆಗೊಳಿಸುವ ಪ್ರಯತ್ನವನ್ನು 1994ರಲ್ಲಿಯೇ ಸುಪ್ರೀಂಕೋರ್ಟ್ ಜೈನ್ ಹವಾಲ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಪ್ರಾರಂಭಿಸಿತ್ತು. ‘ ಕೇಂದ್ರ ಜಾಗೃತ ಆಯೋಗಕ್ಕೆ ಶಾಸನ ಬದ್ಧ ಸ್ಥಾನಮಾನ ನೀಡಿ ಸಿಬಿಐ ಉಸ್ತುವಾರಿಯನ್ನು ಅದಕ್ಕೆ ಒಪ್ಪಿಸಬೇಕು’ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಸದ್ಯಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಬರುವ ಪ್ರಕರಣಗಳ ತನಿಖೆಯ ಮೇಲಷ್ಟೇ ಸಿವಿಸಿ ಯ ನಿಯಂತ್ರಣ ಇದೆ. ವಿಶೇಷ ಅಪರಾಧಗಳ ಬಗ್ಗೆ ಸಿಬಿಐ ನಡೆಸುವ ತನಿಖೆ ಮೇಲೆ ಸಿವಿಸಿಗೆ ನಿಯಂತ್ರಣ ಇಲ್ಲ.
ಇದೇ ಕಾರಣಕ್ಕೆ ಸಿಬಿಐ ಅನ್ನು ನೂತನ ‘ಲೋಕಪಾಲ’ರ ಸುಪರ್ದಿಗೆ ಒಪ್ಪಿಸಿ ಅದಕ್ಕೆ ಸ್ವಯೀಚ್ಚೆಯಿಂದ ತನಿಖೆ ನಡೆಸುವ ಅಧಿಕಾರ ನೀಡಬೇಕೆಂದು ಅಣ್ಣಾಹಜಾರೆ ತಂಡ ಒತ್ತಾಯಿಸಿತ್ತು. ಸಂಸತ್ ನಲ್ಲಿ ಅಣ್ಣಾತಂಡವನ್ನು ಬೆಂಬಲಿಸಿದ್ದ ಬಿಜೆಪಿ, ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಆದರೆ ಅಧಿಕಾರಕ್ಕೆ ಬಂದು ಹತ್ತು ತಿಂಗಳಾಗುತ್ತಾ ಬಂತು. ಸಿಬಿಐ ಅನ್ನು ರಾಜಕೀಯ ನಿಯಂತ್ರಣದಿಂದ ಮುಕ್ತಗೊಳಿಸುವ ಬಗ್ಗೆ ಬಿಜೆಪಿ ಸೊಲ್ಲೆತ್ತಿಲ್ಲ. ತದ್ವಿರುದ್ಧವಾಗಿ ಅದರ ಮೇಲೆ ಒತ್ತಡ ಹೇರಿ ತನ್ನ ಪಕ್ಷದ ಅಧ್ಯಕ್ಷರನ್ನು ದೋಷಮುಕ್ತಗೊಳಿಸಿದೆ. ವಿಪರ್ಯಾಸವೆಂದರೆ, ಸಿಬಿಐ ಅನ್ನು ರಾಜಕೀಯ ನಿಯಂತ್ರಣದಿಂದ ಮುಕ್ತಗೊಳಿಸಬೇಕೆಂದು ಚಳುವಳಿಯನ್ನು ಮಾಡಿದ್ದ ಅಣ್ಣಾ ಚಳುವಳಿಯ ಉತ್ಪನ್ನವಾದ ಆಪ್ ಪಕ್ಷ ಕೂಡಾ ಈಗ ಸಿಬಿಐ ಮೇಲೆ ತನ್ನ ನಂಬಿಕೆಯನ್ನು ಸಾರಿರುವುದು.
ಡಿ.ಕೆ.ರವಿ ಅವರ ಸಾವಿನ ತನಿಖೆಯನ್ನು ಖಂಡಿತ ಸಿಬಿಐಗೆ ಒಪ್ಪಿಸಬಹುದು. ಆದರೆ ಅದಕ್ಕಿಂತ ಮೊದಲು ಸಿಬಿಐ ಚಾರಿತ್ರ್ಯವನ್ನು ತಿಳಿದುಕೊಳ್ಳುವುದು ಬೇಡವೇ? ಇದನ್ನು ಮಾಡದೆ ಕೇವಲ ಸಿಐಡಿಯ ವಿಶ್ವಾಸರ್ಹತೆಯನ್ನು ಪ್ರಶ್ನಿಸುವುದು ಪಕ್ಷಪಾತವಾಗುವುದಿಲ್ಲವೇ? ನಮ್ಮ ಪೊಲೀಸರು ಕೇವಲ ಪಿಕ್ ಪಾಕೆಟಿಗರನ್ನು ಹಿಡಿಯಲು ಮಾತ್ರ ಲಾಯಕ್, ಇಂತಹ ದೊಡ್ಡ ಪ್ರಕರಣಗಳ ಅವರಿಂದಾಗದು ಎಂದು ಹೀಗಳೆಯುವುದರಿಂದ ಅವರ ನೈತಿಕ ಸ್ಥೈರ್ಯ ಕುಸಿಯುವುದಿಲ್ಲವೇ? ಇದೇ ನಮ್ಮ ರಾಜ್ಯದ ದಕ್ಷ ಮತ್ತು ಪ್ರಾಮಾಣಿಕ ಪೊಲೀಸರಲ್ಲವೇ, ಮುಖ್ಯಮಂತ್ರಿ ಮತ್ತು ಸಚಿವರನ್ನು ಜೈಲಿಗೆ ತಳ್ಳಿದ್ದು? ಇದನ್ನು ಮರೆತು ನಮ್ಮ ಮಾನವನ್ನು ರಾಷ್ಟ್ರಮಟ್ಟದಲ್ಲಿ ನಾವೇ ಹರಾಜು ಹಾಕುತ್ತಿರುವುದು ಸರಿಯೇ? ವಿರೋಧಪಕ್ಷಗಳೇ ಸೂಚಿಸುವ ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ ವಿಶೇಷ ತನಿಖಾ ತಂಡವನ್ನು ರಚಿಸಲು ಸಿದ್ಧ ಎಂಬ ರಾಜ್ಯ ಸರ್ಕಾರದ ನಿಲುವನ್ನು ವಿರೋಧಪಕ್ಷಗಳು ಯಾಕೆ ಒಪ್ಪಿಕೊಳ್ಳಬಾರದು? ನನಗಂತೂ ವಿರೋಧಪಕ್ಷಗಳು ಮತ್ತು ಅವರ ಬೆಂಬಲಿಗರ ಹಟದಲ್ಲಿ ರಾಜಕೀಯ ಕಾಣಿಸುತ್ತಿದೆ. ಇದಕ್ಕಾಗಿ ನನ್ನನ್ನು ‘ಕಾಂಗ್ರೆಸ್ ಏಜಂಟ್ ‘ ಎಂದು ಹಳಿಯಿರಿ,ಬೇಸರ ಇಲ್ಲ. ನಾನಂತೂ ಕಾಲದ ಕರೆಗೆ ಓಗೊಡುವವನು.

-----------------------------------------------------------------------------------------------------------------------------
‘ಜನಾಭಿಪ್ರಾಯ’, ‘ಜನಮತ’ ದ ಹುತ್ತದ ಸುತ್ತ...... (ಮಾರ್ಚ್ 20, 2015)
ಸಿಬಿಐ ತನಿಖೆಗಾಗಿ ಒತ್ತಾಯಿಸುತ್ತಿರುವವರು ತಮ್ಮನ್ನು ಸಮರ್ಥಿಸಿಕೊಳ್ಳಲು ಇದು ‘ಜನಾಭಿಪ್ರಾಯ’, ‘ಜನಮತ’ ಎಂದೆಲ್ಲ ಹೇಳುತ್ತಿದ್ದಾರೆ. (ನನ್ನ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಅನೇಕ ಸ್ನೇಹಿತರು ಕೂಡಾ ಇದನ್ನು ಹೇಳಿದ್ದಾರೆ) ನನ್ನ ಪ್ರಕಾರ ನಿಜವಾದ ಜನಮತ ವ್ಯಕ್ತವಾಗುವುದು ಚುನಾವಣೆಯಲ್ಲಿ ಮಾತ್ರ. ಇದನ್ನು ಹೊರತುಪಡಿಸಿ ಜನಾಭಿಪ್ರಾಯ ಸಂಗ್ರಹಮಾಡಬೇಕಾದರೆ ಅಧಿಕೃತವಾಗಿ ಜನಮತಗಣನೆ ಚುನಾವಣೆಯ ಮಾದರಿಯಲ್ಲಿಯೇ ನಡೆಯಬೇಕು. ಇಲ್ಲದೆ ಇದ್ದರೆ ಚುನಾವಣಾ ಸುಧಾರಣೆಯ ಶಿಫಾರಸಿನಂತೆ ಚುನಾಯಿತ ಪ್ರತಿನಿಧಿಯನ್ನು ವಾಪಸು ಕರೆಸುವ ಜನಮತದ ಅಧಿಕಾರವನ್ನು ಮತದಾರರಿಗೆ ನೀಡಬೇಕು. ಇದನ್ನು ಹೊರತುಪಡಿಸಿ ಬಿಂಬಿಸುವ ಜನಮತ ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನ ಅಷ್ಟೇ.

ನಮ್ಮಲ್ಲಿ ಶೇಕಡಾ 74ರಷ್ಟು ಜನರು ಸಾಕ್ಷರರು ಎಂದು ಅಧಿಕೃತ ಸಮೀಕ್ಷೆ ಹೇಳುತ್ತಿದೆ. ಅಂದರೆ ಇವರಲ್ಲಿ ಹಸ್ತಾಕ್ಷರವಷ್ಟೇ ಹಾಕಬಲ್ಲವರು, ಅರೆಶಿಕ್ಷಿತರು, ಓದಲು ಬರೆಯಲು ಬಾರದವರ ಸಂಖ್ಯೆಯೇ ಹೆಚ್ಚಿದೆ. ನಿಜವಾದ ಸಾಕ್ಷರರು, ಅಂದರೆ, ಕನಿಷ್ಠ ಪತ್ರಿಕೆ ಓದಬಲ್ಲವರು,ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಚರ್ಚಿಸುವಷ್ಟು ಜ್ಞಾನಹೊಂದಿದವರ ಸಂಖ್ಯೆ ಅಧಿಕೃತ ಸಾಕ್ಷರರ ಅರ್ಧದಷ್ಟಾದರೂ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಇಂತಹ ವಿದ್ಯೆ ಇಲ್ಲದ ಬುದ್ದಿವಂತ ಜನರಲ್ಲಿ ಅಪಾರವಾದ ಸಾಮಾನ್ಯ ಜ್ಞಾನ ಇರುತ್ತದೆ. ಇಂತಹವರಿಗೆ ತಿಳಿಸಿ ಹೇಳಿದರೆ ಬಹುಬೇಗ ಅರ್ಥಮಾಡಿಕೊಳ್ಳುತ್ತಾರೆ, ಅಷ್ಟೇ ಸಲೀಸಾಗಿ ಇವರನ್ನು ತಪ್ಪುದಾರಿಗೆಳೆಯುವವರ ಹಿಂದೆ ಕೂಡಾ ಹೋಗುತ್ತಾರೆ.
ಜಾತಿ ವ್ಯವಸ್ಥೆಯ ವಾಸ್ತವದಲ್ಲಿ ಇಂತಹವರಲ್ಲಿ ದಲಿತರು, ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತರ ಸಂಖ್ಯೆಯೇ ಹೆಚ್ಚು. ಹಿಂದಿನ ಪ್ರಧಾನಿ ವಿ.ಪಿ.ಸಿಂಗ್ ಮಂಡಲ್ ವರದಿಯನ್ನು ಅನುಷ್ಠಾನಗೊಳಿಸಿದಾಗ ದೇಶವಿಡೀ ಹೊತ್ತಿ ಉರಿಯುತ್ತಿದೆ ಎಂಬ ಭಾವನೆಯನ್ನು ಹುಟ್ಟುಹಾಕಲಾಗಿತ್ತು. ಆ ಸಮಯದಲ್ಲಿ ಹೆಚ್ಚಿನ ಹಿಂದುಳಿದ ಜಾತಿಗಳ ಯುವಕ-ಯುವತಿಯರೇ, ‘ಇದು ದಲಿತರ ಮೀಸಲಾತಿ ನೀತಿ’ ಎಂದು ತಪ್ಪಾಗಿ ತಿಳಿದುಕೊಂಡು ಮಂಡಲ ವಿರೋಧಿ ಚಳುವಳಿಯಲ್ಲಿ ಭಾಗವಹಿಸಿದ್ದುಂಟು. ಆದರೆ ಸತ್ಯ ಗೊತ್ತಾದಾಗ ದಲಿತ,ಹಿಂದುಳಿದ ಮತ್ತು ಅಲ್ಪಸಂಖ್ಯಾತರೇ ಒಂದು ಗುಂಪಾಗಿ ತಮ್ಮನ್ನು ರಕ್ಷಿಸಿಕೊಳ್ಳುವ ಕಾರ್ಯದಲ್ಲಿ ಮುಂದಾದರು. ಇಂದು ಯಾರಾದರೂ ಮೀಸಲಾತಿ ವಿರುದ್ಧ ದನಿ ಎತ್ತುವ ಧೈರ್ಯ ಮಾಡಲು ಸಾಧ್ಯವೇ?
ಸಾಮಾಜಿಕ ಜಾಲತಾಣಗಳು, ಮೊಬೈಲ್ ಸಂದೇಶಗಳು ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಈಗಿನ ಕಾಲದಲ್ಲಿ ‘ಜನಾಭಿಪ್ರಾಯ’, ‘ಜನಮತ’ವನ್ನು ಸೃಷ್ಟಿಸುವುದು ಇನ್ನೂ ಸುಲಭ. ಮಂಡಲವಿರೋಧಿ ಚಳುವಳಿಯಲ್ಲಿ ತೇಲಿಹೋದ ಹಿಂದುಳಿದ ಜಾತಿಗಳಂತೆ ಈಗಲೂ ನಮ್ಮ ಯುವಕರು ಯಾರೋ ಸೃಷ್ಟಿಸುವ ‘ಜನಾಭಿಪ್ರಾಯ’, ‘ಜನಮತ’ದ ಅಲೆಯಲ್ಲಿ ತೇಲಿಹೋಗುವ ಅಪಾಯ ಇದೆ. ಸಿಐಡಿ,ಸಿಬಿಐ ಎಂದರೇನು? ಇವುಗಳ ನಡುವಿನ ವ್ಯತ್ಯಾಸಗಳೇನು? ಇದು ಯಾರ ಕೈಯಲ್ಲಿರುತ್ತದೆ? ಇದರ ದುರ್ಬಳಕೆ ಹೇಗೆ ನಡೆಸಲು ಸಾಧ್ಯ? ಇದನ್ನೆಲ್ಲ ಅರ್ಥಮಾಡಿಕೊಂಡು ಯಾರಾದರೂ ಸಿಬಿಐ ಉತ್ತಮ ಎಂದು ಹೇಳಿದರೆ ಒಪ್ಪಿಕೊಳ್ಳಬಹುದು. ಕಳೆದ ನಾಲ್ಕೈದು ದಿನಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್ ಚಾನೆಲ್ ಗಳಲ್ಲಿ ಸಿಐಡಿ-ಸಿಬಿಐ ಬಗ್ಗೆ ವಸ್ತು ನಿಷ್ಠ ಚರ್ಚೆ ನಡೆದಿರುವುದನ್ನು ನಾನಂತೂ ನೋಡಿಲ್ಲ.
ಬದಲಾಗಿರುವ ಈ ಕಾಲದಲ್ಲಿಯೂ ಯಾವುದಾದರೂ ಪತ್ರಿಕೆ ಇಲ್ಲವೆ ಟಿವಿ ಚಾನೆಲ್ ಗಳು ಮೀಸಲಾತಿ ಪರ-ವಿರೋಧ ಜನಮತ ಸಂಗ್ರಹಿಸಿದರೆ ವಿರೋಧಿಸುವ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಬಹುದು. ಆದರೆ ಯಾವುದಾದರೂ ಸರ್ಕಾರ ಇಲ್ಲವೇ ರಾಜಕೀಯ ಪಕ್ಷ ಮೀಸಲಾತಿ ವಿರುದ್ಧ ನಿಲ್ಲುವ ಧೈರ್ಯ ತೋರಿಸಲು ಸಾಧ್ಯವೇ? ಇದೇ ರೀತಿ ರಾಜ್ಯ ಬಜೆಟ್ ನ ಯೋಜನಾ ವೆಚ್ಚದಲ್ಲಿ ಶೇಕಡಾ 24ರಷ್ಟನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟಿರುವ ಇಲ್ಲವೇ ಜಾತಿ ಗಣತಿ ನಡೆಸುವ ಸರ್ಕಾರದ ನಿರ್ಧಾರದ ಬಗ್ಗೆ ಯಾವುದಾದರೂ ಪತ್ರಿಕೆ ಇಲ್ಲವೆ ಟಿವಿ ಚಾನೆಲ್ ಗಳಲ್ಲಿ ಜನಮತ ಸಂಗ್ರಹಿಸಿದರೆ ವಿರೋಧವೇ ಹೆಚ್ಚು ವ್ಯಕ್ತವಾಬಹುದು. ಯಾಕೆಂದರೆ ಸರ್ಕಾರದ ಈ ನಿರ್ಧಾರದ ಫಲಾನುಭವಿಗಳು ಪತ್ರಿಕೆಗಳಿಗೆ ಓದುಗರ ಓಲೆ ಬರೆಯುವಷ್ಟು, ಇಲ್ಲವೇ ಮೊಬೈಲ್ ಮೆಸೆಜ್ ಮೂಲಕ ತಮ್ಮ ಅಭಿಪ್ರಾಯವನ್ನು ಚಾನೆಲ್ ಗಳಿಗೆ ತಿಳಿಸುವಷ್ಟು ಪರಿಣತರಲ್ಲ. ಹಾಗೆಂದ ಮಾತ್ರಕ್ಕೆ ಆ ಜನರ ಸಂಖ್ಯೆಗೆ ಬೆಲೆಯೇ ಇಲ್ಲವೇ? ಕೂಗು ಹಾಕಿದವರಷ್ಟೇ ಜನಗಳೇ?

-------------------------------------------------------------------------------------------------------------------------------
ಸುದ್ದಿ ಸೋರಿಕೆ ಮತ್ತು ಪತ್ರಕರ್ತನೊಬ್ಬನ ಹಳವಂಡ (ಮಾರ್ಚ್ 22, 2015)
ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಪತ್ರಕರ್ತರನ್ನು ಅಟ್ಟಿಸಿಕೊಂಡು ಹೋಗಿ ಸುದ್ದಿಯ ಸೋರಿಕೆ ಮಾಡುತ್ತಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ನನ್ನ ಪತ್ರಕರ್ತ ಮಿತ್ರ ಸುದೀಪ್ತೋ ಮೊಂಡಲ್ ವರದಿ ಮಾಡಿದ್ದಾರೆ. ಈ ವರದಿಯನ್ನು ನಾಲ್ಕು ಗೋಡೆಗಳ ಮಧ್ಯೆ ಇರುವ ಡೆಸ್ಕ್ ನಲ್ಲಿ ಕೂತಿರುವ ಬಾವಿಯೊಳಗಿರುವ ಕಪ್ಪೆಯಂತಹ ಪತ್ರಕರ್ತರು ಬರೆದಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಆದರೆ ಇದನ್ನು ಬರೆದದ್ದು ಜರ್ನಲಿಸ್ಟ್ ಗಳು ಆ್ಯಕ್ಟಿವಿಸ್ಟ್ ಕೂಡಾ ಆಗಬೇಕೆಂದು ಕಿರಿಯ ಪತ್ರಕರ್ತರಿಗೆ ಬೋದನೆ ಮಾಡುವ ಸುದೀಪ್ತೊ.
ವಯಸ್ಸಿನಲ್ಲಿ ಅವರಿಗಿಂತ ಹಿರಿಯನೆಂಬುದನ್ನು ಬಿಟ್ಟರೆ ಅವರಷ್ಟು ಅನುಭವ ನನಗಿಲ್ಲವೇನೋ. ಆದರೆ ನನ್ನ ಸೀಮಿತ ಜ್ಞಾನ ಮತ್ತು ಅನುಭವದ ಆಧಾರದಲ್ಲಿ ಹೇಳುವುದಾದರೆ ಸಮಾಜದಲ್ಲಿ ಅಲ್ಲೋಲಕಲ್ಲೋಲ ಮಾಡಿದ ಮಾಧ್ಯಮ ರಂಗದ ಮಹಾ ವರದಿಗಳೆಲ್ಲವೂ ಸೋರಿಕೆಯಿಂದ ಪಡೆದುಕೊಂಡ ಮಾಹಿತಿಯನ್ನು ಆಧರಿಸಿದ್ದು. ಸುದ್ದಿ ಎಲ್ಲಿಯಾದರೂ ಸೋರದಿದ್ದರೆ ವರದಿಗಾರ ಉಪವಾಸ ಬಿದ್ದು ಸಾಯಬೇಕು ಅಷ್ಟೆ. ಸಮಸ್ಯೆ ಸೋರಿಕೆಯದ್ದಲ್ಲ, ಸೋರಿಕೆಯಲ್ಲಿನ ಯಾವ ಸುದ್ದಿ ವಿಶ್ವಾಸಾರ್ಹವಾದುದು ಎಂಬ ತೀರ್ಮಾನದ್ದು. ಇದು ನೀವು ಸೋರಿಕೆಗಾಗಿ ಎಂತಹ ಮೂಲಗಳನ್ನು ಇಟ್ಟುಕೊಂಡಿದ್ದೀರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಮೂಲಗಳು ನೀವು ಎಂತಹವರು ಎನ್ನುವುದನ್ನು ಅವಲಂಬಿಸಿರುತ್ತದೆ.
ಇಂದು ಜಗತ್ತಿನಾದ್ಯಂತ ಸರ್ಕಾರಿ ದಾಖಲೆಗಳನ್ನು ಸೋರಿಕೆ ಮಾಡಲಿಕ್ಕಾಗಿಯೇ ವಿಷಲ್ ಬ್ಲೋವರ್ ಸಂಸ್ಥೆಗಳು ಹುಟ್ಟಿಕೊಂಡಿವೆ. ವಿಕಿಲೀಕ್ಸ್ ಗೊತ್ತಲ್ಲಾ, ಅದೇ ರೀತಿ ‘ಪ್ರೊ ಪಬ್ಲಿಕಾ’, ‘ಸನ್ ಲೈಟ್ ಫೌಂಡೇಷನ್ ‘ ಮೊದಲಾದ ವಿಷಲ್ ಬ್ಲೋವರ್ ಸಂಸ್ಥೆಗಳು ಸಕ್ರಿಯವಾಗಿವೆ. ಯಾವ ಸರ್ಕಾರ ಕೂಡಾ ತನಗೆ ಸಂಬಂಧಿಸಿದ ಎಲ್ಲ ಸುದ್ದಿಗಳನ್ನು ಪತ್ರಿಕಾ ಹೇಳಿಕೆ ಮೂಲಕ ನೀಡುವುದಿಲ್ಲ. ‘ '...ಅಧಿಕಾರದಲ್ಲಿರುವವರು ಏನನ್ನು ಸ್ವಯೀಚ್ಚೆಯಿಂದ ತಿಳಿಸುತ್ತಾರೋ ಅದು ಜಾಹೀರಾತು, ಉಳಿದೆಲ್ಲವೂ ಸುದ್ದಿ....’ ಎನ್ನುವ ಸುದ್ದಿ ಬಗೆಗಿನ ಒಂದು ಅರ್ಥಪೂರ್ಣ ವ್ಯಾಖ್ಯಾನ ಇದೆ. ಇದನ್ನು ಪತ್ರಕರ್ತರು ಅರ್ಥಮಾಡಿಕೊಂಡರೆ ಸೋರಿಕೆಯಿಂದ ಸಮಾಜಕ್ಕೆ ಏನೂ ನಷ್ಟವಾಗಲಾರದು.
ಸುದೀಪ್ತೋ ವರದಿಯನ್ನು ನೋಡಿದ ದೆಹಲಿಯ ಜನಪ್ರಿಯ ಚಾನೆಲ್ ವೊಂದರ ಸಂಪಾದಕರು ಬೆಂಗಳೂರಿನ ಮಹಿಳಾ ವರದಿಗಾರರಿಗೆ ಪೋನ್ ಮಾಡಿ, ಪೊಲೀಸರು ಬೆನ್ನತ್ತಿರುವ ಪತ್ರಕರ್ತರ ಜತೆ ಮಾತನಾಡಿ ವರದಿ ಮಾಡಲು ಹೇಳಿದರಂತೆ. ‘...... ಯಾವ ಕಸಬುದಾರ ಪತ್ರಕರ್ತ ಸೋರಿಕೆ ಮಾಡುವ ಮೂಲವ್ಯಕ್ತಿಯ ಹೆಸರನ್ನು ಬಹಿರಂಗಗೊಳಿಸಿ ತನ್ನ ವೃತ್ತಿಯನ್ನು ಕೊಂದುಕೊಳ್ಳಲು ಸಿದ್ದನಿರುತ್ತಾನೆ ?. ಅಂತಹವರಿಗೆ ಬೇರೆ ದುರುದ್ಧೇಶ ಇದ್ದಿದ್ದರೆ ಮಾತ್ರ ಅದು ಸಾಧ್ಯ. ನಾನಂತೂ ಅದನ್ನು ಮಾಡಲಾರೆ...’ ಎಂದು ಆ ಯುವಪತ್ರಕರ್ತೆ ಹಿರಿಯ ಸಹದ್ಯೋಗಿಯ ಬಾಯಿ ಮುಚ್ಚಿಸಿದರಂತೆ. ನಾಲ್ಕೈದು ವರ್ಷಗಳ ಮಾಧ್ಯಮ ಅನುಭವದ ಈ ಯುವಪತ್ರಕರ್ತೆ ಕೊಟ್ಟಿರುವ ಉತ್ತರ ನೋಡಿ ಮಾಧ್ಯಮ ಕ್ಷೇತ್ರದ ಭವಿಷ್ಯದ ಬಗ್ಗೆ ನನಗೆ ಇನ್ನಷ್ಟು ಭರವಸೆಮೂಡಿತು.
---------------------------------------------------------------------------------------------------------------------------------
ಎಲ್ಲ ಲೀಕ್ ಗಳು ಊಹಾಪೋಹಗಳಲ್ಲ... (ಮಾರ್ಚ್ 24, 2015)
ಸುದೀಪ್ತೊ ಮೊಂಡಲ್ ವರದಿಯಿಂದಾಗಿ ಗೊಂದಲಕ್ಕೀಡಾದ ಕೆಲವು ಕಿರಿಯ ಪತ್ರಕರ್ತರು ನನ್ನೊಡನೆ ನಡೆಸಿದ ಮಾತುಕತೆಯೇ ಆ ಬಗ್ಗೆ ನಾನು ಪ್ರತಿಕ್ರಿಯಿಸಲು ಪ್ರೇರಣೆ. ಇಂತಹದೊಂದು ಅಕಾಡೆಮಿಕ್ ಚರ್ಚೆಯಿಂದ ಯುವಪತ್ರಕರ್ತರಿಗೆ ಒಂದು ಸ್ಪಷ್ಟತೆ ಸಿಗಲಿ ಎನ್ನುವುದು ನನ್ನ ಉದ್ದೇಶವಾಗಿತ್ತು. ವೃತ್ತಿಪರ ಜತೆ ಸ್ವಲ್ಪ ಕಿಲಾಡಿಯೂ ಆಗಿರುವ ಸುದೀಪ್ತೊ ನನ್ನ ಸ್ನೇಹಿತ. ಆತನ ವರದಿಯಲ್ಲಿ ದುರುದ್ದೇಶವಿತ್ತೆಂದು ಹೇಳುವುದು ಖಂಡಿತ ನನ್ನ ಉದ್ದೇಶ ಆಗಿರಲಿಲ್ಲ. ಕನ್ನಡ ಓದು-ಬರಹ ಬಲ್ಲವರು ತಾಳ್ಮೆಯಿಂದ ನಾನು ಬರೆದುದನ್ನು ಓದಿದರೆ ಅದು ಅರ್ಥವಾಗಬಹುದು, ಉಳಿದವರ ಬಗ್ಗೆ ನಾನು ಹೇಳಲಾರೆ.
ನಾನು ಬಳಸಿದ ‘ಹಳವಂಡ’ ಶಬ್ದವೇ ಮಾನಹಾನಿಕರ ಎಂದು ಯಾವನೋ ಒಬ್ಬ ನನ್ನ ಜತೆ ವಾದ ಮಾಡತೊಡಗಿದ್ದ. ‘ನೋಡೋ ಮಾರಾಯಾ, ಹತ್ತು ರೂಪಾಯಿ ಖರ್ಚು ಮಾಡಿ ಕನ್ನಡ ರತ್ನಕೋಶ ಕೊಂಡು ಶಬ್ದದ ಅರ್ಥ ನೋಡು. ಆ ಶಬ್ದದಲ್ಲಿ ಯಾವುದೇ ಮಾನಹಾನಿಕರವಾದುದು ಇಲ್ಲ’ ಎಂದು ಮನವರಿಕೆ ಮಾಡಿಕೊಡುವಲ್ಲಿ ನಾನು ಸುಸ್ತಾಗಿದ್ದೆ. ಇದು ನಮ್ಮಲ್ಲಿ ಕೆಲವರ ಸಮಸ್ಯೆ.ಓದಿಕೊಳ್ಳದೆ, ಅನುಭವವನ್ನು ಗಳಿಸಿಕೊಳ್ಳದೆ ಬಹುಬೇಗ ಹಿರಿಯರಾಗುವ ತವಕ. ಈ ವಿಷಯವನ್ನು ಬೆಳೆಸುವ ಉದ್ದೇಶ ನನಗಿರಲಿಲ್ಲ. ಅಲ್ಲಲ್ಲಿ ವಿಶ್ಲೇಷಣೆ, ಟೀಕೆ-ಟಿಪ್ಪಣಿಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಮಾತುಗಳನ್ನು ಹೇಳಬೇಕಾಗಿದೆ.
ಮೊದಲನೆಯದಾಗಿ, ದಾಖಲೆಗಳಿಲ್ಲದೆ ಲೀಕ್ ಮಾಡುತ್ತಿದ್ದಾರೆ ಎನ್ನುವುದೇ ತಪ್ಪು. ಕೊಡದಲ್ಲಿ ಏನಾದರೂ ತುಂಬಿದ್ದರೆ ಸೋರಬಹುದೇ ಹೊರತು ಖಾಲಿ ಕೊಡ ಸೋರಲಾರದು. ಆದ್ದರಿಂದ ಲೀಕ್ ಎಂದರೆ ಜತೆಯಲ್ಲಿ ದಾಖಲೆಗಳಿವೆ ಎಂದರ್ಥ. ದಾಖಲೆರಹಿತ ಸುದ್ದಿ ಊಹಾಪೋಹ, ವದಂತಿ ಆಗುತ್ತದೆ. ಇದು ಲೀಕ್ ಗೂ ಊಹಾಪೋಹಕ್ಕೂ ಇರುವ ವ್ಯತ್ಯಾಸ.
ಎರಡನೆಯದಾಗಿ, ಲೀಕ್ ಮಾಡುವವರು ಸದಾ ದಾಖಲೆಗಳನ್ನು ಕೊಡುವುದಿಲ್ಲ. ನಾನೇ ಎಷ್ಟೋ ಬಾರಿ ಕೈಯಲ್ಲಿ ದಾಖಲೆಗಳನ್ನು ಇಟ್ಟುಕೊಳ್ಳದೆ ಬರೆದಿದ್ದೇನೆ, ಯಾಕೆಂದರೆ ಆ ದಾಖಲೆಗಳನ್ನು ನನ್ನ ಕಣ್ಣಲ್ಲಿ ನೋಡಿದ್ದೇನೆ. ದಾಖಲೆಗಳನ್ನು ತೋರಿಸಿದವ ನನ್ನ ನಂಬಿಕಸ್ತ ವ್ಯಕ್ತಿ ಆಗಿರುವ ಕಾರಣ ನಾನು ಅವನನ್ನು ನಂಬಿದ್ದೇನೆ, ಅವನು ನನ್ನನ್ನು ನಂಬಿರುತ್ತಾನೆ ಅಷ್ಟೆ. ಅಗತ್ಯ ಬಿದ್ದರೆ ನಾನು ನಂಬಿದ ವ್ಯಕ್ತಿ ದಾಖಲೆಗಳನ್ನು ಒದಗಿಸಬಲ್ಲ ಎಂಬ ಭರವಸೆ ಅದು. ಈ ಕಾರಣದಿಂದಾಗಿಯೇ ಇಲ್ಲಿಯ ವರೆಗೆ ನನ್ನ ವಿರುದ್ಧ ಯಾವುದೇ ಮಾನಹಾನಿ ಮೊಕದ್ದಮೆಗಳಿಲ್ಲ.
ಆದ್ದರಿಂದ ತಾನು ಬರೆಯಲಾರದ ವರದಿಗಳನ್ನು ಇನ್ನೊಬ್ಬರು ಯಾರೋ ಬರೆದ ಮಾತ್ರಕ್ಕೆ ಅವರಲ್ಲಿ ಯಾವುದೇ ದಾಖಲೆಗಳಿಲ್ಲದೆ ಕತೆ ಹೆಣೆಯುತ್ತಾರೆ ಎಂದು ಹೀಗಳೆಯುವುದು ವೃತ್ತಿಮಾತ್ಸರ್ಯ, ಇಲ್ಲವೆ ಹತಾಶೆ ಆಗುತ್ತದೆ ಅಷ್ಟೆ. ದಾಖಲೆಗಳಿಲ್ಲದೆ ಯಾರಾದರೂ ಬರೆದರೆ ಅದಕ್ಕಾಗಿ ಕಾನೂನಿನಲ್ಲಿ ಏನು ಶಿಕ್ಷೆ ಇದೆಯೋ ಅದನ್ನು ಅನುಭವಿಸುತ್ತಾರೆ .ನಾನು ಹಿಂದೆಯೇ ಹೇಳಿದ ಹಾಗೆ ಸಮಸ್ಯೆ ಲೀಕ್ ನದ್ದಲ್ಲ, ಅದರಿಂದ ಪಡೆವ ಸುದ್ದಿಯ ಸತ್ಯಾಸತ್ಯತೆಯನ್ನು ತೀರ್ಮಾನಿಸುವ ಪತ್ರಕರ್ತನ ವಿವೇಚನೆಯದ್ದು.
ಮೂರನೆಯದಾಗಿ, ಸರ್ಕಾರಿ ಅಧಿಕಾರಿಗಳು ಮುಖ್ಯವಾಗಿ ಪೊಲೀಸರು ಇಂತಹ ಊಹಾಪೋಹಗಳನ್ನು ಹಬ್ಬಿಸುವುದನ್ನು ಯಾರೂ ಅಲ್ಲಗಳೆಯಲಾರರು. ಇದು ಪತ್ರಕರ್ತರೆಲ್ಲರ ಅನುಭವ. ಎರಡು ವರ್ಷಗಳ ಹಿಂದೆ ಕೆಲವು ಪತ್ರಕರ್ತರ ಕೊಲೆ ಸಂಚಿನ ಆರೋಪದ ಮೇಲೆ ಡೆಕ್ಕನ್ ಹೆರಾಲ್ಡ್ ನ ಪತ್ರಕರ್ತ ಸಿದ್ದಿಕಿ ಮತ್ತು ಕೆಲವರನ್ನು ಪೊಲೀಸರು ಬಂಧಿಸಿದ್ದರು. ಅದೇ ರೀತಿ ದೆಹಲಿ ಪೊಲೀಸರು ಇಫ್ತಿಕರ್ ಗಿಲಾನಿ ಎಂಬ ಪತ್ರಕರ್ತನನ್ನು ಪೊಲೀಸರು ಸುಳ್ಳು ಮೊಕದ್ದಮೆಯಲ್ಲಿ ಬಂಧಿಸಿ ಕೊನೆಗೆ ಬಿಡುಗಡೆ ಮಾಡಿದ್ದ ಪ್ರಕರಣವನ್ನು ಉಲ್ಲೇಖಿಸಿ ಆ ಕಾಲದಲ್ಲಿ ನಾನೊಂದು ಅಂಕಣವನ್ನು ಬರೆದಿದ್ದೆ. (‘’ಊಹಾಪೋಹದ ಮಹಾಪೂರದಲ್ಲಿ ಕೊಚ್ಚಿ ಹೋಗುವ ಮುನ್ನ’’)
ಪತ್ರಕರ್ತರ ಅನುಭವದಲ್ಲಿ ಇವೆಲ್ಲ ಸಾಮಾನ್ಯ. ಹೀಗೆಂದ ಮಾತ್ರಕ್ಕೆ ಲೀಕ್ ಗಳೆಲ್ಲವೂ ಉರಿಯುವ ಕೆಂಡ, ಅದನ್ನು ಮುಟ್ಟಲು ಹೋಗಲೇಬಾರದು ಎಂದು ತೀರ್ಮಾನಿಸಿದರೆ ಪತ್ರಕರ್ತ ಸುದ್ದಿಯ ಹಸಿವಿನಿಂದ ಸಾಯಬೇಕಾಗುತ್ತದೆ. ಅದೇ ರೀತಿ ಹಸಿವಾಗುತ್ತದೆಯೆಂದು ಕೈಗೆ ಸಿಕ್ಕಿದ್ದನ್ನೆಲ್ಲವನ್ನೂ ತಿನ್ನಲಿಕ್ಕಾಗುವುದಿಲ್ಲವಲ್ಲಾ? ಬಿಜೆಪಿ ಸರ್ಕಾರದ ಕಾಲದಲ್ಲಿ ಬೆಂಗಳೂರಿನಿಂದ ಮಂಗಳೂರಿನ ವರೆಗಿನ ಹಲವಾರು ಪತ್ರಕರ್ತರಿಗೆ ದುಡ್ಡು ಹಂಚಲಾಗುತ್ತಿದೆ ಎಂಬ ಊಹಾಪೋಹ ಹುಟ್ಟಿಕೊಂಡಿತ್ತು. ಇಂತಹ ಪತ್ರಕರ್ತರ ಹೆಸರುಗಳನ್ನೊಳಗೊಂಡ ಪತ್ರವನ್ನು ಯಾರೋ ನನಗೂ ಪೋಸ್ಟ್ ಮಾಡಿದ್ದರು. ಆದರೆ ಅದೊಂದು ಅನಾಮಧೇಯ ಪತ್ರವಾಗಿದ್ದ ಕಾರಣ ಬಾಯಿಮಾತಿನಲ್ಲಿ ಎಲ್ಲರೂ ಸುದ್ದಿ ಪ್ರಸಾರ ಮಾಡಿದರೇ ಹೊರತು ಹೆಸರುಗಳನ್ನು ಯಾರೂ ಬರೆಯಲಿಲ್ಲ. ಇದಿಷ್ಟನ್ನೇ ನಾನು ಹೇಳಲು ಹೊರಟಿದ್ದು.
ನಾಲ್ಕನೆಯದಾಗಿ, ಸುದೀಪ್ತೋ ವರದಿಯಲ್ಲಿ ನನಗಿದ್ದ ಏಕೈಕ ಆಕ್ಷೇಪ ಅದು ಸಮತೂಕದ್ದಾಗಿರಲಿಲ್ಲ ಎನ್ನುವುದು. ಡಿ.ಕೆ.ರವಿ ಸಾವಿನ ಪ್ರಕರಣದಲ್ಲಿ ಎರಡು ಥಿಯರಿಗಳು ಹರಿದಾಡುತ್ತಿವೆ. ಒಂದು ಆತ್ಮಹತ್ಯೆ, ಇನ್ನೊಂದು ಕೊಲೆ. ಆತ್ಮಹತ್ಯೆ ಎಂದು ಸಾಧಿಸಲು ದಾಖಲೆಗಳನ್ನು ನೀಡದೆ ಬಾಯಿ ಮಾತಿನಲ್ಲಿ ಸುದ್ದಿಗಳನ್ನು ಹರಡುತ್ತಿರುವವರು ಪೊಲೀಸರು ಎನ್ನುವುದು ಸುದೀಪ್ತೋ ಸೇರಿದಂತೆ ಹಲವು ಪತ್ರಕರ್ತರ ಆರೋಪ. ಇದು ನಿಜವೂ ಇರಬಹುದು. ಇದೇ ರೀತಿ ಕೊಲೆ ಎಂದು ಸಾಧಿಸಲು ಯಾವುದೇ ದಾಖಲೆಗಳಿಲ್ಲದೆ ಸುದ್ದಿಗಳನ್ನು ಬಿತ್ತುತ್ತಿರುವ ಇನ್ನೊಂದು ಗುಂಪೂ ಇದೆ. ‘’ರವಿ ಮೈಮೇಲೆ ಗಾಯಗಳಿದ್ದವು’;, ಮಂಪರು ಭರಿಸುವ ಔಷಧಿ ಕೊಟ್ಟಿದ್ದಾರೆ, ಮೂಗು ಕೆಂಪಾಗಿತ್ತು, ದೇಹದಲ್ಲಿ ಸಯನೈಡ್ ಪತ್ತೆಯಾಗಿದೆ ಇಂತಹ ನೂರಾರು ಊಹಾಪೋಹಗಳು ಇದರಲ್ಲಿ ಸೇರಿವೆ. ಮೊದಲನೆಯ ಗುಂಪಿನ ಊಹಾಪೋಹಗಳನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿದ್ದ ಸುದೀಪ್ತೊ, ಜತೆಗೆ ಎರಡನೆ ಗುಂಪಿನ ಊಹಾಪೋಹಗಳನ್ನೂ ಉಲ್ಲೇಖಿಸಿದ್ದರೆ ಅವರ ವರದಿ ಪರಿಪೂರ್ಣವಾಗುತ್ತಿತ್ತು ಎಂದು ನನ್ನ ಭಾವನೆ.
ಕೊನೆಯದಾಗಿ, ‘’... ಸುದೀಪ್ತೋ ದಿನೇಶ್ ಅಮಿನ್ ಮಟ್ಟು ಜತೆ ಮಾತನಾಡಿದ್ದಾನೆ. ಸ್ಪಷ್ಟನೆ ನೀಡಲು ಲಭ್ಯವಿಲ್ಲದ ಸತ್ತಿರೋ ವ್ಯಕ್ತಿ ವಿರುದ್ಧ ಮಾನಹಾನಿ ಸುದ್ದಿ ಮಾಡಲು ಸಾಧ್ಯ ಇಲ್ಲ ಎಂದು ಸುದೀಪ್ತೊ, ದಿನೇಶ್ ಅಮಿನ್ ಮಟ್ಟುಗೆ ಸ್ಪಷ್ಟೀಕರಣ ನೀಡಿದ್ದಾನೆ. ಈ ಸ್ಪಷ್ಟೀಕರಣದ ನಂತರವೂ ಸುದೀಪ್ತೋ ವಿರುದ್ಧ ಫೇಸ್ ಬುಕ್ ನಲ್ಲಿ ಹೀಗಳೆದದ್ದು ಸರಿಯಲ್ಲ ...’’ ಎಂದು ನವೀನ್ ಸೂರಿಂಜೆ ತನ್ನ ಫೇಸ್ ಬುಕ್ ಸ್ಟೇಟಸ್ ನಲ್ಲಿ ಹೇಳಿದ್ದಾರೆ. ಸುದೀಪ್ತೋ ಪರವಾಗಿ ವಕಾಲತ್ತು ವಹಿಸಿ ಈ ರೀತಿ ತಪ್ಪು ಅಭಿಪ್ರಾಯಗಳನ್ನು ಹುಟ್ಟಿಸುವ ದರ್ದು ನವೀನ್ ಗೇನಿತ್ತೆಂದು ನನಗೆ ಗೊತ್ತಾಗುತ್ತಿಲ್ಲ. ಸುದೀಪ್ತೊ ಬಯಸಿದರೆ ನಮ್ಮ ನಡುವೆ ನಡೆದ ಸಂಭಾಷಣೆಯನ್ನು ನಾನೇ ಬಹಿರಂಗಗೊಳಿಸುವೆ. ನಮ್ಮ ನಡುವೆ ಮೆಸೆಜ್ ಗಳ ವಿನಿಮಯವೂ ಆಗಿದೆ,ಅದನ್ನೂ ತಿಳಿಸುವೆ. ಸುದೀಪ್ತೊ ಕಾಲ್ ಡಿಟೇಲ್ ಗಳನ್ನು ನನಗೆ ವಾಟ್ಸ್ ಅಪ್ ನಲ್ಲಿ ಕಳಿಸಿ, ದೃಡೀಕರಿಸುವಂತೆ ಕೇಳಿದ್ದರು. ನಾನು ನಿರಾಕರಿಸಿದ್ದೆ.
ಸುದೀಪ್ತೋ ಸೇರಿದಂತೆ ಯಾರಾದಾರೂ ಒಬ್ಬ ಪತ್ರಕರ್ತ ಮುಂದೆ ಬಂದು ‘ದಿನೇಶ್ ಅವರು ದಾಖಲೆಗಳನ್ನು ನೀಡದೆ ಊಹಾಪೋಹಗಳ ಆಧಾರದಲ್ಲಿ ಸುದ್ದಿ ಬರೆಯಲು ಹೇಳಿದ್ದಾರೆ’’ ಎಂದು ತಿಳಿಸಿದರೆ ಇಲ್ಲವೆ ಈ ಆರೋಪವನ್ನು ನವೀನ್ ಸಾಬೀತುಪಡಿಸಿದರೆ ಆ ಕ್ಷಣದಿಂದ ನಾನು ಬರವಣಿಗೆಯನ್ನು ನಿಲ್ಲಿಸಿಬಿಡುತ್ತೇನೆ. ನಾನು ಪತ್ರಕರ್ತನಾಗಿ ಸಕ್ರಿಯನಾಗಿದ್ದಾಗಲೂ ನನ್ನ ಮಾಲೀಕರಿಗೆ ನನ್ನನ್ನು ಮಾರಿಕೊಂಡಿರಲಿಲ್ಲ, ಈಗಲೂ ಸರ್ಕಾರಕ್ಕೆ ನನ್ನನ್ನು ಮಾರಿಕೊಂಡಿಲ್ಲ.